ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಹೂ ಚೆಲ್ಲಿದ ರೈತರು

ತೀವ್ರ ಕುಸಿದ ಗುಲಾಬಿ, ಸೇವಂತಿ, ಚೆಂಡು ಹೂ ಬೆಲೆ; ಬೆಳೆಗಾರರು ಕಂಗಾಲು
Last Updated 27 ಸೆಪ್ಟೆಂಬರ್ 2021, 6:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬೆಲೆ ಇಲ್ಲದೆ ಕಂಗಾಲಾಗಿರುವ ಬೆಳೆಗಾರರು ಮಾರಾಟಕ್ಕೆ ತಂದ ಹೂಗಳನ್ನು ಮಾರುಕಟ್ಟೆಯಲ್ಲಿಯೇ ಎಸೆಯುತ್ತಿದ್ದಾರೆ. ತೀವ್ರ ಬೆಲೆ ಕುಸಿತದಿಂದ ಗುಲಾಬಿ, ಸೇವಂತಿಗೆ ಮತ್ತು ಚೆಂಡು ಹೂ ಬೆಳೆಗಾರರು ತತ್ತರಿಸಿದ್ದಾರೆ. ಒಂದು ಕೆ.ಜಿ ಹೂ ಬೆಲೆ ಕನಿಷ್ಠ ₹ 5ಕ್ಕೆ ಇಳಿದಿದೆ.

ಜಿಲ್ಲೆಯಲ್ಲಿ ಬಹಳಷ್ಟು ರೈತರು ಹೂ ಬೆಳೆಯುತ್ತಿದ್ದಾರೆ. ಹೂವೇ ರೈತರ ಆರ್ಥಿಕತೆ ಮೂಲವಾಗಿದೆ. ದಿನದಿಂದ ದಿನಕ್ಕೆ ಬೆಳೆಗಾರರ ಸಂಖ್ಯೆ ಸಹ ಹೆಚ್ಚುತ್ತಿದೆ. ತಿಂಗಳ ಹಿಂದೆ ಸತತ ಮಳೆಯಿಂದ ಹೂವಿನ ಬೆಳೆಗಳು ನಾನಾ ರೋಗಗಳಿಗೆ ತುತ್ತಾಗಿದ್ದದ್ದವು. ‌ಶ್ರಾವಣ ಮಾಸದಲ್ಲಿ ಸರಣಿ ಹಬ್ಬಗಳ ಕಾರಣ ಹೂವಿಗೆ ಬೆಲೆ ಹೆಚ್ಚಿತು. ಒಂದಿಷ್ಟು ಆದಾಯವನ್ನು ಕಂಡರು. ಆದರೆ ಪಿತೃಪಕ್ಷ ಆರಂಭವಾದಾಗಿನಿಂದ ಮಾರುಕಟ್ಟೆಯಲ್ಲಿ ಹೂ ಕೇಳುವವರೇ ಇಲ್ಲ.

ನಿತ್ಯ ಬಾರಿ ಪ್ರಮಾಣದಲ್ಲಿ ಮಾರುಕಟ್ಟೆಗೆ ಹೂ ಬರುತ್ತಿದೆ. ಆದರೆ ಖರೀದಿಗೆ ವ್ಯಾಪಾರಿಗಳು ಮುಂದಾಗುತ್ತಿಲ್ಲ. ಕೆಲವು ರೈತರು ಗುಬ್ಬರದ ಗುಂಡಿಗೆ ಹೂಗಳನ್ನು ಎಸೆಯುತ್ತಿದ್ದಾರೆ. ಚಿಕ್ಕಬಳ್ಳಾಪುರದ ಕೆ.ವಿ.ಕ್ಯಾಂಪಸ್ ಬಳಿಯ ಹೂವಿನ ತಾತ್ಕಾಲಿಕ ಮಾರುಕಟ್ಟೆಗೆ ಕಾಲಿಟ್ಟರೆ ರೈತರು ರಾಶಿ ರಾಶಿ ಹೂಗಳನ್ನು ಎಸೆದಿರುವುದು
ಕಂಡು ಬರುತ್ತದೆ.

ಪಿತೃಪಕ್ಷ ಆರಂಭವಾಗುತ್ತಿದ್ದಂತೆಯೇ ಶುಭ ಕಾರ್ಯಗಳಿಗೆ ಕಡಿವಾಣ ಬಿದ್ದಿದೆ. ಹೀಗಾಗಿ ಹೂವಿಗೆ ಬೇಡಿಕೆ ಕುಸಿದಿದೆ. ಮಾರಾಟಕ್ಕೆ ಕೊಂಡೊಯ್ದ ಹೂವನ್ನು ಮಾರುಕಟ್ಟೆಯಲ್ಲಿಯೇ ರೈತರು ಬಿಟ್ಟು ಬರುತ್ತಿದ್ದಾರೆ. ಕನಿಷ್ಠ ಮಟ್ಟದಲ್ಲಿಯೂ ಬಂಡವಾಳ ವಾಪಸ್ ಆಗುತ್ತಿಲ್ಲ.

ನಗರದ ಹೂವಿನ ಮಾರುಕಟ್ಟೆಯಲ್ಲಿ 1 ಕೆ.ಜಿ ಚೆಂಡು ಹೂ, ಸಣ್ಣ ಗುಲಾಬಿ ಬೆಲೆ ₹ 5, ಸೇವಂತಿಗೆ 1 ಕೆ.ಜಿಗೆ
₹ 10 ಇದೆ. ಹೂ ಬೆಳೆಯಲು ಹಾಕಿದ ಬಂಡವಾಳವಿರಲಿ ಹೂ ಕೀಳಲು ಕೊಡಬೇಕಾದ ಕೂಲಿಯ ಹಣ ಕೂಡಾ ದೊರೆಯುತ್ತಿಲ್ಲ.

ಹೂವನ್ನು ಹೆಚ್ಚು ದಿನ ಸಂಗ್ರಹಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ವರ್ತಕರು ಸಹ ಖರೀದಿಗೆ ಮುಂದಾಗುತ್ತಿಲ್ಲ. ಕನಿಷ್ಠ ಮಟ್ಟದಲ್ಲಿ ಖರೀದಿಸಿದರೂ ನಷ್ಟ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ.

ರೈತರು ತಂದ ಹೂವನ್ನು ಎಲ್ಲೆಂದರಲ್ಲಿ ಬಿಸಾಡುವಂತಹ ಪರಿಸ್ಥಿತಿ ಇದೆ. ಹಲವು ರೈತರು ಗುಲಾಬಿಯನ್ನು ಕೀಳದೆ ತೋಟಗಳಲ್ಲೇ ಬಿಟ್ಟಿದ್ದಾರೆ. ಈಗ ಸೇವಂತಿಗೆ ಹೂವಿನ ಸುಗ್ಗಿ. ಜಿಲ್ಲೆಯ ಬಹುತೇಕ ಕಡೆ ಹೇರಳವಾಗಿ ಸೇವಂತಿಗೆ ಬೆಳೆದಿದ್ದಾರೆ. ಎಕರೆಗಟ್ಟಲೇ ಪ್ರದೇಶದಲ್ಲಿ ಸೇವಂತಿ ಹೂ ಅರಳಿದೆ. ಆದರೆ ಸೇವಂತಿಗೆ ಬೆಳೆಗಾರರು ಸಹ ನಷ್ಟ ಅನುಭವಿಸುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಹೂ ಬೆಳೆಗಾರರ ಸ್ಥಿತಿ ಕಷ್ಟಕ್ಕೆ ಸಿಲುಕಿದೆ. ಕೊರೊನಾ ಕಾರಣ ಶುಭ ಸಮಾರಂಭಗಳು ನಡೆಯಲಿಲ್ಲ. ಆಗಲೂ ಹೂ ಮಾರಾಟವಾಗಲಿಲ್ಲ. ಹಬ್ಬಗಳಿಗೂ ಕಡಿವಾಣವಿತ್ತು. ಹೀಗೆ ನಷ್ಟದ ಮೇಲೆ ನಷ್ಟವನ್ನು ಬೆಳೆಗಾರರು ಅನುಭವಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT