ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ನಂದಿ ಬೆಟ್ಟದಲ್ಲಿ ವಿದೇಶಿಯರ ಹೆಜ್ಜೆ ಗುರುತು

Published : 2 ಸೆಪ್ಟೆಂಬರ್ 2024, 6:10 IST
Last Updated : 2 ಸೆಪ್ಟೆಂಬರ್ 2024, 6:10 IST
ಫಾಲೋ ಮಾಡಿ
Comments

ಶಿಡ್ಲಘಟ್ಟ: 1791ರಿಂದ 1881 ರವರೆಗೆ ನಂದಿಬೆಟ್ಟ, ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿತ್ತು. ಬ್ರಿಟಿಷರ ಪಾಲಿಗಿದು ‘ಲಿಟಲ್ ಇಂಗ್ಲೆಂಡ್’ ಆಗಿತ್ತು. ಅವರು ತಂಗಲೆಂದೇ ಇಲ್ಲಿ ಬಂಗಲೆ ನಿರ್ಮಿಸಿದರು. ನೋಡ ನೋಡುತ್ತಿದ್ದಂತೆಯೇ ದುರ್ಗವನ್ನು ಸುಂದರ ಗಿರಿಧಾಮವನ್ನಾಗಿ ಬ್ರಿಟಿಷರು ರೂಪಾಂತರಿಸಿದರು. ಮೊಟ್ಟಮೊದಲು ನಂದಿಬೆಟ್ಟವನ್ನು ಅಭಿವೃದ್ಧಿಪಡಿಸಿದ ಬ್ರಿಟಿಷರಲ್ಲಿ ಕರ್ನಲ್ ಕುಪ್ಪೇಜ್ (1799-1808) ಪ್ರಮುಖರು.

17ನೇ ಶತಮಾನದಲ್ಲಿ ಕರ್ನಲ್ ಕುಪ್ಪೇಜ್ ಮೊಟ್ಟಮೊದಲು ಯೂರೋಪಿನಲ್ಲಿ ಬೆಳೆಯುತ್ತಿದ್ದ ಗಿಡಗಳನ್ನು ತರಿಸಿ ನಂದಿ ಬೆಟ್ಟದ ಮೇಲೆ ನೆಡಿಸಿ ಉದ್ಯಾನ ಮಾಡಿದ್ದರು. ಈಗಲೂ ಅಮೃತಸರೋವರ ಹಿಂಭಾಗದಲ್ಲಿ ಎರಡೂವರೆ ಶತಮಾನದಷ್ಟು ಹಳೆಯ ಮರಗಳಿರುವ ಕುಪ್ಪೇಜ್ ಉದ್ಯಾನವನ್ನು ನೋಡಬಹುದಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಮೊಟ್ಟಮೊದಲು ಆಲೂಗಡ್ಡೆಯನ್ನು ಪರಿಚಯಿಸಿ ಸ್ಥಳೀಯ ರೈತರಿಗೆ ಬೆಳೆಯಲು ಪ್ರೋತ್ಸಾಹಿಸಿದ ಹೆಗ್ಗಳಿಗೆ ಸಹ ಕರ್ನಲ್ ಕುಪ್ಪೇಜ್‌ಗೆ ಸಲ್ಲುತ್ತದೆ.

ಈಸ್ಟ್ ಇಂಡಿಯಾ ಕಂಪೆನಿಯ ಮದ್ರಾಸ್‌ ಆರ್ಮಿಯಲ್ಲಿ ಜನರಲ್‌ ಆಗಿದ್ದ ಜೇಮ್ಸ್ ವೆಲ್ಷ್‌ ನಂದಿಬೆಟ್ಟದ ಬಳಿ ತನ್ನ ತುಕಡಿಯೊಂದಿಗೆ 1810-11ರಲ್ಲಿ ಇದ್ದ. ಆತ ತನ್ನ 40 ವರ್ಷಗಳ ಮಿಲಿಟರಿ ಸೇವೆಯ ಬಗ್ಗೆ ‘ಮಿಲಿಟರಿ ರೆಮಿನೆಸನ್ಸಸ್‌’ ಎಂಬ ಪುಸ್ತಕದಲ್ಲಿ ದಾಖಲಿಸಿಟ್ಟಿದ್ದಾರೆ. ಅದರಲ್ಲಿನ ನಂದಿಬೆಟ್ಟದ ಚಿತ್ರಣವನ್ನೂ ಬಲು ಸುಂದರವಾಗಿ ಬಣ್ಣಿಸಿದ್ದಾರೆ.

ಮಾರ್ಕ್ ಉಳಿಸಿದ ಮಾರ್ಕ್ ಕಬ್ಬನ್: 1834ರಲ್ಲಿ ಸರ್ ಮಾರ್ಕ್ ಕಬ್ಬನ್ ಮೈಸೂರು ರಾಜ್ಯದ ಕಮಿಷನರ್ ಆಗಿ ನೇಮಕಗೊಂಡರು. ಅವರು ನಂದಿ ಬೆಟ್ಟದ ಅಭಿವೃದ್ಧಿಗೆ ಆಸಕ್ತಿ ವಹಿಸಿದರು. ತನ್ನ ಮೂಲ ಸ್ಥಳ ‘ಐಲ್ ಆಫ್ ಮ್ಯಾನ್’ ನೆನಪಿಸುವ ನಂದಿಬೆಟ್ಟಕ್ಕೆ ಅವರು ಆಕರ್ಷಿತರಾಗಿದ್ದರು. ರಾಜ್ಯವನ್ನು ಎಂಟು ಕಂದಾಯ ವಿಭಾಗಗಳಾಗಿ ವಿಂಗಡಿಸಿದರು ಕಬ್ಬನ್. ಅವುಗಳಲ್ಲಿ ನಂದಿದುರ್ಗ ವಿಭಾಗವೂ ಒಂದಾಯಿತು.

ತಾನು ಕಮೀಷನರ್ ಆದ ನಂತರ ಕಬ್ಬನ್ ಬೇಸಿಗೆಯಲ್ಲಿ ನಂದಿಬೆಟ್ಟದಲ್ಲಿ ತಂಗುತ್ತಿದ್ದರು. 1848ರಲ್ಲಿ ತನ್ನ ಎರಡನೇ ಅಧಿಕೃತ ನಿವಾಸವಾಗಿ ಅವರು ನಂದಿಬೆಟ್ಟದಲ್ಲಿ ‘ಕಬ್ಬನ್ ಹೌಸ್’ ಅನ್ನು ನಿರ್ಮಿಸಿದರು. ಕಬ್ಬನ್, ಬೇಸಿಗೆಯ 3-4 ತಿಂಗಳು ನಂದಿ ಬೆಟ್ಟದ ‘ಕಬ್ಬನ್ ಹೌಸ್’ ನಲ್ಲಿದ್ದುಕೊಂಡೇ ಆಡಳಿತ ನಡೆಸುತ್ತಿದ್ದರು.

ನಂದಿಬೆಟ್ಟದಲ್ಲಿ ಅತ್ಯಂತ ಎತ್ತರದ ಸ್ಥಳದಲ್ಲಿ ಕಬ್ಬನ್ ಹೌಸ್ ನಿರ್ಮಿಸಲಾಗಿದೆ. ಈಗಲೂ, ‘ಸರ್ ಮಾರ್ಕ್ ಕಬ್ಬನ್, ಕಮೀಷನರ್ ಆಫ್ ಮೈಸೂರ್ (1834-1861) ಅವರ ಬೇಸಿಗೆ ನಿವಾಸ’ ಎಂಬುದಾಗಿ ಕಟ್ಟಡದ ಮೇಲಿನ ಫಲಕದಲ್ಲಿ ಕಾಣಬಹುದು.

ವಿದೇಶಿಯರು ಕಟ್ಟಿಸಿರುವ ಐತಿಹಾಸಿಕ ಕಟ್ಟಡ: ಕಬ್ಬನ್ ಹೌಸ್ ಸುತ್ತ ಇನ್ನೂ ಕೆಲವು ಐತಿಹಾಸಿಕ ಕಟ್ಟಡಗಳಿವೆ. ಅವುಗಳಲ್ಲಿ ಮುಖ್ಯವಾದುದು ಓಕ್ ಲ್ಯಾಂಡ್ಸ್ ಹೌಸ್. ಓಕ್ ಜಾತಿಯ ಮರಗಳು ಇಲ್ಲಿ ಹೆಚ್ಚಾಗಿದ್ದುದರಿಂದ ಈ ಹೆಸರು ಬಂದಿದೆ. 1850ರಲ್ಲಿ ಸರ್ ಮಾರ್ಕ್ ಕಬ್ಬನ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಕನ್ನಿಂಗ್ ಹ್ಯಾಮ್ ತಮ್ಮ ವಾಸಕ್ಕಾಗಿ ಕಟ್ಟಿಕೊಂಡ ಬಂಗಲೆಯಿದು. ಗಾಂಧೀಜಿ ಬಂದಾಗ ಉಳಿದಿದ್ದರಿಂದಾಗಿ ಇದು ‘ಗಾಂಧಿ ನಿಲಯ’ವೆಂದು ಹೆಸರಾಗಿದೆ. ಕರ್ನಲ್ ಹಿಲ್ ಕಟ್ಟಿಸಿದ್ದ ಗ್ಲೆಂಟಿಲ್ಟ್ಸ್ ಹೌಸ್, ಬೆಟ್ಟದ ಮೇಲಿನ ಪ್ರಸ್ಥಭೂಮಿಯ ನಡುವಿನ ಕಣಿವೆಯ ಬಳಿ ಇದೆ. ಇದನ್ನು ನವೀಕರಿಸಿ ಅರ್ಕಾವತಿ ಕಾಟೇಜ್ ಎನ್ನುತ್ತಾರೆ.

ಚೀಫ್ ಎಂಜಿನಿಯರ್ ಜನರಲ್ ಸ್ಯಾಂಕಿ, ದೇವಸ್ಥಾನದ ಬಳಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಹಲವು ಕೋಣೆಗಳನ್ನು ಕಟ್ಟಿಸಿದ್ದರು. ಅದನ್ನು ಸ್ಯಾಂಕಿ ರೂಮ್ಸ್ ಎಂದು ಕರೆಯಲಾಗುತ್ತಿತ್ತು.

ಬ್ರಿಟಿಷ್ ಮಹಿಳೆಯ ಸಮಾಧಿ: ಆದರೆ ಜಾನ್ ಗ್ಯಾರೆಟ್ ಅವರಿಗೆ ಸೇರಿದ್ದ ಒಂದು ಸಣ್ಣ ಕಟ್ಟಡ ಮಾತ್ರ ಅವರ ಹೆಸರಿನಲ್ಲಿಯೇ ಉಳಿದಿತ್ತು. ಬೆಂಗಳೂರಿನಲ್ಲಿ ಬ್ರಿಟಿಷ್ ಕಾಲದಲ್ಲಿ ಶಿಕ್ಷಣ ಇಲಾಖೆ ನಿರ್ದೇಶಕರಾಗಿದ್ದ ಜಾನ್ ಗ್ಯಾರೆಟ್ ಅವರ ಪತ್ನಿ ಸೋಫಿಯಾ ಗ್ಯಾರೆಟ್ ಅವರ ಸಮಾಧಿ ಬ್ಯಾಂಬೂ ಹೌಸ್ ಪ್ರದೇಶದಲ್ಲಿ ಒಂದು ಮೂಲೆಯಲ್ಲಿ ಇದೆ. ‘ನಂದಿದುರ್ಗದಲ್ಲಿ ಏಪ್ರಿಲ್ 10, 1867 ರಂದು ನಿಧನರಾದ ಜಾನ್ ಗ್ಯಾರೆಟ್‌ರ ಪ್ರಿಯ ಪತ್ನಿ ಸೋಫಿಯಾ ಗ್ಯಾರೆಟ್ ಅವರ ನೆನಪಿನಲ್ಲಿ’ ಎಂದು ಅದರ ಮೇಲೆ ಬರೆಯಲಾಗಿದೆ. ಗ್ಯಾರೆಟ್ ದಂಪತಿ ತಮ್ಮ ಮಗಳು ಮತ್ತು ಅಳಿಯ ಜೊತೆಯಲ್ಲಿ ನಂದಿಬೆಟ್ಟದ ಮೇಲಿನ ತಮ್ಮ ಮನೆಯಲ್ಲಿ ತಂಗುತ್ತಿದ್ದರು. ಗ್ಯಾರೆಟ್ ದಂಪತಿಯ ಅಳಿಯ ಬೆಂಜಮಿನ್ ಲೂಯಿಸ್ ರೈಸ್ ಶಾಸನಶಾಸ್ತ್ರದ ಪಿತಾಮಹ ಎಂದೇ ಹೆಸರಾದವರು.

ಭಾರತದ ಮೊಟ್ಟಮೊದಲ ಗವರ್ನರ್ ಜನರಲ್ ಅವರ ಪತ್ನಿ ಲೇಡಿ ಕ್ಯಾನಿಂಗ್ 1859ರಲ್ಲಿ ನಂದಿಬೆಟ್ಟಕ್ಕೆ ಭೇಟಿ ನೀಡಿ ಕೆಲ ಕಾಲ ತಂಗಿದ್ದರು. 1963– 70ರವರೆಗೆ ಮೈಸೂರಿನ ಕಮಿಷನರ್ ಆಗಿದ್ದ ಎಲ್.ಬಿ.ಬೌರಿಂಗ್ ಅವರ ಪತ್ನಿ 1968 ರಲ್ಲಿ ಇಲ್ಲಿ ತಂಗಿದ್ದರು. ಇವರು ತಮ್ಮ ಪತ್ರಗಳು ಹಾಗೂ ಪುಸ್ತಕದ ಮೂಲಕ ನಂದಿಬೆಟ್ಟದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.

ಸರ್ ಮಾರ್ಕ್ ಕಬ್ಬನ್
ಸರ್ ಮಾರ್ಕ್ ಕಬ್ಬನ್
ಸೋಫಿಯಾ ಗ್ಯಾರೆಟ್ ಸಮಾಧಿ
ಸೋಫಿಯಾ ಗ್ಯಾರೆಟ್ ಸಮಾಧಿ

'ಕಬ್ಬನ್ ಹೌಸ್’ ಮಾರಾಟ

ಸರ್ ಮಾರ್ಕ್ ಕಬ್ಬನ್ 1861ರಲ್ಲಿ ಕಮಿಷನರ್ ಪದವಿಗೆ ರಾಜೀನಾಮೆಯನ್ನಿತ್ತು ತನ್ನ ಮೂಲ ಸ್ಥಳ ‘ಐಲ್ ಆಫ್ ಮ್ಯಾನ್’ ಗೆ ಹೊರಡುತ್ತಾರೆ. ಜಿ.ಜಿ.ಬ್ರೌನ್ ಎಂಬ ಬ್ರಿಟಿಷ್ ಮೂಲದ ವ್ಯಕ್ತಿ ‘ಕಬ್ಬನ್ ಹೌಸ್’ ಸೇರಿದಂತೆ ಸುತ್ತಮುತ್ತಲಿನ ಸ್ಥಳವನ್ನು ಸರ್ ಮಾರ್ಕ್ ಕಬ್ಬನ್ ಅವರು ಹೊರಡುವ ಮುನ್ನ ಕೊಂಡುಕೊಂಡರು. ಹಾಗಾಗಿ ಆ ಕಾಲಘಟ್ಟದಲ್ಲಿ ‘ಬ್ರೌನ್ಸ್ ಪ್ರಾಪರ್ಟಿ’ ಅಥವಾ ‘ಬ್ರೌನ್ಸ್‌ ಲಾಡ್ಜ್‌’ ಎಂದು ಈ ಕಟ್ಟಡವನ್ನು ಕರೆಯಲಾಗುತ್ತಿತ್ತು. ನಂತರ 1892ರಲ್ಲಿ ಮೈಸೂರು ಸರ್ಕಾರ ಜಿ.ಜಿ.ಬ್ರೌನ್‌ಗೆ ₹15 ಸಾವಿರ ನೀಡಿ ಅವರಿಂದ ‘ಕಬ್ಬನ್ ಹೌಸ್’ ಹಾಗೂ ಸುತ್ತಮುತ್ತಲಿನ ಸ್ಥಳವನ್ನು ಖರೀದಿಸಿತು. ಇದರೊಂದಿಗೆ ಬೆಟ್ಟದ ಮೇಲಿನ ಎಲ್ಲಾ ಕಟ್ಟಡಗಳು ಮತ್ತು ಆಸ್ತಿಗಳು ಸರ್ಕಾರದ ಸ್ವತ್ತಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT