ಶುಕ್ರವಾರ, ಆಗಸ್ಟ್ 19, 2022
25 °C
ಲಾಕ್‌ಡೌನ್ ಕಾರಣ ಹೂ, ತರಕಾರಿ ಬೆಳೆಗೆ ವಿಶೇಷ ಪ್ಯಾಕೇಜ್‌ ಘೋಷಿಸಿದ್ದ ರಾಜ್ಯ ಸರ್ಕಾರ

ಪರಿಹಾರದ ನಿರೀಕ್ಷೆಯಲ್ಲಿ ಬೆಳೆಗಾರರು

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಕೋವಿಡ್-19 ಲಾಕ್‌ಡೌನ್ ಕಾರಣ ಸಂಕಷ್ಟದಲ್ಲಿದ್ದ ಹಣ್ಣು, ಹೂ, ತರಕಾರಿ ಬೆಳೆಗಾರರ ನೆರವಿಗೆ ಸರ್ಕಾರ ಘೋಷಿಸಿದ್ದ ಪರಿಹಾರದ ಪ್ಯಾಕೇಜ್ ಕೇವಲ ಘೋಷಣೆಗಷ್ಟೇ ಸೀಮಿತವಾಗಿದೆ. ರೈತರು ಪರಿಹಾರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಹೂವಿನ ಬೆಳೆಗೆ ಹೆಕ್ಟೇರ್‌ಗೆ ₹25 ಸಾವಿರ, ತರಕಾರಿಗೆ ₹15 ಸಾವಿರ ಆರ್ಥಿಕ ನೆರವನ್ನು ಘೋಷಿಸಲಾಗಿತ್ತು. ಕಷ್ಟಪಟ್ಟು ಕಚೇರಿಗೆ ಅಲೆದು ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದರೂ ಖಾತೆಗೆ ಹಣ ಬಂದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ತಾಲ್ಲೂಕಿನಲ್ಲಿ ಸುಮಾರು 250 ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ ಬೆಳೆಯಲಾಗಿದೆ. ಪರಿಹಾರ ಕೋರಿ 1,600 ತರಕಾರಿ ಬೆಳೆಗಾರರು ಮತ್ತು 186 ಹೂ ಬೆಳೆಗಾರರು ಅರ್ಜಿ ಸಲ್ಲಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಸಾಗಣೆಗೆ ಅವಕಾಶ ಇಲ್ಲದೆ, ಮಾರುಕಟ್ಟೆ ವ್ಯವಸ್ಥೆಯೂ ಇಲ್ಲದೆ ಕೋಟ್ಯಂತರ ಮೌಲ್ಯದ ಹೂ, ತರಕಾರಿ ತೋಟಗಳಲ್ಲೇ ಕೊಳೆತು ರೈತರಿಗೆ ನಷ್ಟವಾಗಿತ್ತು. ಕೆಲವು ಕಡೆ ರೈತರು ಹೂ, ತರಕಾರಿಯನ್ನು ರಸ್ತೆಗಳಿಗೆ ಚೆಲ್ಲಿ ಪ್ರತಿಭಟನೆ ಸಹ ನಡೆಸಿದ್ದರು.

ರೈತರ ಆಕ್ರೋಶಕ್ಕೆ ಮಣಿದ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿತ್ತು. ಪರಿಹಾರ ಪಡೆಯಲು ರೈತರು ಅರ್ಜಿ ಸಲ್ಲಿಸಿದ್ದರು. ಆದರೆ, ಎಲ್ಲ ಬೆಳೆಗಾರರಿಗೆ ಸಮರ್ಪಕವಾಗಿ ಪರಿಹಾರ ಹಣ ಪಾವತಿಯಾಗಿಲ್ಲ ಎಂಬ ಕೂಗು ರೈತರಿಂದ ಕೇಳಿ ಬರುತ್ತಿದೆ.

ತರಕಾರಿ ಬೆಳೆಗಾರರಲ್ಲಿ 600 ಮತ್ತು ಹೂ ಬೆಳೆಗಾರರಲ್ಲಿ 156 ಅರ್ಜಿಗಳು ವಿಲೇವಾರಿಯಾಗಿವೆ. ₹8 ಲಕ್ಷ ಪರಿಹಾರ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು
ಹೇಳುತ್ತಾರೆ.

ರೈತರ ಪ್ರಕಾರ, ಇದು ವಾಸ್ತವ ಅಂಕಿ ಅಂಶವಲ್ಲ. ಸಾಂಕೇತಿಕವಾಗಿ ಕೆಲವರ ಖಾತೆಗೆ ಹಣ ಬಂದಿರಬಹುದು. ಯಾರಿಗೂ ಹಣ ಸಂದಾಯವಾಗಿಲ್ಲ. ಪರಿಹಾರದ ಹಣ ಬಂದರೆ ಮುಂಗಾರಿನಲ್ಲಿ ಬೆಳೆಗಳ ವೆಚ್ಚಕ್ಕಾದರೂ ಅನುಕೂಲವಾಗುತ್ತಿತ್ತು ಎನ್ನುವರು.

‘ರೈತರ ಅರ್ಜಿಗಳಲ್ಲಿ ಹೊಂದಾಣಿಕೆ ಆಗದ ಆಧಾರ್ ಸಂಖ್ಯೆ, ಜಂಟಿ ಖಾತೆ, ಫಲಾನುಭವಿ ಮರಣ, 5-6 ಗುಂಟೆ ಜಮೀನುಗಳ ಬೆಳೆಗಾರರ ನಿರಾಸಕ್ತಿ, ಬೆಳೆ ಸಮೀಕ್ಷೆಯಲ್ಲಿನ ತಪ್ಪುಗಳು ಮತ್ತಿತರ ಕಾರಣಗಳಿಂದ ಕೆಲವು ರೈತರ ಖಾತೆಗಳಿಗೆ ಪರಿಹಾರ ಜಮಾ ಆಗಿಲ್ಲ’ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

***

ಪ್ಯಾಕೇಜ್‌ಗಳು ಪ್ರಚಾರಕ್ಕೇ ಸೀಮಿತ

ಬಹುತೇಕ ಸರ್ಕಾರಿ ಪ್ಯಾಕೆಜ್‌ಗಳ ಹಣೆಬರಹವೇ ಇದು. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದಾಗಿ ಪ್ಯಾಕೆಜ್ ಘೋಷಣೆ ಮೂಲಕ ಸರ್ಕಾರ ಪ್ರಚಾರ ಗಿಟ್ಟಿಸಿಕೊಳ್ಳುತ್ತದೆ. ಅನುಷ್ಠಾನ ಮಾತ್ರ ಆಗುವುದಿಲ್ಲ. ಷರತ್ತುಗಳ ಮೂಲಕ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಅನುಷ್ಠಾನ ಆಗುವಂತೆ ಎಚ್ಚರಿಕೆ ವಹಿಸುತ್ತದೆ.

ಸೀಕಲ್ ರಮಣಾರೆಡ್ಡಿ, ಅಧ್ಯಕ್ಷ, ತಾಲ್ಲೂಕು ರೈತಸಂಘ ಹಾಗೂ ಹಸಿರುಸೇನೆ

***

ರೈತರ ಅರ್ಜಿಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಖಜಾನೆಯಿಂದ ನೇರವಾಗಿ ಅವರ ಖಾತೆಗಳಿಗೆ ಹಣ ಜಮೆ ಆಗುತ್ತದೆ

- ರಜಿನಿ, ತೋಟಗಾರಿಕೆ ಸಹಾಯಕ ನಿರ್ದೇಶಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು