ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ನಕಲಿ ಬಿತ್ತನೆ ಬೀಜ; ಕಪ್ಪುಪಟ್ಟಿ ಎಚ್ಚರಿಕೆ

Published 3 ಜೂನ್ 2023, 16:45 IST
Last Updated 3 ಜೂನ್ 2023, 16:45 IST
ಅಕ್ಷರ ಗಾತ್ರ

ಗೌರಿಬಿದನೂರು: ನಗರದ ಹೊರವಲಯದಲ್ಲಿನ ಕಸಬಾ ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ 2023-24ನೇ ಸಾಲಿನ ಬಿತ್ತನೆ ಬೀಜ ಹಾಗೂ ಕಿರು ಚೀಲವನ್ನು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ರೈತರಿಗೆ ವಿತರಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ರೈತರು ಈ ದೇಶದ ನಿಜವಾದ ಜಿಡಿಪಿ ದರ ನಿರ್ಧರಿಸುವ ಶಕ್ತಿ. ರೈತರಿಗೆ ಬಿತ್ತನೆ ಬೀಜಗಳನ್ನು ಸರಬರಾಜು ಮಾಡುವ ಕಂಪನಿಗಳು ಗುಣಮಟ್ಟದ ಬಿತ್ತನೆ ಬೀಜಗಳನ್ನು ನೀಡುವಂತೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು. ಗುಣಮಟ್ಟದಲ್ಲಿ ಯಾವುದೇ ಲೋಪ ದೋಷಗಳು ಕಂಡುಬಂದಲ್ಲಿ ಅಂತಹ ಬೀಜ ಸರಬರಾಜು ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕಾಗಿದೆ ಎಂದು ಎಚ್ಚರಿಸಿದರು.

ರೈತರ ಬದುಕು ಹಸನು ಮಾಡಲು ಕೃಷಿ ಅಧಿಕಾರಿಗಳು ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು. ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬೇಕು. ಇದರಿಂದ ಬೆಳೆನಷ್ಟ ಉಂಟಾದಾಗ ಆದರಿಂದ ಪಾರಾಗಬಹುದು. ಸರ್ಕಾರ ಹಾಗೂ ಕೃಷಿ ಇಲಾಖೆಯ ವತಿಯಿಂದ ಸಿಗುವ ಸೌಲಭ್ಯಗಳನ್ನು ರೈತರು ಸಕಾಲದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ‌ವಿಭಾಗದ ಉಪ ಕೃಷಿ ನಿರ್ದೇಶಕ ಎಲ್.ಚಂದ್ರಕುಮಾರ್ ಮಾತನಾಡಿ, ಮುಂಗಾರು ಆರಂಭದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ನೆರವಾಗುವ ನಿಟ್ಟಿನಲ್ಲಿ ನಿಗದಿತ ಸಮಯದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಸಮರ್ಪಕವಾಗಿ ವಿತರಣೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ‌ ನೀಡಲಾಗಿದೆ ಎಂದರು.

ರೈತರು ಯಾವುದೇ ಗೊಂದಲಗಳಿಗೆ ತುತ್ತಾಗದೆ ಅಗತ್ಯ ದಾಖಲೆಗಳನ್ನು ‌ನೀಡಿ ಸ್ಥಳೀಯ ರೈತ‌ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಇತರ ಪರಿಕರಗಳನ್ನು ಒದಗಿಸಲಾಗುವುದು. ಜತೆಗೆ ಇಲಾಖೆಯಿಂದ ಪರವಾನಗಿ ಪಡೆದಿರುವ ರೀಟೈಲ್ ಮಾರಾಟಗಾರರ ಬಳಿ ಈಗಾಗಲೇ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳು ದಾಸ್ತಾನಾಗಿವೆ. ಹಂತಹಂತವಾಗಿ ಅವಶ್ಯಕತೆಗೆ ತಕ್ಕಂತೆ ಪೂರೈಕೆ ಮಾಡಲಾಗುತ್ತದೆ. ರೈತರು ನಿರ್ಭೀತಿಯಿಂದ ತಮ್ಮ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಹುದು ಎಂದು ಹೇಳಿದರು.

ತಹಶೀಲ್ದಾರ್ ಮಹೇಶ್. ಎಸ್.ಪತ್ರಿ ಮಾತನಾಡಿ, ರೈತರು ದೇಶದ ಬೆನ್ನೆಲುಬು. ಅವರ ಮೂಲ ಕಸುಬಾಗಿರುವ ಕೃಷಿಯನ್ನು ಬಲಪಡಿಸಿದರೆ ಅವರ ಬದುಕು ಬೆಳಕಾಗುತ್ತದೆ ಎಂದರು.

ಕಂದಾಯ ಇಲಾಖೆಯ ಅಡಿಯಲ್ಲಿ ರೈತರಿಗೆ ಸಿಗಬಹುದಾದ ಸೌಲಭ್ಯಗಳು ಮತ್ತು ಸೇವೆಯನ್ನು ಪಾರದರ್ಶಕವಾಗಿ ಮಾಡಿಕೊಡಲು ಬದ್ಧವಾಗಿರುತ್ತೇವೆ. ಮುಂಗಾರು ಆರಂಭದಲ್ಲಿ ರೈತರು ಗುಣಮಟ್ಟದ ಬಿತ್ತನೆ ಬೀಜಗಳನ್ನು ಪಡೆದು ಉತ್ತಮ ಇಳುವರಿ ಪಡೆಯಬೇಕಾಗಿದೆ ಎಂದು ಹೇಳಿದರು.

ಸಹಾಯಕ ನಿರ್ದೇಶಕ ಎಸ್.ಎಂ.ಮೋಹನ್, ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ, ಬಿ.ಜಿ.ವೇಣುಗೋಪಾಲರೆಡ್ಡಿ, ಬಸಪ್ಪರೆಡ್ಡಿ, ಎಂ.ಆರ್.ಲಕ್ಷ್ಮಿನಾರಾಯಣ್, ಜಿ.ವಿ.ಲೋಕೇಶ್ ಗೌಡ, ಮುದ್ದರಂಗಪ್ಪ, ಸನತ್ ಕುಮಾರ್, ಕೆ.ಎನ್.ವೆಂಕಟರಾಮರೆಡ್ಡಿ, ಸದಾಶಿವಪ್ಪ, ನಾರಾಯಣಸ್ವಾಮಿ, ನಾಗರಾಜ್ ಇದ್ದರು.

ಗೌರಿಬಿದನೂರು ನಗರದಲ್ಲಿನ ಕಸಬಾ ರೈತ ಸಂಪರ್ಕ ‌ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ
ಗೌರಿಬಿದನೂರು ನಗರದಲ್ಲಿನ ಕಸಬಾ ರೈತ ಸಂಪರ್ಕ ‌ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT