ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರಾವರಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿ’

Last Updated 13 ಏಪ್ರಿಲ್ 2018, 10:10 IST
ಅಕ್ಷರ ಗಾತ್ರ

ಮೊಳಕಾಲ್ಮುರು: ‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನೀರಾವರಿ ಯೋಜನೆಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಿದೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ಇಲ್ಲಿ ಗುರುವಾರ ನಡೆದ ‘ವಿಕಾಸ ಪರ್ವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಿತ್ಯ ಮಾಧ್ಯಮಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚದ ಜಾಹೀರಾತುಗಳನ್ನು ನೀಡಿ ಮಾಡದ ಯೋಜನೆಗಳನ್ನು ಮಾಡಿದ್ದೇವೆ ಎಂದು ಜನರನ್ನು ಮರಳು ಮಾಡಲಾಗಿದೆ. ಜನರ ತೆರಿಗೆ ಹಣವನ್ನು ವಿಧಾನಸೌಧದಲ್ಲಿ ಕುಳಿತು ಪೋಲು ಮಾಡಲಾಗಿದೆ. ಚುನಾವಣೆ ವೇಳೆ ಮತದಾರರು ಇದನ್ನು ಪ್ರಶ್ನಿಸಬೇಕು’ ಎಂದು ಹೇಳಿದರು.

ಸರ್ಕಾರಗಳು ಕೆಟ್ಟ ಆಡಳಿತ ನೀಡಲು ಪರೋಕ್ಷವಾಗಿ ಮತದಾರರರೇ ಕಾರಣ. ಮತ ಹಾಕಿದರೆ ಕೆಲಸ ಮುಗಿಯಿತು ಎಂಬ ಭಾವನೆಯಿಂದ ಹೊರಬಂದು ಸರ್ಕಾರದ ತಪ್ಪುಗಳನ್ನು ಪ್ರಶ್ನಿಸಬೇಕು. ಈ ಮೂಲಕ ತಮ್ಮ ಮಕ್ಕಳಿಗೆ ಭವಿಷ್ಯ ಕಟ್ಟಿಕೊಡಲು ಸಾಧ್ಯ. ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ. ಮತ್ತೊಂದೆಡೆ ಸ್ತ್ರೀಶಕ್ತಿ ಗುಂಪುಗಳ ₹ 4,300 ಕೋಟಿ ಸಾಲ ವಸೂಲಿಗೆ ರಾಜ್ಯ ಸರ್ಕಾರ ನೋಟಿಸ್‌ ಜಾರಿಗೊಳಿಸಿದೆ ಎಂದು ದೂರಿದರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಮಾದರಿ ಕೃಷಿ ನೀತಿ ಮೂಲಕ ಸ್ವಗ್ರಾಮಗಳಲ್ಲಿ ಕೆಲಸ ನೀಡಲಾಗುವುದು. ನೀರಾವರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

ಪಕ್ಷದ ನಿಯೋಜಿತ ಅಭ್ಯರ್ಥಿ ಎತ್ನಟ್ಟಿಗೌಡ, ವಿಧಾನ ಪರಿಷತ್‌ ಸದಸ್ಯ ಚೌಡಾರೆಡ್ಡಿ ತೂಪಲ್ಲಿ, ಜಿಲ್ಲಾ ಘಟಕದ ಅಧ್ಯಕ್ಷ ಡಿ. ಯಶೋಧರ್ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಟಿ.ಎ. ಸರವಣ, ಮುಖಂಡರಾದ ದೇವರಾಜ್‌, ಮುರಳೀಧರ ನಾಯಕ್‌, ಲಿಲಿತಾ ಕೃಷ್ಣಮೂರ್ತಿ, ರಾಗಿ ಶಿವಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT