ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದ ಶಾಸಕರ ಆತ್ಮಗೌರವ ಕಾಪಾಡುವಲ್ಲಿ ಸಿದ್ದರಾಮಯ್ಯ ವಿಫಲ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಟೀಕೆಗೆ ಅನರ್ಹ ಶಾಸಕ ಡಾ.ಕೆ.ಸುಧಾಕರ್ ತಿರುಗೇಟು
Last Updated 1 ನವೆಂಬರ್ 2019, 13:14 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಅನರ್ಹ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಕೊಟ್ಟರೆ ತಪ್ಪೇನು? ಸಮ್ಮಿಶ್ರ ಸರ್ಕಾರದಲ್ಲಿ ನೀವೇ ಪಕ್ಷದ ನಾಯಕರಾಗಿದ್ದರೂ ಏಕೆ ಅನುದಾನ ಕೊಡಿಸಲಿಲ್ಲ? ಒಬ್ಬ ನಾಯಕರಾಗಿ ನಿಮ್ಮದೇ ಪಕ್ಷದ ಶಾಸಕರ ಆತ್ಮಗೌರವ ಕಾಪಾಡಿಕೊಳ್ಳಲು ನೀವು ವಿಫಲರಾಗಿದ್ದಿರಿ’ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

‘ಅನರ್ಹ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡಿದ್ದೇ ಈ ಸರ್ಕಾರದ ಸಾಧನೆ’ ಎಂಬ ಸಿದ್ದರಾಮಯ್ಯ ಅವರ ಟೀಕೆ ಕುರಿತಂತೆ ನಗರದಲ್ಲಿ ಶುಕ್ರವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾವ ನೋವಿನಿಂದ ಶಾಸಕರು ಪಕ್ಷದಿಂದ ಆಚೆ ಹೋಗಿದ್ದಾರೆ ಎನ್ನುವುದು ಕೆಲವರು ಇನ್ನೂ ಅರ್ಥ ಮಾಡಿಕೊಳ್ಳದೆ ಹೋದರೆ, ಆ ಬಗ್ಗೆ ಹೇಳಲು ನನ್ನಲ್ಲಿ ಪದಗಳಿಲ್ಲ. ಎಷ್ಟು ನೋವಿನಿಂದ ಶಾಸಕರು ಹೊರಗೆ ಹೋಗಿದ್ದಾರೆ ಎನ್ನುವುದು ಅವರಿಗಷ್ಟೇ ಗೊತ್ತು’ ಎಂದು ಹೇಳಿದರು.

‘ಅನರ್ಹ ಶಾಸಕರ ಅನರ್ಹತೆ ಬಗ್ಗೆ ಕೆಲ ನಾಯಕರು ಕೇವಲವಾಗಿ ಮಾತನಾಡುತ್ತಿದ್ದಾರೆ. ಅನರ್ಹತೆ ಪ್ರಶ್ನಿಸಿಯೇ ನಾವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದೇವೆ. ಮುಂದಿನ ವಾರ ತೀರ್ಪು ಬರುತ್ತದೆ. ಆಗ ಅನರ್ಹತೆ ಏಕೆ ಆಯಿತು. ಯಾರು ಇದರ ಹಿಂದೆ ಇದ್ದರು ಎನ್ನುವುದು ಇಡೀ ರಾಜ್ಯದ ಜನರು ಮುಂದೆ ನಾನೇ ಇಡುತ್ತೇನೆ’ ಎಂದು ತಿಳಿಸಿದರು.

‘ಕೆಲ ನಾಯಕರು ಕೇವಲವಾಗಿ ಮಾತನಾಡುವುದು ಅಭ್ಯಾಸ ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬ ರಾಜಕಾರಣಿ ಸೋಲು ಗೆಲುವು ಕಂಡಿದ್ದಾರೆ ಎನ್ನುವುದು ಅರ್ಥ ಮಾಡಿಕೊಳ್ಳಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT