ಸಹಾಯಕ್ಕೆ ಎದುರು ನೋಡುತ್ತಿರುವ ಕುಟುಂಬ

7
ಅಂಗವೈಕಲ್ಯದಿಂದ ಬಳಲುತ್ತಿರುವ ಬಡ ಸಂಸಾರ, ಶಸ್ತ್ರಚಿಕಿತ್ಸೆ ಬಳಿಕ ವರ್ಷಗಟ್ಟಲೇ ಹಾಸಿಗೆ ಹಿಡಿದ ಹಿರಿ ಮಗಳು, ಮತ್ತೊಂದು ಶಸ್ತ್ರಚಿಕಿತ್ಸೆಗೆ ನೆರವಿಗೆ ಮನವಿ

ಸಹಾಯಕ್ಕೆ ಎದುರು ನೋಡುತ್ತಿರುವ ಕುಟುಂಬ

Published:
Updated:
ವರ್ಷಗಟ್ಟಲೇ ಹಾಸಿಗೆ ಹಿಡಿದ ಮೌವಿಕಾ, ಚಿಕ್ಕಮಗಳು ಅಶ್ವಿನಿ ಅವರೊಂದಿಗೆ ಮುನಿತಾಯಮ್ಮ

ಚಿಕ್ಕಬಳ್ಳಾಪುರ: ಅದು ಗಂಡಿನ ಆಸರೆ ಇಲ್ಲದ ಮೂರು ಅಂಗವಿಕಲ ಹೆಣ್ಣು ಮಕ್ಕಳೇ ಇರುವ ಕುಟುಂಬ. ಆ ಮನೆಯ ಯಜಮಾನ ತೀರಿ 22 ವರ್ಷಗಳೇ ಗತಿಸಿವೆ. ಕಿತ್ತು ತಿನ್ನುವ ಬಡತನದ ನಡುವೆಯೂ ಹೂವು ಕಟ್ಟಿ ಸ್ವಾಭಿಮಾನದಿಂದ ಹೊಟ್ಟೆ ಹೊರೆಯುತ್ತಿದ್ದ ಸಂಸಾರ ಇದೀಗ ಮೂರನೇ ಬಾರಿ ನಡೆದ ಹಿರಿ ಮಗಳ ಕಾಲಿನ ಶಸ್ತ್ರಚಿಕಿತ್ಸೆಗೆ ದಾನಿಗಳ ಆರ್ಥಿಕ ನೆರವು ಎದುರು ನೋಡುತ್ತಿದೆ.

ನಗರದ 28 ನೇ ವಾರ್ಡಿನಲ್ಲಿ ಮೌವಿಕಾ, ಅಶ್ವಿನಿ ಎಂಬ ಇಬ್ಬರು ಅಂಗವಿಕಲ ಹೆಣ್ಣು ಮಕ್ಕಳೊಂದಿಗೆ 15 ವರ್ಷಗಳಿಂದ ವಾಸಿಸುತ್ತಿರುವ ಅಂಗವಿಕಲೆ ಮುನಿತಾಯಮ್ಮ ಅವರು ಸದ್ಯ ಮಗಳ ಚಿಕಿತ್ಸೆ ವೆಚ್ಚಕ್ಕಾಗಿ ಹೆಣಗಾಡುತ್ತಿದ್ದಾರೆ. ಮನೆಯ ಕಷ್ಟ ನೋಡದೆ ಮೌವಿಕಾ ಸಿದ್ಧ ಉಡುಪು ಕಾರ್ಖಾನೆಗೆ ಕೆಲಸಕ್ಕೆ ಹೋದರು. ಅಲ್ಲಿ ಅಂಗವೈಕಲ್ಯದಿಂದಾಗಿ ಎಲ್ಲರಂತೆ ಕೆಲಸ ಮಾಡಲಾಗದ ಕಾರಣಕ್ಕೆ ಕೆಲಸ ಕಳೆದುಕೊಂಡು ಮನೆಯಲ್ಲಿಯೇ ಅಮ್ಮನಿಗೆ ಹೂವು ಕಟ್ಟಲು ನೆರವಾಗುತ್ತಿದ್ದರು.

ದಿನೇ ದಿನೇ ಕಾಲು ನೋವು ಹೆಚ್ಚಾಗುತ್ತಿದ್ದಂತೆ ಮೌವಿಕಾ ಅವರು ಒಂದು ವರ್ಷದ ಹಿಂದೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಚಿಕಿತ್ಸೆ ಫಲಪ್ರದವಾಗದೆ ಮತ್ತಷ್ಟು ನೋವು ತಿನ್ನುತ್ತ ವರ್ಷಗಟ್ಟಲೇ ಮನೆಯಲ್ಲಿ ಹಾಸಿಗೆ ಹಿಡಿದಿದ್ದರು.

ಶಸ್ತ್ರಚಿಕಿತ್ಸೆಯ ಬಳಿಕ ಮೌವಿಕಾ ಅವರ ದೇಹ ಸ್ಥಿತಿ ಮತ್ತಷ್ಟು ಹದಗೆಟ್ಟು, ಹಾಸಿಗೆಯಲ್ಲೇ ಅವರ ನಿತ್ಯಕರ್ಮಗಳನ್ನು ತಾಯಿ, ತಂಗಿ ಮಾಡಿಸಬೇಕಾದ ಸ್ಥಿತಿ ತಲೆದೋರಿ ಈ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಮೊದಲೇ ಆರ್ಥಿಕ ಸಂಕಷ್ಟದ ನಡುವೆ ದಿನದೂಡುತ್ತಿದ್ದ ಮುನಿತಾಯಮ್ಮ ಮಗಳಿಗೆ ಒದಗಿದ ಸ್ಥಿತಿ ನೋಡಿ ಅದನ್ನು ಯಾರೊಂದಿಗೆ ಹಂಚಿಕೊಳ್ಳದೆ ಮತ್ತಷ್ಟು ಕುಗ್ಗಿ ಹೋಗಿದ್ದರು.

ಮಲಗಿದ್ದಲ್ಲೇ ಮಲಗಿ ಹಾಸಿಗೆ ಹುಣ್ಣುಗಳು ಸೇರಿದಂತೆ ವಿವಿಧ ಸಮಸ್ಯೆಗಳಿಂದ ನರಳುತ್ತಿದ್ದ ಮಗಳನ್ನು ನೋಡಲಾಗದೆ, ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ತೀವ್ರ ಹತಾಶೆಗೆ ಒಳಗಾದ ಮುನಿತಾಯಮ್ಮ ನಿದ್ರೆ ಮಾತ್ರೆ ಸೇವಿಸಿ ಒಂದು ಬಾರಿ ಆತ್ಮಹತ್ಯೆಗೆ ಕೂಡ ಯತ್ನಿಸಿದ್ದರು ಎನ್ನಲಾಗಿದೆ. ಇತ್ತೀಚೆಗೆ ಅವರು ಸ್ಥಳೀಯ ನಿವಾಸಿ, ಪುರೋಹಿತ ಲಕ್ಷ್ಮೀ ನಾರಾಯಣ ಶರ್ಮಾ ಅವರ ಬಳಿ ಆತ್ಮಹತ್ಯೆಗೆ ಉತ್ತಮ ಮುಹೂರ್ತ ಕೇಳಲು ಹೋದ ಸಂದರ್ಭದಲ್ಲಿ ಅವರ ಕುಟುಂಬದ ಈ ಕರುಣಾ ಜನಕ ಸ್ಥಿತಿ ಬೆಳಕಿಗೆ ಬಂದಿದೆ.

ಲಕ್ಷ್ಮೀ ನಾರಾಯಣ ಶರ್ಮಾ ಅವರು ಸ್ಥಳೀಯ ಮುಖಂಡ ಮೊಬೈಲ್ ಬಾಬು ಅವರ ಸಹಕಾರದೊಂದಿಗೆ ಪುನಃ ಮೌವಿಕಾ ಅವರನ್ನು ಇತ್ತೀಚೆಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೂನ್ 27 ರಂದು ವೈದ್ಯರು ಮೂರನೇ ಬಾರಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸದ್ಯ ಮೌವಿಕಾ ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೇ ಚೇತರಿಸಿಕೊಳ್ಳಬೇಕಾಗಿದ್ದು, ಸದ್ಯ ಈ ಕುಟುಂಬದ ಬಳಿ ನಿತ್ಯ ಅಗತ್ಯವಾದ ಔಷಧಕ್ಕೂ ಹಣವಿಲ್ಲದಂತಾಗಿದೆ.

‘ರಾಮಯ್ಯ ಆಸ್ಪತ್ರೆಯ ವೈದ್ಯರು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ. ಆದರೂ ಮೌವಿಕಾ ಗುಣಮುಖವಾಗಿ ಮನೆಗೆ ಮರಳುವವರೆಗೆ ಸುಮಾರು ₨7 ಲಕ್ಷ ಖರ್ಚಾಗಬಹುದು ಎಂದು ತಿಳಿಸಿದ್ದಾರೆ. ನಾವು ಸಹ ಸರ್ಕಾರದ ನೆರವು, ದಾನಿಗಳ ನೆರವು ಒದಗಿಸಿ ಕೊಡಲು ಪ್ರಯತ್ನಿಸುತ್ತಿದ್ದೇವೆ. ದಾನಿಗಳು ಮುಂದೆ ಬಂದು ನೆರವಿನ ಹಸ್ತ ಚಾಚಿದರೆ ಸಂಕಷ್ಟದಲ್ಲಿರುವ ಕುಟುಂಬವನ್ನು ಸಂಕಟದಿಂದ ಪಾರು ಮಾಡಬಹುದು’ ಎಂದು ಲಕ್ಷ್ಮೀ ನಾರಾಯಣ ಶರ್ಮಾ ಹೇಳಿದರು.

ಆರ್ಥಿಕ ನೆರವು ನೀಡಿ

ಮುನಿತಾಯಮ್ಮ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಬಯಸುವವರು ಬ್ಯಾಂಕ್ ಆಫ್ ಇಂಡಿಯಾ ಚಿಕ್ಕಬಳ್ಳಾಪುರ ಶಾಖೆಯ ಖಾತೆ ಸಂಖ್ಯೆ 846310110004529ಕ್ಕೆ (ಐಎಫ್‌ಎಸ್‌ಸಿ ಕೋಡ್: BKID0008463) ಹಣ ಜಮೆ ಮಾಡಬಹುದು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !