ಸೋಮವಾರ, ನವೆಂಬರ್ 18, 2019
26 °C
ಹಿರಿಯ ನಾಗರಿಕರಿಗಾಗಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಆರೋಗ್ಯದ ಕಡೆ ಗಮನ ಹರಿಸಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಸಮಾಜಕ್ಕೆ ಅತ್ಯಮೂಲ್ಯ ಆಸ್ತಿಯಾದ ಹಿರಿಯ ನಾಗರಿಕರು ಇಳಿ ವಯಸ್ಸಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿಶೇಷ ಗಮನ ನೀಡಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಲಕ್ಷ್ಮಿದೇವಮ್ಮ ಹೇಳಿದರು.

ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಹಿರಿಯ ನಾಗರಿಕರಿಗಾಗಿ ಆಯೋಜಿಸಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಬದಲಾದ ಕಾಲಘಟ್ಟದಲ್ಲಿ ದೈಹಿಕ ಶ್ರಮ ಕಡಿಮೆ ಆಗುತ್ತಿರುವುದರಿಂದ ಜನರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ. ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಮನಸ್ಸಿಗೆ ನೆಮ್ಮದಿ ಪಡೆಯುವ ನಿಟ್ಟಿನಲ್ಲಿ ಹಿರಿಯ ನಾಗರಿಕರು ದೈಹಿಕ ಚಟುವಟಿಕೆಗಳಿಗೆ, ಕ್ರೀಡೆಗಳಲ್ಲಿ ತೊಡಗುವುದಕ್ಕೆ ಒತ್ತು ನೀಡಬೇಕು’ ಎಂದು ತಿಳಿಸಿದರು.

‘ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದೆ. ಅಧಿಕಾರಿಗಳು ಈ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು. ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಹಿರಿಯ ನಾಗರಿಕರನ್ನು ಇಂದಿನ ಯುವ ಪೀಳಿಗೆ ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು’ ಎಂದರು.

ಹಂಗಾಮಿ ಜಿಲ್ಲಾ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ರಾಜೇಂದ್ರ ಪ್ರಸಾದ್‌, ಸರ್ಕಾರಿ ನಿವೃತ್ತ ನೌಕರ ಕ್ಷೇಮಾಭಿವೃದ್ದಿ ಸಂಘದ ಖಜಾಂಚಿ ಸುಬ್ಬರಾಯಪ್ಪ, ಆಶಾ ಫೌಂಡೇಶನ್ ಮುಖ್ಯಸ್ಥ ಗೋಪಾಲ್, ಸುಲ್ತಾನ್ ಪೇಟೆ ಸಾಯಿ ವೃದ್ಧಾಶ್ರಮ ಮುಖ್ಯಸ್ಥ ಮುರಳಿ, ಕೈವಾರ ಚೈತನ್ಯ ವೃದ್ಧಾಶ್ರಮ ಮುಖ್ಯಸ್ಥ ಚಂದ್ರಶೇಖರ್, ಮದರ್ ಥೆರೆಸಾ ಚಾರಿಟಬಲ್ ಟ್ರಸ್ಟ್ ವ್ಯವಸ್ಥಾಪಕಿ ನಿರ್ಮಲಾ ಮೇರಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)