ಸುಧಾರಣೆ ಕಾಣದ ರೈತರ ಜೀವನ ಮಟ್ಟ

7
ಕೃಷಿ ಪರಿಕರ ಪ್ರದರ್ಶನ, ಸಿರಿಧಾನ್ಯಗಳ ತಾಂತ್ರಿಕ ಕಾರ್ಯಾಗಾರದಲ್ಲಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಆತಂಕ

ಸುಧಾರಣೆ ಕಾಣದ ರೈತರ ಜೀವನ ಮಟ್ಟ

Published:
Updated:
Deccan Herald

ಗೌರಿಬಿದನೂರು: 'ಕೃಷಿ ಕ್ಷೇತ್ರದಲ್ಲಿ ಎಷ್ಟೇ ಅಭಿವೃದ್ದಿ ಹೊಂದಿದರೂ ರೈತರ ಜೀವನ ಮಟ್ಟ ಸುಧಾರಿಸಲು ಸಾಧ್ಯವಾಗುತ್ತಿಲ್ಲ. ರೈತರ ಏಳ್ಗೆಗೆ ಅಗತ್ಯವಿರುವ ಸಮಗ್ರ ಯೋಜನೆಯ ಅಗತ್ಯವಿದೆ ಎಂದು ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಹೇಳಿದರು.

ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಇಕ್ರಿಸ್ಯಾಟ್ ಮತ್ತು ಅದರ ಅಂಗಸಂಸ್ಥೆಗಳ ಸಹಯೋಗದೊಂದಿಗೆ ತಾಲ್ಲೂಕಿನ ವಿಧುರಾಶ್ವತ್ಥದಲ್ಲಿ ಏರ್ಪಡಿಸಿದ್ದ ಕೃಷಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಮಳೆ ನಂಬಿ ರೈತರು ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಈವರೆಗೆ ಶೇ 60ರಷ್ಟು ಮಳೆಯಾಗಿದೆ. ತಿಂಗಳಿನಿಂದ ಮಳೆಯಾಗದೆ ರೈತರು ಕಂಗಾಲಾಗಿದ್ದಾರೆ. ಇನ್ನೂ ಹದಿನೈದು ದಿನ ಇದೇ ಸ್ಥಿತಿ ಮುಂದುವರಿದರೆ ಮುಂಗಾರು ಬೆಳೆ ಕೈಕೊಡುವ ಆತಂಕ ಕಾಡುತ್ತಿದೆ ಎಂದರು.

'ರಾಜ್ಯದ ಕೃಷಿ ಇಲಾಖೆ ಮತ್ತು ಬೇಸಾಯ ವಿಧಾನಗಳ ಬಗ್ಗೆ ನನಗೆ ಅರಿವಿದೆ. ರೈತರು ಬೆಳೆದ ಉತ್ಪನ್ನಗಳಿಗೆ ಮಧ್ಯವರ್ತಿಗಳ ಹಾವಳಿಯಿಂದ ಮಾರುಕಟ್ಟೆ ಸಿಗುತ್ತಿಲ್ಲ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ವೈಜ್ಞಾನಿಕ ವಿಧಾನ ಅಳವಡಿಸುವ ಅಗತ್ಯವಿದೆ. ಅಲ್ಲದೆ ರೈತರೂ ಸಹ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಆಹಾರ ತಜ್ಞ ಡಾ.ಖಾದರ್ ಮಾತನಾಡಿ, 'ಆಧುನಿಕತೆ ಮತ್ತು ತಂತ್ರಜ್ಞಾನದ ಬೆನ್ನತ್ತಿ ಜನರು ಅವಶ್ಯಕ ಪೌಷ್ಟಿಕ ಆಹಾರ ತಿನ್ನುವುದನ್ನೇ ಮರೆತಿದ್ದಾರೆ. ವಿಷಯುಕ್ತ ಆಹಾರ ಪದಾರ್ಥ ಸೇವಿಸುತ್ತಾ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

'ಬುದ್ಧಿವಂತಿಕೆಯನ್ನು ಮಾರಾಟ ಮಾಡುವ ಬುದ್ಧಿಮಾಂಧ್ಯತನಕ್ಕೆ ಮಾನವ ಕುಲ ಬಂದು ನಿಂತಿದೆ. 70 ವರ್ಷಗಳ ಹಿಂದಿನಿಂದಲೂ ಅರಿಯದ ಸತ್ಯವನ್ನು ಜನರು ಇತ್ತೀಚೆಗೆ ಅರಿತಿದ್ದಾರೆ. ಸಿರಿಧಾನ್ಯಗಳನ್ನು ಆಹಾರ ಪದಾರ್ಥಗಳಾಗಿ ಬಳಕೆ ಮಾಡುವವರೆಗೂ ರೋಗಮುಕ್ತವಾಗಿಸಿ ಆರೋಗ್ಯ ಸುಧಾರಿಸಲು ಸಾಧ್ಯವಿಲ್ಲ' ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ. ಮಂಜುನಾಥ್, ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎನ್. ಚಿಕ್ಕೇಗೌಡ, ತಹಶೀಲ್ದಾರ್ ಎಚ್.ಶ್ರೀನಿವಾಸ್, ಇಕ್ರಿಸ್ಯಾಟ್ ಸಹ ಸಂಯೋಜಕ ಡಾ.ಕೆ.ಕೃಷ್ಣಪ್ಪ, ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕ ಡಾ.ಮಂಜುನಾಥ್, ಜಲತಜ್ಞ ಕೆ.ನಾರಾಯಣಸ್ವಾಮಿ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಸಂಪನ್ಮೂಲ ವ್ಯಕ್ತಿ ಟಿ.ಜಿ.ಎಸ್. ಅವಿನಾಶ್, ಡೀನ್ ಡಾ.ರಾಜೇಂದ್ರ ಪ್ರಸಾದ್, ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ, ಕೃಷಿ ಇಲಾಖೆ ಅಧಿಕಾರಿಗಳಾದ ಎಂ.ಅನುರೂಪ, ಎಸ್.ಎನ್.ಮಂಜುನಾಥ್, ಮುಖಂಡರಾದ ಎನ್.ಟಿ. ಮದನಗೋಪಾಲ ರೆಡ್ಡಿ, ಮರಳೂರು ಹನುಮಂತರೆಡ್ಡಿ, ಎಚ್.ಎನ್. ಪ್ರಕಾಶರೆಡ್ಡಿ, ಬಿ.ಪಿ.ಅಶ್ವತ್ಥನಾರಾಯಣಗೌಡ, ಪಿ.ಎನ್. ಪ್ರಕಾಶ್, ಬಸಪ್ಪರೆಡ್ಡಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !