ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ರಕ್ಷಣಾ ಕಾರ್ಯಚರಣೆ: ಅಣುಕು ಪ್ರದರ್ಶನ

ಜಿಲ್ಲಾಡಳಿತದಿಂದ ಕಾವೇರಿ ನದಿ ತೀರ ದಾಸನೂರು ಗ್ರಾಮದಲ್ಲಿ ಆಯೋಜನೆ
Last Updated 5 ಜೂನ್ 2022, 5:01 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಕಾವೇರಿ ನದಿ ತೀರದ ದಾಸನೂರು ಗ್ರಾಮದಲ್ಲಿ ಪ್ರವಾಹ ಸಂದರ್ಭದಲ್ಲಿ ಜನರ ರಕ್ಷಣೆಗಾಗಿ ನಡೆಸಲಾಗುವ ಕಾರ್ಯಾಚರಣೆಯ ಅಣಕು ಪ್ರದರ್ಶನ ಶನಿವಾರ ನಡೆಯಿತು.

ಪ್ರವಾಹದ ಸಂದರ್ಭದಲ್ಲಿ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳು, ವಿಪತ್ತು ನಿರ್ವಹಣೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವೂ ನಡೆಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅಗ್ನಿಶಾಮಕದಳ, ರೆಡ್ ಕ್ರಾಸ್ ಸೊಸೈಟಿ, ಗೃಹರಕ್ಷಕದಳ ಸಹಯೋಗದೊಂದಿಗೆ ಅಣಕು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು

ಅಗ್ನಿಶಾಮಕದಳ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೆಡ್‌ಕ್ರಾಸ್ ಸೊಸೈಟಿ, ಅಧಿಕಾರಿ ಸಿಬ್ಬಂದಿ, ಪ್ರವಾಹ ಸಂದರ್ಭದಲ್ಲಿ ಎದುರಾಗುವ ವಿಪತ್ತು, ಅಪಾಯಕ್ಕೆ ಸಿಲುಕಿದವರ ರಕ್ಷಣೆ ಮಾಡುವ ಕಾರ್ಯಾಚರಣೆಯ ಪ್ರಾತ್ಯಕ್ಷಿಕೆ ತೋರಿಸಿದರು. ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ವ್ಯಕ್ತಿ ಮುಳುಗುತ್ತಿರುವ ಸಮಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ಒ.ಬಿ.ಎಂ ದೋಣಿಯಲ್ಲಿ ರಕ್ಷಣೆ ಮಾಡುವ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು.

ನದಿಯಲ್ಲಿ ಸಿಲುಕಿದವರನ್ನು ರಕ್ಷಿಸಿ ನದಿಯಿಂದ ಹೊರ ತಂದು ಪ್ರಥಮ ಚಿಕಿತ್ಸೆ ಕೂಡಿಸುವುದು ಮತ್ತು ಅಲ್ಲಿಂದ ಪಾರಾಗುವುದು ಹೇಗೆ ಎಂಬುದನ್ನೂ ಪ್ರದರ್ಶಿಸಿದರು.

ಬೋಟ್ ಏರಿ ನದಿ ವೀಕ್ಷಣೆ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಬೋಟ್ ಏರಿ ದಾಸನಪುರ, ಹಳೆ ಹಂಪಾಪುರ, ಮುಳ್ಳೂರು ಗ್ರಾಮದ ನದಿ ತೀರಗಳನ್ನು ವೀಕ್ಷಣೆ ಮಾಡಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು, ‘ಪ್ರವಾಹ ನಿರ್ವಹಣೆಗೆ ಬೇಕಾಗ ಸಿದ್ದತೆಗಳನ್ನು ಈಗಾಗಲೇ ಜಿಲ್ಲಾಡಳಿತ ಉತ್ತಮವಾಗಿ ಸಿದ್ಧತೆ ಮಾಡಿಕೊಂಡು ವಿವಿಧ ಇಲಾಖೆಗೆ ಹಾಗೂ ಅನೇಕ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಪ್ರವಾಹ ಸಂತ್ರಸ್ತರನ್ನು ರಕ್ಷಣೆ ಮಾಡುವುದು ಹೇಗೆ ಎಂಬುದರ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ, ಗೃಹರಕ್ಷಕದಳ, ಕಂದಾಯ, ಆರೋಗ್ಯ ಇಲಾಖೆ ಸೇರಿದಂತೆ ಅನೇಕ ಸ್ವಯಂ ಸೇವಕರಿಗೆ ಈಗಾಗಲೇ ತರಬೇತಿ ನೀಡಲಾಗಿದೆ’ ಎಂದರು.

‘ಪ್ರವಾಹ ಸಂದರ್ಭದಲ್ಲಿ ಸ್ಥಳೀಯರು ನೀರಿಗೆ ಇಳಿಯುವುದು, ಮುಂತಾದ ದುಸ್ಸಾಹಸಕ್ಕೆ ಕೈಹಾಕಬಾರದು. ಈಗಾಗಲೇ ಮುಂಗಾರು ಪೂರ್ವ ಉತ್ತಮ ಮಳೆಯಾಗಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಜನರು ಜಿಲ್ಲಾಡಳಿತಕ್ಕೆ ಸ್ಪಂದಿಸಬೇಕು’ ಎಂದರು.

ಕಾಮಗಾರಿ ವೀಕ್ಷಣೆ: ‘ನಗರದ ಹೊಸ ಕುರುಬರ ಬೀದಿಯಲ್ಲಿ ಕುರುಬ ಜನಾಂಗದ ಸಮುದಾಯ ಭವನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ವೀಕ್ಷಣೆ ಮಾಡಿ ಕಾಮಗಾರಿಯನ್ನು ಗುಣಮಟ್ಟದಲ್ಲಿ ಮಾಡಿ ಹಾಗೂ ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಗೀತಾ ಹುಡೇದ, ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ನವೀನ್ ಕುಮಾರ್, ತಹಶೀಲ್ದಾರ್ ಮಂಜುಳ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ಡಿವೈಎಸ್‌ಪಿ ನಾಗರಾಜು ಸೇರಿದಂತೆ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

‘ಭಯ ಬೇಡ, ಅಗತ್ಯ ವ್ಯವಸ್ಥೆ’

‘ತಾಲ್ಲೂಕಿನ ಸತ್ತೇಗಾಲ, ಯಡಕುರಿಯಾ, ಧನಗೆರೆ, ಸರಗೂರು, ಹರಳೆ, ದಾಸನಪುರ, ಹಳೆ ಅಣಗಳ್ಳಿ, ಹಳೆ ಹಂಪಾಪುರ, ಮುಳ್ಳೂರು ಗ್ರಾಮಗಳು ಪ್ರವಾಹದ ಸಂದರ್ಭದಲ್ಲಿ ಮುಳುಗಡೆಯಾಗುತ್ತವೆ. ಗ್ರಾಮದವರು ಭಯಪಡುವ ಅಗತ್ಯವಿಲ್ಲ. ನಿಮ್ಮ ಜೊತೆ ನಾವಿದ್ದೇವೆ. ಒಂದು ವೇಳೆ ನದಿಯಲ್ಲಿ ನೀರು ಹೆಚ್ಚಾದರೆ ಎಲ್ಲರೂ ಗ್ರಾಮ ತೊರೆದು ಪರಿಹಾರ ಕೇಂದ್ರಗಳಿಗೆ ತೆರಳಬೇಕು. ನಾವು ನಿಮಗೆ ಬೇಕಾದ ಅಗತ್ಯ ವ್ಯವಸ್ಥೆ ಮಾಡಲಿದ್ದೇವೆ’ ಎಂದು ಚಾರುಲತಾ ಸೋಮಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT