ಚಿಕ್ಕಬಳ್ಳಾಪುರ: ಬ್ರೋಕರೇಜ್ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುವುದಾಗಿ ನಂಬಿಸಿ ಟ್ರೇಡಿಂಗ್ ವ್ಯವಹಾರ ಮಾಡುವ ಮಹಿಳೆಯೊಬ್ಬರಿಗೆ ಸೈಬರ್ ಖದೀಮರು 2.01 ಕೋಟಿ ರೂ ವಂಚಿಸಿದ್ದಾರೆ ಎಂದು ಸಿ.ಇ.ಎನ್ ಪೊಲೀಸ್ ಠಾಣೆಗೆ ಮಂಗಳವಾರ ದೂರು ನೀಡಲಾಗಿದೆ.
ನಗರದ ವಾರ್ಡ್ ನಂ 6ರ 2 ನೇ ಕ್ರಾಸ್ ಶೆಟ್ಟಿಹಳ್ಳಿ ಬಡಾವಣೆಯ ಮುನಿಸಿಪಲ್ ಕಾಲೇಜು ಹಿಂಭಾಗದ ನಿವಾಸಿ ಎ.ಎಸ್.ವತ್ಸಲ ಹಣ ಕಳೆದುಕೊಂಡು ಪೊಲೀಸರಿಗೆ ದೂರು ನೀಡಿರುವ ವ್ಯಕ್ತಿ. ಅವರು 38 ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ವ್ಯವಹಾರ ಮಾಡುತ್ತಿದ್ದರು. ಹಣಕಾಸಿನ ವ್ಯವಹಾರಕ್ಕಾಗಿ ನಗರದ ಎಸ್.ಬಿ.ಐ ಮತ್ತು ಕರ್ನಾಟಕ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಅವರ ಪೋನ್ ಲಿಂಕ್ ಮಾಡಿಕೊಂಡು ಯು.ಪಿ.ಐ ವಾಲೆಟ್ ಮತ್ತು ನೆಟ್ ಬ್ಯಾಂಕಿಂಗ್ ಬಳಕೆ ಮಾಡುತ್ತಿದ್ದರು.
ಬ್ರೋಕರೇಜ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಜೂನ್ 6 ರಂದು ಅವರ ಮೊಬೈಲ್ ಗೆ ಸಂದೇಶ ಬಂದಿದೆ. ಸದರಿ ಬ್ರೋಕರೇಜ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡುವುದಾಗಿ ತಿಳಿಸಿದ್ದಾರೆ. ಬ್ರೋಕರೇಜ್ ಕಂಪನಿಯಲ್ಲಿ ಹಣ ಹೂಡಲು ಗೈಡ್ ಮಾಡುವುದಾಗಿ ನಂಬಿಸಿ ಕಂಪನಿಗಳ ಹೆಸರಿನಲ್ಲಿ ಲಿಂಕ್ ಮುಖಾಂತರ ಆಪ್ ನ್ನು ಇನ್ ಸ್ಟಾಲ್ ಮಾಡಿಸಿ ಲಾಗಿನ್ ಐಡಿ, ಪಾಸ್ ವರ್ಡ್ ಸೆಟ್ ಮಾಡಿ ಟ್ರೇಡಿಂಗ್ ಖಾತೆಯನ್ನು ಕ್ರಿಯೇಟ್ ಮಾಡಿಸಿದ್ದಾರೆ.
ಹೂಡಿಕೆ ಹಣವನ್ನು ಕಂಪನಿಯ ಟ್ರೇಡಿಂಗ್ ಖಾತೆಗೆ ವರ್ಗಾವಣೆ ಮಾಡಿದಾಗ ಹಣ ಮತ್ತು ಲಾಭಾಂಶವನ್ನು ತೋರಿಸುತ್ತಿತ್ತು. ಹಣ ವರ್ಗಾವಣೆ ಮಾಡಿಕೊಳ್ಳುವ ಅವಕಾಶವನ್ನು ತೋರಿಸಿದ್ದಾರೆ. ಅದನ್ನು ನಂಬಿ ಎಸ್.ಬಿ.ಐ ಮತ್ತು ಕರ್ನಾಟಕ ಬ್ಯಾಂಕಿನ ಖಾತೆಗಳಿಂದ ಅವರು ಹೇಳಿದ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಅವರು ಹಣ ವರ್ಗಾವಣೆ ಮಾಡಿದ ದಿನಾಂಕ, ಖಾತೆ ನಂಬರ್ ಗಳನ್ನು ವಿವರವಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಜೂನ್ 27 ರಿಂದ ಆಗಸ್ಟ್ 3 ರವರೆಗೆ 2,01,69,800 ರೂಗಳನ್ನು ಹೂಡಿಕೆ ಮಾಡಿಸಿಕೊಂಡಿದ್ದಾರೆ. ಹೂಡಿಕೆ ಮಾಡಿರುವ ಹಣ ಮತ್ತು ಲಾಭಾಂಶವನ್ನು ಟ್ರೇಡಿಂಗ್ ಖಾತೆಯಲ್ಲಿ ತೋರಿಸುತ್ತಿತ್ತು. ಹಣ ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಸಾಧ್ಯವಾಗಲಿಲ್ಲ. ಕಂಪನಿಗೆ ತಿಳಿಸಿದಾಗ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲು 29 ಲಕ್ಷ ತೆರಿಗೆ ಕಟ್ಟಬೇಕು ಎಂದು ಕೋಟೆಕ್ ಮಹೀಂದ್ರ ಬ್ಯಾಂಕು ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ಗಳ ನಂಬರ್ ನೀಡಿದ್ದಾರೆ. ನಂತರವೂ ಡ್ರಾ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಅವರಿಗೆ ಹಣ ಕಟ್ಟುವಂತೆ ಚಾಟ್ ಮಾಡಿದ ನಂಬರ್ ಗಳಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿರುತ್ತವೆ. ನಾನು ಆನ್ ಲೈನ್ 1930 ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದೇನೆ. ಹೂಡಿಕೆ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ಬರುವುದಾಗಿ ನಂಬಿಸಿ ಒಟ್ಟು 2,01,69,800 ರೂಗಳನ್ನು ಕಟ್ಟಿಸಿಕೊಂಡು ಮೋಸ ಮಾಡಿರುವ ಸೈಬರ್ ವಂಚಕರನ್ನು ಪತ್ತೆ ಮಾಡಿ, ನ್ಯಾಯ ಒದಗಿಸಿಕೊಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಸೈಬರ್ ಠಾಣೆ ಪೊಲೀಸರು ದೂರನ್ನು ದಾಖಲಿಸಿಕೊಂಡು ಮುಂದಿನಕ್ರಮ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.