ಚಿಕ್ಕಬಳ್ಳಾಪುರ: ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಅವರು ಜಿಲ್ಲೆಯಲ್ಲಿ ಮಂಗಳವಾರ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಮಾದರಿ ಪ್ರೌಢಶಾಲೆ ಹಾಗೂ ವಿವಿಧೆಡೆ ನರೇಗಾ ಯೋಜನೆಯಡಿ ನಿರ್ಮಿಸಿರುವ ಕಾಂಪೌಂಡ್ ಕಾಮಗಾರಿ, ಆಟದ ಮೈದಾನ, ಕೈತೋಟ, ಶಾಲಾ ಕೊಠಡಿಗಳನ್ನು ಪರಿಶೀಲಿಸಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ದೇವಸ್ಥಾನ ಹೊಸಹಳ್ಳಿ ಹಾಗೂ ರೆಡ್ಡಿಗೊಲ್ಲವಾರಹಳ್ಳಿ ಗ್ರಾಮದ ಮಾದರಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಆಕರ್ಷಣೀಯವಾಗಿ ಮಕ್ಕಳಿಗೆ ವಿನ್ಯಾಸಗೊಳಿಸಿರುವ ಕಲಿಕಾ ಸಾಮಗ್ರಿಗಳು ಹಾಗೂ ಪುಸ್ತಕಗಳು ಶಾಲಾ ಕೊಠಡಿ, ಆಟಿಕೆಗಳು, ಪೌಷ್ಟಿಕ ಆಹಾರದ ಕೈತೋಟವನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೋವಿಡ್ ತುರ್ತು ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯವರು ಕೈಗೊಂಡಿರುವ ವಿವಿಧ ಮುಂಜಾಗ್ರತಾ ಕ್ರಮಗಳ ಬಗ್ಗೆ ಸ್ಥಳೀಯ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಉಮಾ ಅವರು ಗ್ರಾಮ ಪಂಚಾಯಿತಿ ಕಚೇರಿಯ ಕಾರ್ಯವಿಧಾನದ ಬಗ್ಗೆ ಪರಿಶೀಲಿಸಿ ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಸಲಹೆ, ಸೂಚನೆಗಳನ್ನು ನೀಡಿದರು.
ಚಿಂತಾಮಣಿ ತಾಲ್ಲೂಕಿನ ಸಂತೆಕಲ್ಲಹಳ್ಳಿ ಗ್ರಾಮದ ಮಾದರಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ನರೇಗಾ ಯೋಜನೆಯಡಿ ಕೈಗೊಂಡಿರುವ ಮಳೆ ನೀರು ಸಂಗ್ರಹ ಕಾಮಗಾರಿ, ಪೌಷ್ಟಿಕ ಆಹಾರ ಕೈತೋಟ ಮತ್ತು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಕಲ್ಯಾಣಿ ಕಾಮಗಾರಿ ಪರಿಶೀಲಿಸಿದರು.
ಕೈವಾರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ಅಭಿವೃದ್ದಿಪಡಿಸಿರುವ ಸ್ಮಶಾನ ಕಾಮಗಾರಿಯನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮೀಣ ಸ್ವ-ಸಹಾಯ ಸಂಘದ ಒಕ್ಕೂಟದ ಸದಸ್ಯರು ಪ್ರಾರಂಭಿಸಿರುವ ಸಂಜೀವಿನಿ ಕೆಫೆಗೆ ಭೇಟಿ ನೀಡಿ, ಕೆಫೆಯಲ್ಲಿ ತಯಾರಿಸುವ ವಿವಿಧ ತಿನಿಸುಗಳನ್ನು ವೀಕ್ಷಿಸಿ, ನಂತರ ಸದಸ್ಯರ ಜೊತೆ ಸಂವಾದ ನಡೆಸಿ ಕೈಗೊಳ್ಳುವ ವಿವಿಧ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಉಮಾ ಮಹದೇವನ್, ‘ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಮಾದರಿ ಅಂಗನವಾಡಿಗಳು ಹಾಗೂ ಶಾಲೆಗಳನ್ನು ಮಾದರಿಯಾಗಿ ತೆಗೆದುಕೊಂಡು ಮುಂಬರುವ ದಿನಗಳಲ್ಲಿ ಇತರೆ ಜಿಲ್ಲೆಗಳಲ್ಲಿ ಅನುಷ್ಠಾನ ಮಾಡಲಾಗುತ್ತದೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಗಿರಿಜಾ ಶಂಕರ್, ಚಿಕ್ಕಬಳ್ಳಾಪುರ ತಾ.ಪಂ ಇಒ ಹರ್ಷವರ್ಧನ್, ಶಿಡ್ಲಘಟ್ಟ ತಾ.ಪಂ ಇಒ ಶಿವಕುಮಾರ್, ಚಿಂತಾಮಣಿ ತಾ.ಪಂ ಇಒ ಮಂಜುನಾಥ್ ಹಾಜರಿದ್ದರು.
***
ಮೊದಲ ಹಂತದಲ್ಲಿ 38 ಮಾದರಿ ಶಾಲೆಗಳನ್ನಾಗಿ ಮಾಡಲಾಗುತ್ತಿದೆ. ಮುಂದಿನ ಹಂತದಲ್ಲಿ ಎಲ್ಲಾ ಶಾಲೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ
ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.