ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಸೂಚನೆ
Last Updated 4 ಜುಲೈ 2018, 11:57 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಮಳೆಗಾಲ ಆರಂಭವಾಗಿರುವ ಕಾರಣ ಆರೋಗ್ಯ ಇಲಾಖೆಯವರು ಸ್ವಚ್ಛತೆಯ ಮೇಲೆ ನೀಗಾ ಇಟ್ಟು ಸಾಂಕ್ರಾಮಿಕ ರೋಗಗಳು ಉಲ್ಭಣಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಗರದಲ್ಲಿ ಮೂರು ಡೆಂಗಿ ಶಂಕಿತ ಪ್ರಕರಣ ಪತ್ತೆಯಾಗಿರುವ ಕಾರಣ ಸಾಂಕ್ರಾಮಿಕ ರೋಗಗಳ ಬಗ್ಗೆ ಅಧಿಕಾರಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಸ್ವಚ್ಛತೆಗೆ ಬರೀ ಆರೋಗ್ಯ ಇಲಾಖೆ ಶ್ರಮಿಸಿದರೆ ಸಾಕಾಗದು. ಎಲ್ಲಾ ಇಲಾಖೆಗಳು ಸಹಕಾರ ಕೂಡ ಅಗತ್ಯವಿದೆ. ಹೀಗಾಗಿ ಆರೋಗ್ಯ ಇಲಾಖೆಯವರುಎಲ್ಲ ಇಲಾಖೆಗಳಿಗೂ ಪತ್ರ ಬರೆದು ಸಹಕಾರ ಕೋಡಬೇಕು’ ಎಂದು ಸಲಹೆ ನೀಡಿದರು.

‘ಮಳೆ ನೀರು ಎಲ್ಲೆಂದರಲ್ಲಿ ಮಡುಗಟ್ಟಿ ನಿಂತರೆ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ರೋಗಗಳ ಉಲ್ಭಣಕ್ಕೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲಿ ಸಹ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಜತೆಗೆ ಸಾರ್ವಜನಿಕರಿಗೆ ಕೂಡ ಮನೆಯ ಪರಿಸರ ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎನ್ನುವ ಬಗ್ಗೆ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.

ಶಿಕ್ಷಣ ಇಲಾಖೆಯ ಮಾಹಿತಿ ಪಡೆದ ಅಧ್ಯಕ್ಷರು, ‘ಕಳೆದ ಎರಡು ವರ್ಷಗಳಿಂದ ವೇತನೇತರ ಅನುದಾನ ಅಭಿವೃದ್ಧಿ ಕಾರ್ಯಕ್ಕೆ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ ಕಳುಹಿಸಿರುವುದು ಸರಿಯಲ್ಲ. ಆ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದಿತ್ತು. ಅಧಿಕಾರಿಗಳು ಈ ಬಗ್ಗೆ ಇನ್ನಾದರೂ ಎಚ್ಚರಿಕೆ ವಹಿಸಬೇಕು. ಮುಂದಿನ ವರ್ಷದಲ್ಲಿ ಆದರೂ ಅನುದಾನವನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಎಚ್ಚರಿಕೆ ನೀಡಿದರು.

‘ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸಾಕಷ್ಟು ಕುಸಿತವಾಗಿದೆ. ಇದು ಕಳವಳಕಾರಿ ವಿಚಾರ. ಫಲಿತಾಂಶ ಕುಸಿತಕ್ಕೆ ಏನು ಕಾರಣ ಎನ್ನುವುದು ಪತ್ತೆ ಮಾಡಿ, ಲೋಪಗಳನ್ನು ಸರಿಪಡಿಸಿಕೊಂಡು ಮುಂಬರುವ ಪರೀಕ್ಷೆಯಲ್ಲಾದರೂ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ಹೇಳಿದರು.

‘ಈವರೆಗೆ ಪಠ್ಯಪುಸ್ತಕಗಳು, ಸಮವಸ್ತ್ರ ಕೆಲವೆಡೆ ತಲುಪಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಶೀಘ್ರದಲ್ಲಿಯೇ ಬಾಕಿ ಇರುವ ಕಡೆಗಳಲ್ಲಿ ತಲುಪಿಸಬೇಕು. ತಾಲ್ಲೂಕಿನಲ್ಲಿ 46 ಶಾಲೆಗಳಿಗೆ ಕಾಂಪೌಂಡ್ ಇಲ್ಲ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ (ನರೆಗಾ) ಅಡಿ ಆದ್ಯತೆ ಮೆರೆಗೆ ಎಲ್ಲಾ ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸುವ ಕೆಲಸವಾಗಬೇಕು’ ಎಂದು ತಾಕೀತು ಮಾಡಿದರು.

ಅಕ್ಷರ ದಾಸೋಹ ಅಧಿಕಾರಿಗಳನ್ನು ಉದ್ದೇಶಿಸಿ, ‘ಶಾಲೆಗಳಲ್ಲಿ ಅಡುಗೆ ಕೊಣೆ ಶುಚಿತ್ವಕ್ಕೆ ಒತ್ತು ನೀಡಬೇಕು. ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು. ಬರೀ ಅನ್ನ, ಸಾಂಬಾರ್ ನೀಡುವುದು ಬಿಟ್ಟು ವೇಳಾಪಟ್ಟಿಯಂತೆ ನಿಯಮಿತವಾಗಿ ಆಹಾರ ನೀಡಬೇಕು’ ಎಂದು ಹೇಳಿದರು.

ಕೃಷಿ ಇಲಾಖೆ ಅಧಿಕಾರಿಗಳನ್ನು ಕುರಿತು, ‘ಕಳೆದ ವರ್ಷ ಕಳಪೆ ಬಿತ್ತನೆ ಬೀಜದಿಂದ ರೈತರು ಸಾಕಷ್ಟು ಸಮಸ್ಯೆ, ನಷ್ಟ ಅನುಭವಿಸಿದರು. ಆದ್ದರಿಂದ ಈ ಬಾರಿ ಬೆಳೆ ವಿಮೆ ಕುರಿತು ತಾಲ್ಲೂಕಿನಲ್ಲಿ ವ್ಯಾಪಕ ಪ್ರಚಾರ ನಡೆಸಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರಪತ್ರಗಳನ್ನು ಹಂಚುವ ರೈತರಲ್ಲಿ ಬೆಳೆ ವಿಮೆ ಬಗ್ಗೆ ಅರಿವು ಮೂಡಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಬಾರದು’ ಎಂದು ಸೂಚಿಸಿದರು.

‘ಎಪಿಎಂಸಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ಮಾರುಕಟ್ಟೆಗೆ ಬರುವ ಸಾರ್ವಜನಿಕರು ಪರದಾಡುವ ಸ್ಥಿತಿ ತಲೆದೋರಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಮಾರುಕಟ್ಟೆ ಮೂಲಸೌಕರ್ಯ ಅಭಿವೃದ್ಧಿಯತ್ತ ಗಮನ ಹರಿಸಬೇಕು’ ಎಂದು ಎಪಿಎಂಸಿ ಅಧಿಕಾರಿಗಳಿಗೆ ಸಲಹೆ ನೀಡಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಇಂಗ್ಲಿಷ್‌ನಲ್ಲಿ ಮಾಹಿತಿ ನೀಡಿದ್ದು ಗಮನಿಸಿದ ಅಧ್ಯಕ್ಷ ರಾಮಸ್ವಾಮಿ ಅವರು ಕನ್ನಡದಲ್ಲಿ ಮಾಹಿತಿ ನೀಡುವಂತೆ ಸೂಚಿಸಿದರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಇಂದ್ರಮ್ಮ ಅಣ್ಣಯ್ಯಪ್ಪ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ತಿರುಮಳ್ಳಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಪಿ.ಸಂಜೀವಪ್ಪ, ಸದಸ್ಯರಾದ ತಿರುಮಳಪ್ಪ, ಮುತ್ತುರಾಯಪ್ಪ, ನಾರಾಯಣಸ್ವಾಮಿ, ಸತೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT