ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರ ನೋವಿಗೆ ನಗರದ ಮಿಡಿತ

ಉತ್ತರ ಕರ್ನಾಟಕದ ಪ್ರಕೃತಿ ವಿಕೋಪಕ್ಕೆ ತತ್ತರಿಸಿದವರ ನೆರವಿಗೆ ದೇಣಿ, ವಿದ್ಯಾರ್ಥಿಗಳು, ವಿವಿಧ ಕಾರ್ಯಕರ್ತರಿಂದ ಹಣ, ಅಗತ್ಯ ವಸ್ತುಗಳ ಸಂಗ್ರಹ
Last Updated 13 ಆಗಸ್ಟ್ 2019, 14:01 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಧಾರಾಕಾರ ಮಳೆ ಪ್ರವಾಹದಂತಹ ಪ್ರಕೃತಿ ವಿಕೋಪಕ್ಕೆ ತತ್ತರಿಸಿರುವ ಉತ್ತರ ಕರ್ನಾಟಕದ ಜನರ ನೋವಿಗೆ ಜಿಲ್ಲೆಯ ನಾಗರಿಕರು, ವಿದ್ಯಾರ್ಥಿಗಳು ಸಹ ಸ್ಪಂದಿಸಲು ಮುಂದಾಗುತ್ತಿದ್ದಾರೆ. ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಅನೇಕ ದಾನಿಗಳು ವಿವಿಧ ಪದಾರ್ಥಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ಕಳುಹಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ನಗರದಲ್ಲಿ ಮಂಗಳವಾರ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಆರ್‌ಎಸ್‌ಎಸ್, ಬಿಜೆಪಿ, ಯುವ ಬ್ರಿಗೇಡ್ ಕಾರ್ಯಕರ್ತರು ಸಂತ್ರಸ್ತರಿಗಾಗಿ ಹಣ, ಅಕ್ಕಿ, ರಗ್ಗುಗಳು, ಕಂಬಳಿ, ಸೀರೆ, ಬಟ್ಟೆಗಳು, ನೀರಿನ ಬಾಟಲ್‌ಗಳು, ಬಿಸ್ಕಿಟ್‌ಗಳು, ಹಾಲು, ಬ್ರೆಡ್, ಬನ್‌ಗಳು, ಮೇಣದ ಬತ್ತಿಗಳು ಸೇರಿದಂತೆ ವಿವಿಧ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದರು. ನಗರದ ವರ್ತಕರು, ನಾಗರಿಕರು ನೆರವು ನೀಡುವಲ್ಲಿ ಮಾನವೀಯತೆ ಮೆರೆದರು.

ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರು ಮತ್ತು ಭಾರತೀಯ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಾರ್ಯಕರ್ತರು, ವಿದ್ಯಾರ್ಥಿಗಳು ₹58 ಸಾವಿರ ನಗದು, ಸುಮಾರು ₹2 ಲಕ್ಷ ಮೌಲ್ಯದ ವಿವಿಧ ಸಾಮಗ್ರಿಗಳನ್ನು ಸಂಗ್ರಹಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್, ‘ಪ್ರವಾಹದಿಂದಾಗಿ ರಾಜ್ಯದಲ್ಲಿ ಸಾಕಷ್ಟು ಜನರು ಮನೆಗಳು, ಭೂಮಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಬಯಲು ಸೀಮೆ ಜಿಲ್ಲೆಗಳ ಜನರು ಇರುವುದರಲ್ಲಿಯೇ ನೆಮ್ಮದಿಯಿಂದ ಇದ್ದೇವೆ. ಇಂತಹ ಸಂಕಷ್ಟದ ಸಮಯದಲ್ಲಿ ನೊಂದವರಿಗೆ ಸ್ಪಂದಿಸಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯ’ ಎಂದು ಹೇಳಿದರು.

‘ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಂತಹ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದ ಬಹುತೇಕ ಜಿಲ್ಲೆಗಳಲ್ಲಿ ಸಾವಿರಾರು ಜನರು ತಮ್ಮ ನೆಲೆ ಕಳೆದುಕೊಂಡಿದ್ದಾರೆ. ಬಿದ್ದಿರುವ ಬಾರಿ ಮಳೆಯಿಂದ ಗ್ರಾಮಗಳೆಲ್ಲ ಜಲಾವೃತಗೊಂಡಿದೆ. ಸಂಕಷ್ಟದಲ್ಲಿರುವ ಜನರಿಗೆ ಪ್ರತಿಯೊಬ್ಬರೂ ತಮ್ಮ ಕೈಲಾದ ಸಹಾಯ ಮಾಡಲು ಮುಂದಾಗಬೇಕು’ ಎಂದು ತಿಳಿಸಿದರು.

ಆರ್‌ಎಸ್‌ಎಸ್‌ ಮುಖಂಡರಾದ ವೇಣು, ಅನಿಲ್, ಬಿಜೆಪಿ ಮುಖಂಡರಾದ ಅಗಲಗುರ್ಕಿ ಚಂದ್ರಶೇಖರ್, ಲಕ್ಷ್ಮಿನಾರಾಯಣ ಗುಪ್ತಾ, ಹನುಮಂತಪ್ಪ, ರಾಮಪ್ಪ, ಲಕ್ಷ್ಮಿಪತಿ, ಚಂದ್ರಶೇಖರ್, ರವಿಕುಮಾರ್, ಬಾಲು, ಏಕಾಂಬರನಾಥ್, ಕಿರಣ್ ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಂದ ಅಳಿಲು ಸೇವೆ
ಇನ್ನೊಂದೆಡೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಪದಾಧಿಕಾರಿಗಳು ಮತ್ತು ವಿಶ್ವ ವಿವೇಕ ಕಾಲೇಜು ವಿದ್ಯಾರ್ಥಿಗಳು ನಗರದಲ್ಲಿ ಮಂಗಳವಾರ ₹36 ಸಾವಿರ ನಗದು ಜತೆಗೆ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿದರು. ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಜಮೆ ಮಾಡಿ, ಸಾಮಗ್ರಿಗಳನ್ನು ಸಂತ್ರಸ್ತರಿಗೆ ಕಳುಹಿಸಿ ಕೊಡಲಾಯಿತು.

ಪ್ರಾಂಶುಪಾಲರಾದ ಪ್ರತಿಭಾ ಶ್ರೀನಿವಾಸ್, ಭಾರತಿ ಶ್ರೀನಿವಾಸ್, ಉಪನ್ಯಾಸಕರಾದ ವೇಣುಗೋಪಾಲಾಚಾರಿ, ಗಂಗರಾಜು, ಮುನಿರಾಜು, ಎಬಿವಿಪಿ ಮುಖಂಡರಾದ ಮಂಜುನಾಥ್ ರೆಡ್ಡಿ, ವಿಜಯ್‌, ಅಖಿಲ್ ಹಾಜರಿದ್ದರು.

ನಗರದ ಪಂಚಗಿರಿ ಕೆ.ವಿ ದತ್ತಿ ಮತ್ತು ಪಂಚಗಿರಿ ಪ್ರೌಢಶಾಲೆ ವಿದ್ಯಾರ್ಥಿಗಳು ಕೂಡ ನಗರದಲ್ಲಿ ನೆರೆ ಸಂತ್ರಸ್ತರಿಗಾಗಿ ₹4,000, ವಿವಿಧ ಪದಾರ್ಥಗಳನ್ನು ಸಂಗ್ರಹಿಸಿದರು. ಟ್ರಸ್ಟ್‌ ವ್ಯವಸ್ಥಾಪಕ ಕೆ.ಆರ್.ಲಕ್ಷ್ಮಣಸ್ವಾಮಿ, ಮುಖ್ಯ ಶಿಕ್ಷಕ ಎಂ ನಾರಾಯಣಸ್ವಾಮಿ, ಶಿಕ್ಷಕರಾದ ಗುಂಪು ಮರದ ಆನಂದ್, ಶ್ರೀನಿವಾಸ ಮೂರ್ತಿ . ನರಸಿಂಹಯ್ಯ ಹಾಗೂ ಯುವ ಬ್ರಿಗೇಡ್ ಕಾರ್ಯಕರ್ತರಾದ ಸುನಿಲ್. ಪ್ರಜ್ವಲ್, ಪ್ರವೀಣ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT