ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಧಾವಂತ ಮರೆತು, ಎಲ್ಲರೊಡನೆ ಬೆರೆತು

ಲಾಕ್‌ಡೌನ್‌ ಪರಿಣಾಮದಿಂದ ಮನೆ, ಮನಗಳಲ್ಲಿ ಕಾಣಿಸುತ್ತಿರುವ ಜೀವನೋತ್ಸಾಹ ವಾತಾವರಣ, ದೇಶಿ ಆಟಗಳಲ್ಲಿ ಖುಷಿ ಕಂಡುಕೊಳ್ಳುತ್ತಿರುವ ಮಕ್ಕಳು
Last Updated 7 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಿತ್ಯ ಬೆಳಗಾದರೆ ಸಾಕು ಅಪ್ಪ ಆಫೀಸಿಗೆ, ಅಮ್ಮ ಕಚೇರಿಗೆ, ಮಕ್ಕಳು ಶಾಲೆಗಳಿಗೆ ಓಡುತ್ತಿದ್ದ ಧಾವಂತದ ಬದುಕಿಗೆ ಲಾಕ್‌ಡೌನ್‌ ಪರಿಣಾಮ ಅನಿವಾರ್ಯದ ವಿರಾಮ ದೊರೆತದ್ದೇ, ಮನೆ–ಮನೆಗಳಲ್ಲಿ, ಮನ–ಮನಗಳಲ್ಲಿ ಹೊಸ ಬಗೆಯ ಜೀವನೋತ್ಸಾಹ ಕಾಣಿಸಿಕೊಳ್ಳುತ್ತಿದೆ.

ಲಕ್ಷಗಟ್ಟಲೇ ಸಂಬಳ ಎಣಿಸುವ ಉದ್ಯೋಗಿ, ಕೋಟಿಗಟ್ಟಲೇ ವಹಿವಾಟು ಮಾಡುವ ಉದ್ಯಮಿ, ತಳ್ಳುಗಾಡಿಯಲ್ಲಿ ಹೊಟ್ಟೆ ಹೊರೆಯುವ ಕೊಳೆಗೇರೆಯ ತರಕಾರಿ ಮಾರುವವರ ಮನೆಗಳಲ್ಲಿ ಕೂಡ ಲಾಕ್‌ಡೌನ್‌ ತಂದ ಅನಿರೀಕ್ಷಿತ ಗಳಿಗೆ ಬದುಕಿನ ಮತ್ತೊಂದು ಮಜಲನ್ನು ಪರಿಚಯಿಸಲು ಆರಂಭಿಸಿದೆ.

ದಿನನಿತ್ಯದ ಧಾವಂತದ ಬದುಕಿಗೆ ಒಗ್ಗಿಹೋಗಿದ್ದ ಮನಸ್ಸುಗಳೀಗ, ಮನೆಯವರೊಂದಿಗೆ ಬೆರೆತು, ಅರಿವಿಲ್ಲದೆ ಕಳೆದುಕೊಂಡಿದ್ದ ಜೀವನ ಪ್ರೀತಿಯನ್ನು ಆಸ್ವಾದಿಸುತ್ತಿವೆ.

ಕೆಲಸಗಾರರ ದೇಖರೇಖಿಯಲ್ಲಿ ಮಕ್ಕಳನ್ನು ಬಿಟ್ಟು ತಮ್ಮದೇ ಕೆಲಸ, ವ್ಯಾಪಾರ, ಉದ್ಯಮದ ಒತ್ತಡದಲ್ಲಿ ಬದುಕು ಸವೆಸುತ್ತಿದ್ದ ಹೆತ್ತವರ ಜತೆಗೆ ಕ್ಲಾಸು, ಕೋಚಿಂಗ್‌, ಟ್ಯೂಷನ್, ಎಕ್ಸಾಂಗಳ ತಲೆಬಿಸಿಯ ನಡುವೆ ನಿತ್ಯ ಬೆಳಿಗ್ಗೆ ಓಡೋಡಿ ಬಸ್‌ ಹಿಡಿಯಲು ಕಾತರಿಸುತ್ತಿದ್ದ ವಿದ್ಯಾರ್ಥಿಗಳೆಲ್ಲ ಕೊರೊನಾ ಭೀತಿಯಿಂದಾಗಿ ಮನೆ ಸೇರಿ ಸ್ವಯಂ ಗೃಹಬಂಧನಕ್ಕೆ ಒಳಗಾಗಿದ್ದೆ, ಕೌಟುಂಬಿಕ ವಾತಾವರಣದಲ್ಲಿ ಖುಷಿಯ ಕಲರವ ಕೇಳುವಂತಾಗಿದೆ.

ಆಟವೆಂದರೆ ಟಾಮ್‌ ಆ್ಯಂಡ್‌ ಜೆರ್ರಿ, ಛೋಟಾ ಭೀಮ್‌, ಕ್ಯಾಂಡಿ ಕ್ರಶ್‌ನಂತಹ ವಿಡಿಯೊ ಗೇಮ್‌ಗಳಿಗೆ ಅಂಟಿಕೊಂಡಿದ್ದ ನಗರ ಪ್ರದೇಶಗಳ ಹೊಸ ತಲೆಮಾರಿನ ಮಕ್ಕಳಿಗೆ ಈಗೀಗ ಮನೆಯಲ್ಲಿರುವ ಹಿರಿಯರು ತಮ್ಮ ಬಾಲ್ಯದ ಆಡುತ್ತಿದ್ದ ದೇಸಿ ಆಟಗಳನ್ನು ಪರಿಚಯಿಸುತ್ತ, ಮನೆ ಒಳಗಿರಬೇಕಾದ ಬೇಸರ ನೀಗಿಸಿಕೊಳ್ಳುತ್ತಿದ್ದಾರೆ. ಹಿಂದೆಲ್ಲ ಮಕ್ಕಳಿಗೆ ಟೈಮ್‌ ನೀಡಲಾದ ಹೆತ್ತವರೆಲ್ಲ ಈಗ ಬಾಕಿ ಚುಕ್ತಾ ಮಾಡುತ್ತಿದ್ದಾರೆ.

ಧಾವಂತದ ಮನೆಗಳಲ್ಲಿ ಕೊರೊನಾ ತಂದ ವ್ಯವಧಾನದ ಕಾರಣಕ್ಕೆ ಪಗಡೆಯಾಟ, ಚೌಕಾಬಾರ, ಹಾವು-ಏಣಿ ಆಟ, ಅಳಗುಳಿಮನೆ, ಹುಲಿ- ಕುರಿ ಆಟ, ಆಡು- ಹುಲಿ ಆಟ ಮತ್ತು ಪದಬಂಧ, ಲಗೋರಿ, ಬುಗುರಿ, ಕವಡೆಯಾಟ, ಚನ್ನೆಮಣೆ ಮೊದಲಾದ ನೆಲಮೂಲದ ಆಟಗಳನ್ನು ನೋಡುವಂತಾಗಿದೆ. ಆ ಮೂಲಕ ಹಳೆ ಬೇರಿಗೂ, ಹೊಸ ಚಿಗುರಿಗೂ ನಂಟು ಬೆಸೆಯುವ ಕೆಲಸವನ್ನು ಲಾಕ್‌ಡೌನ್‌ ಮಾಡಿದೆ.

‘ಲೋಕೋ ಭಿನ್ನ ರುಚಿ’:ಎಂಬ ಮಾತಿನಂತೆ ಒಂದೇ ಕುಟುಂಬ ಸದಸ್ಯರ ನಡುವೆಯೇ ಹಲವು ಅಭಿರುಚಿಗಳಿರುವುದು ಸಹಜ. ಅದರಂತೆ ಕೆಲವರು ತಮ್ಮ ಅಭಿರುಚಿಗೆ ತಕ್ಕಂತೆ ದಿನಚರಿ ರೂಢಿಸಿಕೊಂಡು ಹೊತ್ತು ಕಳೆಯುವ ಉಪಾಯ ಕಂಡುಕೊಂಡಿದ್ದಾರೆ. ತರುಣಿಯರೆಲ್ಲ ‘ಯೂಟ್ಯೂಬ್‌’ ಗುರುವಿನ ಸಮ್ಮುಖದಲ್ಲಿ ಮನೆ ಮಂದಿಯನ್ನು ಬೆರಗುಗೊಳಿಸುವ ಹೊಸ ತಿಂಡಿ–ತಿನ್ನಿಸು, ಖಾದ್ಯಗಳನ್ನು ತಯಾರಿಸುವ ಸೋಜಿಗದ ಸಾಹಸಕ್ಕೆ ಇಳಿಯುತ್ತಿದ್ದಾರೆ.

ಇನ್ನು, ತರುಣರೆಲ್ಲ ಎಂದಿನಂತೆ ವಾಟ್ಸ್ಆ್ಯಪ್‌, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಸಾನಿಧ್ಯದಲ್ಲೇ ದಿನದೂಡುವ ಜತೆಗೆ ಸ್ನೇಹಿತರೊಂದಿಗೆ ಹರಟುವುದು, ಅಪರೂಪವಾಗಿರುವ ಗೆಳೆಯರನ್ನು ಜ್ಞಾಪಿಸಿಕೊಂಡು ಕರೆ ಮಾಡಿ ಮಾತನಾಡುವುದು, ಟೈಮ್‌ ಸಿಗದೆ ನೋಡಲಾದ ನೆಚ್ಚಿನ ಸಿನಿಮಾಗಳನ್ನು ನೋಡುವುದು, ಟೈಮಿಲ್ಲದೆ ಓದಲಾದ ಪುಸ್ತಕಗಳನ್ನು ಕೈಗೆತ್ತಿಕೊಂಡು ತಲ್ಲೀನರಾಗುತ್ತಿದ್ದಾರೆ.

ಒಂದೆಡೆ, ಮಕ್ಕಳು ಆಟಗಳ ಮೂಲಕ ಖುಷಿ ಕಂಡುಕೊಳ್ಳುತ್ತಿದ್ದರೆ, ಹೆತ್ತವರು ನೆಂಟರಿಷ್ಟರು, ಆಪ್ತರೊಂದಿಗೆ ಕಷ್ಟ–ಸುಖಗಳನ್ನು ಹಂಚಿಕೊಳ್ಳುವುದು, ಮರೆತೇ ಹೋದ ಗೆಳೆಯರನ್ನು ಪತ್ತೆ ಮಾಡಿ ಮಾತನಾಡುವ ಜತೆಗೆ ಈ ದಿಗ್ಭಂಧನ ಇನ್ನೆಷ್ಟು ದಿನಗಳಲ್ಲಿ ಕಳೆಯಲಿದೆ ಎಂಬ ಲೆಕ್ಕಾಚಾರದ ಮಾತುಗಳನ್ನಾಡುವುದು ಕೇಳಿಬರುತ್ತಿದೆ.

ತಲ್ಲಣದ ನಡುವೆಯೂ ಮುದ್ದಗೊಂಡ ಜೀವಗಳು
ಜೀವನದ ಸಂಧ್ಯಾಕಾಲದಲ್ಲಿರುವ ವೃದ್ಧ ಜೀವಗಳು ತಮ್ಮ ಜೀವಿತಾವಧಿಯಲ್ಲಿ ಸಂಭವಿಸಿದ ಈ ಪ್ರಕೃತಿ ವಿಪ್ಲವ ಭಣಗುಡುತ್ತಿದ್ದ ಮನೆಗಳಲ್ಲಿ ತಂದ ಬದಲಾವಣೆಗೆ ಮುದಗೊಂಡು ಮಕ್ಕಳು, ಮೊಮ್ಮಕ್ಕಳ ಜತೆಗೆ ಸಂತಸದಿಂದ ದಿನ ಕಳೆಯುತ್ತಿದ್ದಾರೆ.

ಕೊರೊನಾ ಸೋಂಕು ಜೀವ ಜಗತ್ತಿನಲ್ಲಿ ತಲ್ಲಣ ಮೂಡಿಸಿ, ಆರ್ಥಿಕವಾಗಿ ದೊಡ್ಡ ಪೆಟ್ಟುವ ನೀಡಿದಷ್ಟೇ, ಕಲಾಯಿ ಹಾಕದೇ ಕಿಲುಬು ಹಿಡಿದ ಪಾತ್ರೆಗಳಂತಿದ್ದ ಸಂಬಂಧಗಳಿಗೆ ಹೊಸ ಮೆರಗು ನೀಡಿದೆ ಎನ್ನುವುದು ಬಹುತೇಕರ ಅನುಭವವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT