ಜನಪದದ ರಕ್ಷಣೆ ಪ್ರತಿಯೊಬ್ಬರ ಹೊಣೆ

6
ನಗರದಲ್ಲಿ ‘ಕಲಾಜ್ಯೋತಿ ಜನಪದ ಕಲಾಜಾತ್ರೆ’ ಆಯೋಜನೆ

ಜನಪದದ ರಕ್ಷಣೆ ಪ್ರತಿಯೊಬ್ಬರ ಹೊಣೆ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಜನಪದ ಸಾಹಿತ್ಯವನ್ನು ಮನೆ ಮನೆಗೂ ತಲುಪಿಸುವ ಕೆಲಸ ಆಗಬೇಕಾಗಿದೆ. ದೇಶಿಯ ಪರಂಪರೆ, ಕಲೆ, ಸಂಸ್ಕೃತಿಯ ಭಾಗವಾಗಿರುವ ಜನಪದವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಉಳಿಸಿ ಬೆಳೆಸಬೇಕಾಗಿದೆ’ ಎಂದು ಕೆ.ವಿ ಮತ್ತು ಪಂಚಗಿರಿ ದತ್ತಿಗಳ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್‌ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾಜ್ಯೋತಿ ಜನಪದ ಕಲಾ ಸಂಸ್ಥೆ ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಕಲಾಜ್ಯೋತಿ ಜನಪದ ಕಲಾಜಾತ್ರೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇವತ್ತು ಜನರು ಟಿ.ವಿ ಸೇರಿದಂತೆ ನವ ಮಾಧ್ಯಮಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವ ಕಾರಣಕ್ಕೆ ಕಲೆಗಳು ಮತ್ತು ಕಲಾವಿದರ ಬಗ್ಗೆ ಅಸಡ್ಡೆ ಹೆಚ್ಚುತ್ತಿರುವುದು ಶೋಚನೀಯ. ಬೂಟಾಟಿಕೆ ಇಲ್ಲದೇ ಜನರಲ್ಲಿ ನೈಜತೆಯನ್ನು ಪ್ರತಿಬಿಂಬಿಸುವ ಸನಾತನ ಜನಪದ ಸಾಂಸ್ಕೃತಿಕ ಕಲೆಗಳನ್ನು ಮುಂದಿನ ಪೀಳಿಗೆಗೂ ಉಳಿಸಿ, ಬೆಳೆಸುವ ಹೊಣೆ ನಾಗರಿಕ ಸಮಾಜದ ಮೇಲಿದೆ’ ಎಂದು ತಿಳಿಸಿದರು.

‘ನಮ್ಮ ಪೂರ್ವಜರು ಜನಪದ ಕಲೆಗಳನ್ನು ತಮ್ಮ ಬದುಕಿನ ಭಾಗವಾಗಿ ಮಾಡಿಕೊಂಡು, ಪ್ರೋತ್ಸಾಹ ನೀಡುತ್ತಿದ್ದರು. ಆದರೆ ಇಂದಿನವರು ಟಿ.ವಿ ಮಾಧ್ಯಮಗಳ ಎದುರು ಕುಳಿತು ನಮ್ಮ ನೆಲಮೂಲದ ಕಲೆಗಳನ್ನು ಮರೆಯುತ್ತಿದ್ದಾರೆ. ಪರಿಣಾಮ ಕಲಾವಿದರ ಬದುಕು ಸಂಕಷ್ಟ ಸಿಲುಕುವಂತಾಗಿದೆ. ಪ್ರೋತ್ಸಾಹವಿಲ್ಲದೆ ಕಲಾವಿದರು ವೇಷ ಹಾಕಿಕೊಂಡು ಬದುಕಬೇಕಾದ ಸ್ಥಿತಿ ತಲೆದೋರಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಮಾಜದ ಪ್ರತಿಯೊಬ್ಬರಿಗೂ ಸುಲಭವಾಗಿ, ಸರಳವಾಗಿ ಅರ್ಥವಾಗುವ ಜನಪದ ಸಂಪತ್ತನ್ನು ಉಳಿಸಿ, ಬೆಳೆಸಬೇಕಾಗಿದೆ. ಆಗ ಮಾತ್ರ ನಾವು ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಪರಿಚಯಿಸಲು ಸಾಧ್ಯ. ಜನಪದ ಕಲಾತಂಡಗಳನ್ನು ಪ್ರೋತ್ಸಾಹಿಸುವ ಕೆಲಸ ಹೆಚ್ಚೆಚ್ಚು ನಡೆಯಬೇಕಾಗಿದೆ’ ಎಂದರು.

ಕಲಾಜಾತ್ರೆಯಲ್ಲಿ ವೀರಗಾಸೆ, ನಾಸಿಕ್ ಡೋಲ್, ತಮಟೆ ವಾದನ, ಕೀಲು ಕುದುರೆ, ಗೊಂಬೆ ಕುಣಿತ, ಗೊರವರ ಕುಣಿತ, ಕೊಂಬು ಕಹಳೆ, ಏಕಪಾತ್ರಾಭಿನಯ, ಜನಪದ ಮತ್ತು ಭಕ್ತಿಗೀತೆಗಳ ಗಾಯನ, ಭರತ ನಾಟ್ಯ, ಶಿವಭಜನೆ ತಂಡದ ಕಲಾವಿದರು ಪ್ರದರ್ಶನ ನೀಡಿದರು.

ಉದ್ಯಮಿಗಳಾದ ಎಸ್‌.ಆರ್.ರಾಮು, ಮಹೇಶ್, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಅಗಲಗುರ್ಕಿ ಚಲಪತಿ, ಕಲಾಜ್ಯೋತಿ ಜಾನಪದ ಕಲಾ ಸಂಸ್ಥೆ ಅಧ್ಯಕ್ಷ ವೀರಭದ್ರಯ್ಯ, ಪ್ರಧಾನ ಕಾರ್ಯದರ್ಶಿ ಕೊತ್ತನೂರು ಗಂಗಾಧರ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !