ಶನಿವಾರ, ಸೆಪ್ಟೆಂಬರ್ 18, 2021
30 °C

ಚಿಕ್ಕಬಳ್ಳಾಪುರ: ಉಚಿತ ಬ್ಯಾಂಕಿಂಗ್ ಪರೀಕ್ಷೆ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಸಿದ್ದಾರ್ಥ ಫೌಂಡೇಷನ್ ಮತ್ತು ಸಿದ್ದಾರ್ಥ ಶಿಕ್ಷಣ ಟ್ರಸ್ಟ್ ವತಿಯಿಂದ ಚಿಕ್ಕಬಳ್ಳಾಪುರದಲ್ಲಿ ಸೆಪ್ಟೆಂಬರ್‌ 29 ರಿಂದ ನಾಲ್ಕು ತಿಂಗಳ ಅವಧಿಗೆ ಪದವೀಧರರಿಗೆ ಉಚಿತ ಬ್ಯಾಂಕಿಂಗ್ ಪರೀಕ್ಷೆ ತರಬೇತಿ ಶಿಬಿರ ಏರ್ಪಡಿಸಲಾಗುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಬಹುದು’ ಎಂದು ಸಿದ್ದಾರ್ಥ ಫೌಂಡೇಷನ್‌ನ ಕಾರ್ಯದರ್ಶಿ ಜಿ.ಮಣಿವಾಚಗಂ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಶಿಬಿರಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡದ 60 ಹಾಗೂ ಸಾಮಾನ್ಯ ವರ್ಗದ 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಆಯ್ಕೆಗೆ ಸೆಪ್ಟೆಂಬರ್ 29 ರಂದು ಮಧ್ಯಾಹ್ನ 2 ಗಂಟೆಗೆ ಆಕಾಶ್‌ ಪದವಿ ಪೂರ್ವ ಕಾಲೇಜಿನಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ವಾರದ ಕೊನೆಯ ಎರಡು ದಿನ (ಶನಿವಾರ, ಭಾನುವಾರ) ಈ ತರಬೇತಿ ತರಗತಿಗಳು ನಡೆಯಲಿವೆ’ ಎಂದು ತಿಳಿಸಿದರು.

‘ಈ ಶಿಬಿರವನ್ನು ಸೆ.29ರಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ನಿವೃತ್ತ ಐಎಎಸ್‌ ಅಧಿಕಾರಿ ಆರ್.ರಾಜು ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದರು.

ಸಿದ್ದಾರ್ಥ ಫೌಂಡೇಷನ್ ಸಂಸ್ಥಾಪಕ ನಿರ್ದೇಶಕ ಎಂ.ಸಿ.ಮುನಿಯಪ್ಪ ಮಾತನಾಡಿ, ‘ತರಬೇತಿ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಪ್ರಚಲಿತ ಘಟನೆಗಳನ್ನು ಒಳಗೊಂಡಂತೆ ಬ್ಯಾಂಕಿಂಗ್ ಕ್ಷೇತ್ರದ ಕೆಲಸ ಕಾರ್ಯಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಕಂಪ್ಯೂಟರ್ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಸಂದರ್ಶನ ಎದುರಿಸುವ ಬಗ್ಗೆ ಮತ್ತು ಗುಂಪು ಚರ್ಚೆ ಕುರಿತು ತರಬೇತಿ ನೀಡಲಾಗುತ್ತದೆ’ ಎಂದು ಹೇಳಿದರು. ಮಹೇಶ್ವರಿ ಕಾಲೇಜಿನ ಅಧ್ಯಕ್ಷ ಸಂದೀಪ್ ಚಕ್ರವರ್ತಿ, ಸಿದ್ದಾರ್ಥ ಫೌಂಡೇಷನ್ ಸದಸ್ಯರಾದ ರಾಜೇಂದ್ರನ್, ರಾಜಶೇಖರ್ ಹಾಜರಿದ್ದರು.

ಆಸಕ್ತ ವಿದ್ಯಾರ್ಥಿಗಳು ತಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಸ್ವವಿವರ ಒಳಗೊಂಡ ಅರ್ಜಿಯನ್ನು, ಜಿ.ರಾಜೇಂದ್ರ, ಸಿದ್ದಾರ್ಥ ಫೌಂಡೇಷನ್, #409, 3ನೇ ಬಿ ಮುಖ್ಯ ರಸ್ತೆ, ಎಚ್.ಆರ್.ಬಿ.ಆರ್ ಬಡಾವಣೆ, ಕಲ್ಯಾಣ್ ನಗರ ಬೆಂಗಳೂರು–560043 ಈ ವಿಳಾಸಕ್ಕೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿ: 9480618382.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು