ಬುಧವಾರ, ಅಕ್ಟೋಬರ್ 27, 2021
21 °C
ಪಿತೃಪಕ್ಷ ಆರಂಭದಿಂದಲೂ ರೈತರಿಗೆ ಸಂಕಷ್ಟ: ಹೊಲಗಳಲ್ಲಿ ಅರಳಿವೆ ಹೂಗಳು

ಕುಸಿದ ಬೆಲೆ: ಹೂ ಬೆಳೆಗಾರರು ಕಂಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯ ಹಳ್ಳಿಗಳತ್ತ ಮುಖ ಮಾಡಿದರೆ ಬಟನ್ಸ್, ಗುಲಾಬಿ, ಕನಕಾಂಬರ, ಚೆಂಡು ಸೇರಿದಂತೆ ಬಗೆ ಬಗೆಯ ಹೂಗಳು ಹೊಲಗಳಲ್ಲಿ ನಳನಳಿಸುತ್ತಿವೆ. ರೈತರನ್ನು ಮಾತಿಗೆ ಎಳೆದರೆ ‘ಬೆಲೆ ಇಲ್ಲ ಸ್ವಾಮಿ. ಹೂ ಬಿಡಿಸುವ ಕೂಲಿಯೂ ದೊರೆಯುವುದಿಲ್ಲ’ ಎಂದು ಬೇಸರದಿಂದ ನುಡಿಯುತ್ತಾರೆ.

ಚಿಕ್ಕಬಳ್ಳಾಪುರ–ಪೆರೇಸಂದ್ರ ರಸ್ತೆಯ ಎರಡೂ ಬದಿಯ ಹೊಲಗಳಲ್ಲಿ ಕಾಣುವ ಹೂವಿನ ತೋಟಗಳೇ ಬೆಲೆ ಇಲ್ಲದ್ದನ್ನು ಸಾರಿ ಹೇಳುತ್ತಿವೆ. ಸಮೃದ್ಧವಾಗಿ ಬೆಳೆದಿರುವ ಹೂಗಳನ್ನು ಬೆಲೆ ಇಲ್ಲದ ಕಾರಣ ರೈತರು ಕಟಾವು ಮಾಡುತ್ತಲೇ ಇಲ್ಲ. ಮಾರಾಟಕ್ಕೆ ತಂದ ಹೂಗಳನ್ನು ಮಾರುಕಟ್ಟೆಯಲ್ಲಿಯೇ ಎಸೆಯುತ್ತಿದ್ದಾರೆ. ತೀವ್ರ ಬೆಲೆ ಕುಸಿತದಿಂದ ಗುಲಾಬಿ, ಸೇವಂತಿಗೆ ಮತ್ತು ಚೆಂಡು ಹೂ ಬೆಳೆಗಾರರು ತತ್ತರಿಸಿದ್ದಾರೆ. ಒಂದು ಕೆ.ಜಿ ಹೂ ಬೆಲೆ ಕನಿಷ್ಠ ₹ 5ಕ್ಕೆ ಇಳಿದಿದೆ.

ಜಿಲ್ಲೆಯಲ್ಲಿ ಬಹಳಷ್ಟು ರೈತರು ಹೂ ಬೆಳೆಯುತ್ತಿದ್ದಾರೆ. ಹೂವೇ ರೈತರ  ಆರ್ಥಿಕತೆ ಮೂಲವಾಗಿದೆ. ದಿನದಿಂದ ದಿನಕ್ಕೆ ಬೆಳೆಗಾರರ ಸಂಖ್ಯೆ ಸಹ ಹೆಚ್ಚುತ್ತಿದೆ. ತಿಂಗಳ ಹಿಂದೆ ಸತತ ಮಳೆಯಿಂದ ಹೂವಿನ ಬೆಳೆಗಳು ನಾನಾ ರೋಗಗಳಿಗೆ ತುತ್ತಾಗಿದ್ದದ್ದವು. ‌ಶ್ರಾವಣ ಮಾಸದಲ್ಲಿ ಸರಣಿ ಹಬ್ಬಗಳ ಕಾರಣ ಹೂವಿಗೆ ಬೆಲೆ ಹೆಚ್ಚಿತು. ಒಂದಿಷ್ಟು ಆದಾಯವನ್ನು ಕಂಡರು. ಆದರೆ, ಪಿತೃಪಕ್ಷ ಆರಂಭವಾದಾಗಿನಿಂದ ಮಾರುಕಟ್ಟೆಯಲ್ಲಿ ಹೂ ಕೇಳುವವರೇ ಇಲ್ಲ.

ನಿತ್ಯ ಬಾರಿ ಪ್ರಮಾಣದಲ್ಲಿ ಮಾರುಕಟ್ಟೆಗೆ ಹೂ ಬರುತ್ತಿದೆ. ಆದರೆ, ಖರೀದಿಗೆ ವ್ಯಾಪಾರಿಗಳು ಮುಂದಾಗುತ್ತಿಲ್ಲ. ಕೆಲವು ರೈತರು ಗೊಬ್ಬರದ ಗುಂಡಿಗೆ ಹೂಗಳನ್ನು ಎಸೆಯುತ್ತಿದ್ದಾರೆ. ಚಿಕ್ಕಬಳ್ಳಾಪುರದ ಕೆ.ವಿ. ಕ್ಯಾಂಪಸ್ ಬಳಿಯ ಹೂವಿನ ತಾತ್ಕಾಲಿಕ ಮಾರುಕಟ್ಟೆಗೆ ಕಾಲಿಟ್ಟರೆ ರೈತರು ರಾಶಿ ರಾಶಿ ಹೂಗಳನ್ನು ಎಸೆದಿರುವುದು ಕಂಡುಬರುತ್ತದೆ.  

ಪಿತೃಪಕ್ಷ ಆರಂಭವಾಗುತ್ತಿದ್ದಂತೆಯೇ ಶುಭ ಕಾರ್ಯಗಳಿಗೆ ಕಡಿವಾಣ ಬಿದ್ದಿದೆ. ಹೀಗಾಗಿ, ಹೂವಿಗೆ ಬೇಡಿಕೆ ಕುಸಿದಿದೆ. ಮಾರಾಟಕ್ಕೆ ಕೊಂಡೊಯ್ದ ಹೂವನ್ನು ಮಾರುಕಟ್ಟೆಯಲ್ಲಿಯೇ ರೈತರು ಬಿಟ್ಟು ಬರುತ್ತಿದ್ದಾರೆ. 

ನಗರದ ಹೂವಿನ ಮಾರುಕಟ್ಟೆಯಲ್ಲಿ 1 ಕೆ.ಜಿ ಚೆಂಡು ಹೂ, ಸಣ್ಣ ಗುಲಾಬಿ ಬೆಲೆ ₹ 5, ಸೇವಂತಿಗೆ 1 ಕೆ.ಜಿಗೆ ₹ 10 ಇದೆ. ಹೂ ಬೆಳೆಯಲು ಹಾಕಿದ ಬಂಡವಾಳವಿರಲಿ ಹೂ ಕೀಳಲು ಕೊಡಬೇಕಾದ ಕೂಲಿಯ ಹಣ ಕೂಡ ದೊರೆಯುತ್ತಿಲ್ಲ. ಈಗ ಸೇವಂತಿಗೆ ಹೂವಿನ ಸುಗ್ಗಿ. ಜಿಲ್ಲೆಯ ಬಹುತೇಕ ಕಡೆ ಹೇರಳವಾಗಿ ಸೇವಂತಿಗೆ ಬೆಳೆದಿದ್ದಾರೆ. ಎಕರೆಗಟ್ಟಲೇ ಪ್ರದೇಶದಲ್ಲಿ ಸೇವಂತಿ ಹೂ ಅರಳಿದೆ. ಆದರೆ, ಸೇವಂತಿಗೆ ಬೆಳೆಗಾರರು ಸಹ ನಷ್ಟ ಅನುಭವಿಸುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಹೂ ಬೆಳೆಗಾರರ ಸ್ಥಿತಿ ಕಷ್ಟಕ್ಕೆ ಸಿಲುಕಿದೆ. ಕೊರೊನಾ ಕಾರಣ ಶುಭ ಸಮಾರಂಭಗಳು ನಡೆಯಲಿಲ್ಲ. ಆಗಲೂ ಹೂ ಮಾರಾಟವಾಗಲಿಲ್ಲ. ಹಬ್ಬಗಳಿಗೂ ಕಡಿವಾಣವಿತ್ತು. ಹೀಗೆ ನಷ್ಟದ ಮೇಲೆ ನಷ್ಟವನ್ನು ಬೆಳೆಗಾರರು ಅನುಭವಿಸುತ್ತಿದ್ದಾರೆ.

ಬೀನ್ಸ್ ಸೇರಿದಂತೆ ಕೆಲವು ತರಕಾರಿಗಳ ಬೆಲೆಯೂ ಕುಸಿದಿದೆ.

ಕಷ್ಟಪಟ್ಟು ಕೃಷಿ
ಚಿಂತಾಮಣಿ:
ತಾಲ್ಲೂಕಿನಲ್ಲಿ ಹಿಂದೆಂದೂ ಕಾಣದಂತಹ ಬೆಲೆ ಕುಸಿತದಿಂದ ಹೂ ಬೆಳೆದಿರುವ ರೈತರು ಕಣ್ಣೀರು ಸುರಿಸುವಂತಾಗಿದೆ. ತಾಲ್ಲೂಕಿನಲ್ಲಿ ಯಾವುದೇ ನದಿ, ನಾಲೆಗಳಂತಹ ಶಾಶ್ವತ ನೀರಾವರಿ ಮೂಲಗಳಿಲ್ಲ. ಕೊಳವೆಬಾವಿಗಳಿಂದ ನೂರಾರು ಅಡಿ ಆಳದಿಂದ ನೀರು ಮೇಲೆತ್ತಿ ಬಯಲುಸೀಮೆಯಲ್ಲಿ ರೈತರು ಸಮೃದ್ಧವಾಗಿ ತರಕಾರಿ, ಹಣ್ಣು, ಹೂ ಬೆಳೆಯುತ್ತಾರೆ.

ತರಕಾರಿ ಮತ್ತು ಹೂ ಬೆಳೆಗಳ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ತೋಟಗಳಲ್ಲೇ ನಾಶವಾಗುತ್ತಿದೆ. ಹೂ ಮತ್ತು ತರಕಾರಿ ಬೆಲೆ ತೀವ್ರವಾಗಿ ಕುಸಿದಿವೆ. ಕೊಯ್ಲು ಮಾಡಿ ಮಾರುಕಟ್ಟೆಗೆ ಸಾಗಿಸುವ ವೆಚ್ಚ ಮರಳಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹೂ ತೋಟಗಳಲ್ಲೇ ಕೊಳೆಯುತ್ತಿವೆ. ಕೆಲವು ರೈತರು ಹೂ ಸಮೇತ ಗಿಡಗಳನ್ನು ಕಿತ್ತು ಉಳುಮೆ ಮಾಡುತ್ತಿದ್ದಾರೆ.

ಮಳೆ ಕೊರತೆ, ಅಂತರ್ಜಲ ಕುಸಿತ, ಕೂಲಿ ಕಾರ್ಮಿಕರ ಸಮಸ್ಯೆ, ವಿದ್ಯುತ್ ಸಮಸ್ಯೆ, ರಸಗೊಬ್ಬರ ಮತ್ತು ಕೀಟನಾಶಕದ ಬೆಲೆ ಏರಿಕೆಯ ನಡುವೆಯೂ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆ ಬೆಳೆದಿದ್ದರೂ ಕೈಗೆ ಬಂದ ತುತ್ತುಬಾಯಿಗೆ ಬರದಂತಾಗಿದೆ.

‘ಇತ್ತೀಚೆಗೆ ರೇಷ್ಮೆ ಬೆಳೆಯು ನೆಲಕಚ್ಚಿರುವುದರಿಂದ ರೈತರು ವಾಣಿಜ್ಯ ಬೆಳೆಗಳ ಕಡೆ ಮುಖ ಮಾಡುತ್ತಿದ್ದಾರೆ. ಸಾಲ ಮಾಡಿ ಬೆಳೆ ಬೆಳೆಯುತ್ತೇವೆ. ಸಾಲ ಹೇಗೆ ತೀರಿಸಬೇಕು. ಅದು ಬಡ್ಡಿಗೆ ಬಡ್ಡಿ ಬೆಳೆಯುತ್ತಿದೆ. ಹೀಗೆ ರೈತ ಸದಾ ಸಂಕಷ್ಟಗಳನ್ನು ಬೆನ್ನಿಗೆ ಅಂಟಿಸಿಕೊಂಡೇ ಜನಿಸಿರುತ್ತಾನೆ’ ಎನ್ನುತ್ತಾರೆ ರೈತ ಮುನಿಯಪ್ಪ.

ಕನಿಷ್ಠ ಬೆಂಬಲ ಬೆಲೆ ಅಗತ್ಯ
ಗುಡಿಬಂಡೆ:
ತಾಲ್ಲೂಕಿನಲ್ಲಿ ಸಾವಿರಾರು ಮಂದಿ ಹೂ, ತರಕಾರಿ ಬೆಳೆಗಾರರು ಇದ್ದಾರೆ. ಬೆಲೆ ಕುಸಿತ ಇವರನ್ನು ಹೈರಾಣು ಮಾಡಿದೆ. ಕೋವಿಡ್, ಲಾಕ್‌ಡೌನ್ ಕಾರಣದಿಂದ ನಷ್ಟವನ್ನು ಅನುಭವಿಸುತ್ತಿದ್ದಾರೆ. ಕೋಸು, ಹೊಕೋಸು, ಬದನೆ, ಟೊಮೆಟೊ, ಬಟನ್ಸ್, ಗುಲಾಬಿ, ಆಲೂಗಡ್ಡೆ, ಬೀನ್ಸ್, ಬೀಟ್‌ರೋಟ್, ಕೊತ್ತಂಬರಿಗೆ ಬೆಲೆ ಇಲ್ಲ.

‘ಜೀವನವೇ ಕಷ್ಟವಾಗಿದೆ. ಹೀಗೆ ಪದೇ ಪದೇ ಬೆಳೆ ಏರಿತವಾದರೆ ನಾವು ಕೃಷಿ ಮಾಡುವುದು ಹೇಗೆ. ಸರ್ಕಾರ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಬೇಕು’ ಎಂದು ರೈತರಾದ ಚೌಟತೀಮ್ಮನಹಳ್ಳಿ ನಾರಾಯಣಸ್ವಾಮಿ, ಬ್ರಾಹ್ಮಣರಹಳ್ಳಿ ಗೋವಿಂದ, ವೆಂಕಟರೆಡ್ಡಿ ಆಗ್ರಹಿಸುತ್ತಾರೆ.

ರೈತ ಕುಟುಂಬಗಳ ಪರದಾಟ
ಬಾಗೇಪಲ್ಲಿ:
ಬೆಲೆ ಕುಸಿದ ಕಾರಣ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ತರಕಾರಿಗಳನ್ನು ರೈತರು ಎಸೆದಿದ್ದಾರೆ. 

ತಾಲ್ಲೂಕಿನ ರೈತರು ಹನಿ ನೀರಾವರಿ, ತುಂತುರು ನೀರಾವರಿ ಸೇರಿದಂತೆ ಕೊಳವೆಬಾವಿಗಳನ್ನು ಆಶ್ರಯಿಸಿ ಟೊಮೆಟೊ, ‌ಕ್ಯಾರೆಟ್, ಮೂಲಂಗಿ, ಗಡ್ಡೆಕೋಸು, ಹೂಕೋಸು, ಬದನೆಕಾಯಿ,  ಬೀನ್ಸ್, ಕೊತ್ತಂಬರಿ ಸೇರಿದಂತೆ ವಿವಿಧ ತರಕಾರಿ  ಬೆಳೆದಿದ್ದಾರೆ. ಕೆಲ ರೈತರು ಸಣ್ಣಗುಲಾಬಿ‌, ಚೆಂಡು, ಕನಕಾಂಬರ ಹೂವು ಬೆಳೆಯುತ್ತಿದ್ದಾರೆ. ಆದರೆ, ಇವುಗಳಲ್ಲಿ ಬಹುತೇಕ ಬೆಳೆಗಳಿಗೆ ಬೆಲೆ ಇಲ್ಲ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಶನಿವಾರದ ಮಾರುಕಟ್ಟೆಯ ದರದಂತೆ 1 ಕ್ರೇಟ್ (14 ಕೆ.ಜಿ) ಟೊಮೆಟೊ ಬೆಲೆ ₹ 400 ಇತ್ತು. ಒಂದು ಕೆ.ಜಿ ಕ್ಯಾರೆಟ್ ಬೆಲೆ ₹ 10, ಮೂಲಂಗಿ ₹ 10, ಈರುಳ್ಳಿ ₹ 23, ಬದನೆ ₹ 4, ಕ್ಯಾಪ್ಸಿಕಂ ₹ 12, ಹೂಕೋಸು ಒಂದಕ್ಕೆ ₹ 9, ಗಡ್ಡೆಕೋಸು ₹ 12, ಬೀಟ್‌ರೂಟ್ ₹ 10 ಇತ್ತು. ಇಷ್ಟು ಬೆಲೆ ಯಾವುದಕ್ಕೂ ಸಾಲದು ಎನ್ನುತ್ತಿದ್ದಾರೆ ರೈತರು.

ಬ್ಯಾಂಕುಗಳಿಂದ ಹಾಗೂ ಕೈ ಬದಲಿ ಸಾಲದಿಂದ ಬಹಳಷ್ಟು ರೈತರು ಬೆಳೆಗಳನ್ನು ಬೆಳೆದಿದ್ದಾರೆ. ಈಗ ಸೂಕ್ತ ಬೆಲೆ ಇಲ್ಲದ ಕಾರಣ ಸಾಲ ತೀರಿಸುವುದೇ ದೊಡ್ಡ ತಲೆನೋವಾಗಿದೆ. ಅತಿ ಕಡಿಮೆಗೆ ತರಕಾರಿಗಳು ಮಾರಾಟ ಆಗುತ್ತಿರುವುದರಿಂದ ರೈತರು ಎಪಿಎಂಸಿಯ ಆವರಣದಲ್ಲಿಯೇ ತರಕಾರಿಗಳ ಮೂಟೆಗಳನ್ನು ರಾಶಿಗಟ್ಟಲೇ ಬೀಸಾಡುತ್ತಿದ್ದಾರೆ. ಗ್ರಾಮಗಳ ರಸ್ತೆಗಳ ಪಕ್ಕದಲ್ಲಿಯೂ ಈ ಚಿತ್ರಣ ಕಾಣಬಹುದು. 

‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ತರಕಾರಿ, ಹೂ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು’ ಎಂದು ಗೊರ್ತಪಲ್ಲಿ ರೈತ ವೆಂಕಟೇಶ್ ಮನವಿ ಮಾಡುತ್ತಾರೆ.

ದೇವಸ್ಥಾನ, ಆಶ್ರಮಗಳಿಗೆ ದಾನ
ಗೌರಿಬಿದನೂರು:
ಹೂವು ಹಾಗೂ ತರಕಾರಿ ಬೆಳೆಯುವ ರೈತರು ಬೆಳೆಯನ್ನು ಬಿತ್ತನೆ ಮಾಡುವ ಮುನ್ನವೇ ಪರಿಚಯಸ್ಥ ವ್ಯಾಪಾರಿಗಳಿಂದ ಜಮೀನು ಉಳುಮೆ, ಬಿತ್ತನೆಬೀಜ, ರಸಗೊಬ್ಬರ ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ಮುಂಗಡವಾಗಿ ಹಣ ಪಡೆದುಕೊಂಡಿರುತ್ತಾರೆ.

ಉತ್ತಮ ಇಳುವರಿ ಹಾಗೂ ಬೆಲೆ ಇರುವ ವೇಳೆ ವ್ಯಾಪಾರಸ್ಥರು ಮತ್ತು ರೈತರ ನಡುವೆ ಉತ್ತಮ ವ್ಯಾವಹಾರಿಕ ಬಾಂಧವ್ಯದ ಜತೆಗೆ ಇಬ್ಬರೂ ಸಂತೋಷದಿಂದ ಇರುತ್ತಾರೆ. ಆದರೆ, ಬೆಲೆ ಕುಸಿತ ಇಬ್ಬರನ್ನೂ ಕಂಗಾಲುಗೊಳಿಸಿದೆ.

ಒಂದೆಡೆ ಗ್ರಾಹಕರಿಲ್ಲದೆ ವ್ಯಾಪಾರಿಗಳು ಚಿಂತೆಗೀಡಾಗಿದ್ದಾರೆ. ಮತ್ತೊಂದೆಡೆ ಬೆಳೆದು ನಿಂತ ಫಸಲನ್ನು ಏನು‌ ಮಾಡುವುದು ಎಂಬ ಚಿಂತೆಯಲ್ಲಿ ರೈತರು ದಿನದೂಡಬೇಕಾಗಿದೆ. ಕೆಲವು ವ್ಯಾಪಾರಿಗಳು ಖರೀದಿಸಿದ ಹೂ, ತರಕಾರಿಯನ್ನು ದೇವಸ್ಥಾನ, ವಸತಿ‌ ನಿಲಯಗಳು, ಅನಾಥಾಶ್ರಮಗಳಿಗೆ ದಾನ ಮಾಡುತ್ತಿದ್ದಾರೆ. ರೈತರು ಅನ್ಯ ಮಾರ್ಗವಿಲ್ಲದೆ ಯಾರಾದರೂ ಹೂ, ತರಕಾರಿಗಳನ್ನು ತೋಟಗಳಿಂದ ಕೊಯ್ದುಕೊಂಡು ಹೋದರೂ ಸುಮ್ಮನೆ ಇದ್ದಾರೆ.

ಫಸಲು ಉತ್ತಮವಿದೆ; ಬೆಲೆ ಇಲ್ಲ
ಒಂದು ಎಕರೆಯಲ್ಲಿ ಗುಲಾಬಿ ಬೆಳೆದಿದ್ದೆ. ಉತ್ತಮವಾಗಿ ಬೆಳೆ ಬಂದಿದೆ. ಪೂರ್ಣವಾಗಿ ಹೂ ಕೊಯ್ಲಿಗೆ ಬರುವ ಸಮಯಕ್ಕೆ ಒಂದು ಕೆ.ಜಿ ಬೆಲೆ ₹ 5 ಇದೆ. ಇಷ್ಟಕ್ಕೂ ಕೇಳುವವರಿಲ್ಲ. ಗಣೇಶ ಹಬ್ಬವನ್ನೂ ಸಹ ಹೆಚ್ಚಾಗಿ ಆಚರಿಸದಿರುವುದು, ಪಿತೃಪಕ್ಷಗಳು ಇರುವುದರಿಂದ ಹೂ ಕೇಳುವವರೇ ಇಲ್ಲ. ಚಿಕ್ಕಬಳ್ಳಾಪುರದ ಮಾರುಕಟ್ಟೆಗೆ ಸಾಗಿಸಿದೆ. ಅಲ್ಲೂ ಮಾರಾಟವಾಗಲಿಲ್ಲ.
-ನಾರಾಯಣಪ್ಪ, ರೈತ, ಪೆರಮಾಚನಹಳ್ಳಿ, ಚಿಂತಾಮಣಿ ತಾ.

*

ಭಾರಿ ಕುಸಿತ
ಡೆಕೋರೇಷನ್ ಬೇಡಿಕೆಯೇ ಇಲ್ಲ. ಕೊರೊನಾ ಹೊಡೆತವೂ ಕಾರಣವಾಗಿದೆ. ಕಳೆದ 20 ವರ್ಷಗಳಿಂದ ಹೂವಿನ ವ್ಯಾಪಾರ ಮಾಡುತ್ತಿದ್ದೇನೆ. ಈ ಮಟ್ಟದ ಬೆಲೆ ಕುಸಿತವನ್ನು ಕಂಡೇ ಇಲ್ಲ.
-ಅಕ್ರಂಪಾಷಾ, ಹೂ  ವ್ಯಾಪಾರಿ, ಚಿಂತಾಮಣಿ.

*

ತರಕಾರಿ ಬೆಲೆಗಳು ಸ್ಥಿರವಾಗಿಲ್ಲ. ಪದೇ ಪದೇ ಏರಿಳಿತ ಕಾಣುತ್ತವೆ. ಕನಿಷ್ಠ ಬೆಲೆ ಇದ್ದರೂ ಸುಧಾರಿಸಿಕೊಳ್ಳಬಹುದು. ಆದರೆ, ಇದೀಗ ತೀವ್ರವಾಗಿ ಬೆಲೆ ಕುಸಿದಿದೆ. ತರಕಾರಿ ಸಾಗಿಸುವುದು, ಕಾರ್ಮಿಕರ ಕೂಲಿಯೂ ವಾಪಸ್ ಬರುವುದಿಲ್ಲ. ಸಾಲ ಮಾಡಿ ಬೆಳೆ ಬೆಳೆಯುತ್ತೇವೆ. ಹೀಗೆ ಆದರೆ ರೈತರು ಬದುಕುವುದು ಹೇಗೆ.
-ಶಿವಾರೆಡ್ಡಿ, ರೈತ ಬೋಯಿಪಲ್ಲಿ, ಬಾಗೇಪಲ್ಲಿ ತಾ.

____

-ಡಿ.ಎಂ. ಕುರ್ಕೆ ಪ್ರಶಾಂತ್, ಎಂ. ರಾಮಕೃಷ್ಣಪ್ಪ, ಪಿ.ಎಸ್. ರಾಜೇಶ್, ಜೆ. ವೆಂಕಟರಾಯಪ್ಪ, ಎ.ಎಸ್. ಜಗನ್ನಾಥ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು