ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದ ಶ್ರಾವಣ

ಕೋವಿಡ್‌ನಿಂದ ಮಂಕಾಗಿದ್ದ ಮಾರುಕಟ್ಟೆಯಲ್ಲಿ ಚೈತನ್ಯ, ವರಮಹಾಲಕ್ಷ್ಮಿ ಹಬ್ಬದ ಕಾರಣಕ್ಕೆ ಹೂವುಗಳಿಗೆ ಬೇಡಿಕೆ
Last Updated 30 ಜುಲೈ 2020, 10:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಆಷಾಢ ಕಳೆದು ಶ್ರಾವಣ ತಿಂಗಳು ಆರಂಭವಾದರೂ ಈ ಬಾರಿ ಕೋವಿಡ್‌ ಭೀತಿಯ ಕಾರಣಕ್ಕೆ ಮಾರುಕಟ್ಟೆಯಲ್ಲಿ ಹಬ್ಬದ ಸಡಗರ ಪ್ರತಿ ವರ್ಷದಂತೆ ಕಾಣುತ್ತಿಲ್ಲ. ಖರೀದಿಯ ಭರಾಟೆ ಎಂದಿನಂತಿಲ್ಲದೆ ಹೋದರೂ ಹಬ್ಬದ ಕಾರಣಕ್ಕೆ ಹೂವು, ಹಣ್ಣುಗಳ ಬೆಲೆಗಳು ‘ದುಬಾರಿ’ಯಾಗಿವೆ.

ಮಾರ್ಚ್‌ನಲ್ಲಿ ಲಾಕ್‌ಡೌನ್‌ ಜಾರಿಗೊಂಡ ನಂತರದಲ್ಲಿ ಶುಭ ಸಮಾರಂಭಗಳು ನಡೆಯದೇ, ದೇವಾಲಯಗಳು ಬಾಗಿಲು ಮುಚ್ಚಿದ ಕಾರಣಕ್ಕೆ ಮುಸುಕು ಹೊದ್ದು ಮಲಗಿದ್ದ ಹೂವಿನ ಮಾರುಕಟ್ಟೆಯಲ್ಲಿ ಶ್ರಾವಣದ ಬೆನ್ನಲ್ಲೇ ಸಂಚಲನ ಮೂಡಿದೆ.

ವರಮಹಾಲಕ್ಷ್ಮಿ ಹಬ್ಬದ ಕಾರಣಕ್ಕೆ ನಗರದ ಮಾರುಕಟ್ಟೆಯಲ್ಲಿ ಗುರುವಾರ ಹೂವು, ಹಣ್ಣಿನ ವ್ಯಾಪಾರ ಸ್ವಲ್ಪ ಮಟ್ಟಿಗೆ ಗರಿಗೆದರಿತ್ತು. ಸೋಂಕಿನ ಭಯಕ್ಕೆ ಅದ್ದೂರಿತನ ಬದಿಗಿಟ್ಟು ಜನರು ಸರಳ ಆಚರಣೆಗೆ ಪೂರಕವಾಗಿ ಮಾರುಕಟ್ಟೆಯಲ್ಲಿ ಖರೀದಿ ನಡೆಸಿದರು.

ಕೋವಿಡ್‌ ಕಾರಣಕ್ಕೆ ನೆಲ ಕಚ್ಚಿ ₹100 ಆಸುಪಾಸಿನಲ್ಲಿದ್ದ ಬಹುಪಾಲು ಹೂವುಗಳ ಬೆಲೆ ಗುರುವಾರ ಹೊತ್ತಿಗೆ ಗಗನಮುಖಿಯಾಗಿದ್ದವು. ಸಾಮಾನ್ಯವಾಗಿ ಕೆ.ಜಿ.ಗೆ ₹500ರಂತೆ ಮಾರಾಟವಾಗುತ್ತಿದ್ದ ಕನಕಾಂಬರ ದುಬಾರಿಯಾಗಿದ್ದು, ಪ್ರತಿ ಕೆ.ಜಿ.ಗೆ ₹2,000ಕ್ಕೇರಿದೆ. ಸೇವಂತಿಗೆ, ಮಲ್ಲಿಗೆ, ಗುಲಾಬಿ ದುಬಾರಿಯಾಗಿವೆ. ಹಣ್ಣಿನ ದರಗಳು ಏರಿಕೆ ಕಂಡಿವೆ.

ಗುಲಾಬಿ ಒಂದು ಕೆ.ಜಿ ₹200, ಸೇವಂತಿ ₹200, ಚೆಂಡೂ ಹೂವು ₹100, ಕಾಕಡಾ ₹600 ಕ್ಕೆ ಮಾರಾಟವಾಗುತ್ತಿದ್ದವು. ಹೀಗಾಗಿ, ಕೋವಿಡ್‌ ಭೀತಿಯ ನಡುವೆ ಹೂವು ಬೆಳೆದವರ ಮೊಗದಲ್ಲಿ ಗುರುವಾರ ಸಂತಸ ಲಾಸ್ಯವಾಡುತ್ತಿತ್ತು.

ಒಂದು ಕಟ್ಟು ಬಟನ್ಸ್‌ ₹90, ಐದಾರು ಹೂವುಗಳಿರುವ ಜರ್ಬೆರಾ ಕಟ್ಟು ₹40 ರಿಂದ ₹60ಕ್ಕೆ, ತಾವರೆ ಹೂವು ಗಾತ್ರ ಆಧರಿಸಿ ₹10 ರಿಂದ ₹30ರ ವರೆಗೆ ಮಾರಾಟವಾಗುತ್ತಿದ್ದವು. ಚಿಕ್ಕ ಬಾಳೆಕಂದು ಜೋಡಿಗೆ ₹30, ದೊಡ್ಡ ಕಂದುಗಳು ₹50 ರಂತೆ ಮಾರಾಟವಾಗುತ್ತಿದ್ದವು. ತರಕಾರಿಗಳ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ.

ಹಣ್ಣುಗಳ ಬೆಲೆ ಸ್ವಲ್ಪ ಏರಿಕೆ

ಹಣ್ಣುಗಳ ಪೈಕಿ ಏಲಕ್ಕಿ ಬಾಳೆ ಒಂದು ಕೆ.ಜಿಗೆ ₹60ರ ವರೆಗೆ ಬಿಕರಿಯಾಗುತ್ತಿತ್ತು. ಇನ್ನು ಪಚ್ಚೆ ಬಾಳೆ ₹20ರ ವರೆಗೆ ಮಾರಾಟವಾಗುತ್ತಿತ್ತು. ಮೊಸಂಬಿ ₹55, ಕಿತ್ತಳೆಹಣ್ಣು ₹75, ಮರಸೇಬು ₹100, ವಾಷಿಂಗ್ಟನ್ ಸೇಬು ₹220, ದಾಳಿಂಬೆ ₹110ರ ವರೆಗೆ ಮಾರಾಟವಾಗುತ್ತಿದ್ದವು. ಫೈನಾಪಲ್‌ ಒಂದು ಜೋಡಿಗೆ ಗಾತ್ರಕ್ಕೆ ಅನುಸಾರವಾಗಿ ₹40 ರಿಂದ ₹100ರ ವರೆಗೆ ಮಾರಾಟ ಮಾಡಲಾಗುತ್ತಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT