ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗೆ ಸಲವತ್ತು ತಲುಪಿಸಿ ಎಂದ ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ
Last Updated 26 ಜೂನ್ 2020, 14:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮೂಲಕ ಸರ್ಕಾರದ ಯೋಜನೆಗಳ ಸಲವತ್ತುಗಳನ್ನು ಸಮಾಜದ ಕಟ್ಟಕಡೆಯ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಶ್ರಮಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಈ ಜಿಲ್ಲೆಯಲ್ಲಿ ಅಂಗನವಾಡಿಗಳ ಸ್ಥಿತಿಗತಿ ಸಮಾಧಾನಕರವಾಗಿದೆ. ದಾನಿಗಳ ಸಹಾಯದಿಂದ ಕೆಲ ಕೇಂದ್ರಗಳನ್ನು ಮಾದರಿಯಾಗಿ ರೂಪಿಸಿದ್ದು ಸಂತಸ ತಂದಿದೆ. ಮಕ್ಕಳ ಹಾಜರಾತಿ ಹೆಚ್ಚಿಸುವ ಉದ್ದೇಶದಿಂದ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ, ನಾವಿನ್ಯಪೂರ್ಣ ಚಟುವಟಿಕೆಗಳನ್ನು ಆರಂಭಿಸಲು ಇಲಾಖೆ ಉದ್ದೇಶಿಸಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ 1,961 ಅಂಗನವಾಡಿಗಳಿಗೆ ಇವುಗಳಿಗೆ ನಾಲ್ಕು ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರಗಳಿಂದ (ಎಂಎಸ್‌ಪಿಸಿ) ಆಹಾರ ಪದಾರ್ಥಗಳು ಪೂರೈಕೆಯಾಗುತ್ತಿವೆ. ಎಂಎಸ್‌ಪಿಸಿಗಳಿಗೆ ಮತ್ತಷ್ಟು ಬಲ ತುಂಬುವ ಅಗತ್ಯವಿದೆ. ಆಹಾರ ಪೂರೈಕೆಯಲ್ಲಿ ಲೋಪದೋಷ ಎಸಗುವ ಎಂಎಸ್‌ಪಿಸಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

‘ಕೋವಿಡ್-19 ಸಂದರ್ಭದಲ್ಲಿ ರಾಜ್ಯದಾದ್ಯಂತ 235 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಬಹುತೇಕ ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ. ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ ನಾಲ್ಕು ಬಾಲ್ಯ ವಿವಾಹ ಪ್ರಕರಣಗಳು ನಡೆದಿದ್ದು, ಅವುಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿವೆ. ಮುಂದಿನ ದಿನಗಳಲ್ಲಿ ಯಾವುದೇ ಬಾಲ್ಯ ವಿವಾಹ ಪ್ರಕರಣಗಳು ನಡೆಯದಂತೆ ಎಚ್ಚರವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಮಕ್ಕಳ ಅಪೌಷ್ಠಿಕತೆಯ ನಿಖರ ಅಂಕಿ-ಸಂಖ್ಯೆಯ ಮಾಹಿತಿ ಮತ್ತು ಗರ್ಭಿಣಿ ಮಹಿಳೆಯರ ಪೌಷ್ಠಿಕ ಆಹಾರ ಮಾಹಿತಿ ಹಾಗೂ ಅಂಗನವಾಡಿ ದಾಖಲಾತಿ, ಸೇರಿದಂತೆ ವಿವಿಧ ಅಗತ್ಯ ಮಾಹಿತಿ ಡಿಜಿಟಲ್ ರೂಪದಲ್ಲಿ ದಾಖಲಿಸಲು ಅನುಕೂಲವಾಗಲೆಂದು ಪೋಷಣ್ ಅಭಿಯಾನದ ಅಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಸ್ಮಾರ್ಟ್‌ಫೋನ್‌ ನೀಡಲು ಉದ್ದೇಶಿಸಲಾಗಿದೆ. ಶೀಘ್ರದಲ್ಲಿಯೇ ಫೋನ್‌ ವಿತರಿಸಲಾಗುತ್ತದೆ’ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ ಮಾತನಾಡಿ, ‘ಜಿಲ್ಲೆಯಲ್ಲಿ 1,848 ಅಂಗನವಾಡಿ ಕೇಂದ್ರಗಳು ಹಾಗೂ 113 ಮಿನಿ ಅಂಗನವಾಡಿ ಕೇಂದ್ರಗಳಿವೆ. 7,846 ಗರ್ಭಿಣಿಯರು, 7,871 ಬಾಣಂತಿಯರು ಅಂಗನವಾಡಿಗಳಲ್ಲಿ ಹೆಸರು ನೋಂದಾಯಿಸಿಕೊಂಡು ವಿವಿಧ ಯೋಜನೆಗಳ ಸವಲತ್ತುಗಳನ್ನು ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 1,091 ಅಂಗನವಾಡಿಗಳಿಗೆಸ್ವಂತ ಕಟ್ಟಡವಿದೆ. 394 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. 264 ಕೇಂದ್ರಗಳು ಶಾಲಾ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. 212 ಕಡೆಗಳಲ್ಲಿ ಇತರೆ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಉಪ ವಿಭಾಗಾಧಿಕಾರಿ ರಘುನಂದನ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT