ಗೌರಿಬಿದನೂರು: ತಾಲ್ಲೂಕಿನ ನಡುವಳಹಳ್ಳಿ ಗ್ರಾಮದಲ್ಲಿ ದಾಯಾದಿಗಳ ಮಧ್ಯೆ ಪಿತ್ರಾರ್ಜಿತ ಆಸ್ತಿಗಾಗಿ ನಡೆದ ಗಲಾಟೆಯಲ್ಲಿ ನಂಜುಂಡಪ್ಪ (55) ಮೃತಪಟ್ಟಿದ್ದಾರೆ.
ಗ್ರಾಮದ ನಂಜುಂಡಪ್ಪ ಹಾಗೂ ರಾಮಾಂಜಿನಪ್ಪ ನಡುವೆ ಭಾನುವಾರ ಆಸ್ತಿ ವಿಚಾರಕ್ಕೆ ಗಲಾಟೆ ಶುರುವಾಗಿ, ಮಾತಿಗೆ ಮಾತು ಬೆಳೆದು ದೊಣ್ಣೆ ಕಲ್ಲುಗಳಿಂದ ಹೊಡೆದಾಡಿಕೊಂಡಿದ್ದಾರೆ. ತಮ್ಮ ರಾಮಾಂಜಿನಪ್ಪನ ಮಕ್ಕಳು ದೊಡ್ಡಪ್ಪನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಪರಿಣಾಮ ಅಣ್ಣ ನಂಜುಂಡಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ಸೋಮವಾರ ಸಾವನ್ನಪ್ಪಿದ್ದಾರೆ.
ಸೋಮವಾರ ಬೆಳಗ್ಗೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಗ್ರಾಮಾಂತರ ಠಾಣೆಯ ಪಿಎಸ್ಐ ರಮೇಶ್ ಗುಗ್ಗರಿ, ಲಲಿತಮ್ಮ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.