ಸೋಮವಾರ, ಸೆಪ್ಟೆಂಬರ್ 23, 2019
27 °C
ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ನಾಗಾಂಬಿಕಾದೇವಿ ಸೂಚನೆ

ಹಳ್ಳಿಗಳಿಗೆ ಹೋಗಿ ಸಮಸ್ಯೆ ಆಲಿಸಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇನ್ನು ಮುಂದೆ ಹಳ್ಳಿಗಳಿಗೆ ಖುದ್ದು ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಬಗೆಹರಿಸುವ ಕೆಲಸ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ನಾಗಾಂಬಿಕಾದೇವಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಮಾಹಿತಿ ಪಡೆದ ಅವರು, ‘ಅಧಿಕಾರಿಗಳು ಸ್ಥಳಿಯ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಿದರೆ, ಜನ ಜಿಲ್ಲಾಡಳಿತ, ಮುಖ್ಯಮಂತ್ರಿ ಕಚೇರಿವರೆಗೆ ಹೋಗುವುದಿಲ್ಲ. ಅಧಿಕಾರಿಗಳು ಕಚೇರಿಗಳನ್ನು ಬಿಟ್ಟು ಕ್ಷೇತ್ರ ದರ್ಶನಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯಲ್ಲಿ ಇನ್ನು ಮುಂದೆ ಎಲ್ಲೆಂದರಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡುವಂತಿಲ್ಲ. ಮಳೆ ನೀರು ಶೇಖರಣೆಯಾಗುವ ಸ್ಥಳವನ್ನು ಗುರುತಿಸಿ ವೈಜ್ಞಾನಿಕವಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡಬೇಕು. ಅದಕ್ಕಾಗಿಯೇ ಜಿಲ್ಲೆಗೆ ಒಂದು ಮಾಸ್ಟರ್ ಫ್ಲ್ಯಾನ್ ಸಿದ್ಧಪಡಿಸಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಕೃಷಿ ಇಲಾಖೆಯ ಅಧಿಕಾರಿಗಳನ್ನು ಕುರಿತು, ‘ಬೆಳೆ ವಿಮೆ ನೋಂದಣಿ ಕಡಿಮೆಯಾಗುತ್ತಿದೆ. ಕಳೆದ ವರ್ಷ 25 ಸಾವಿರ ರೈತರು ವಿಮೆಗೆ ನೋಂದಾಯಿಸಿಕೊಂಡಿದ್ದರು. ಈ ವರ್ಷ 5 ಸಾವಿರ ರೈತರು ಮಾತ್ರ ಮುಂದೆ ಬಂದಿದ್ದಾರೆ. ಅಧಿಕಾರಿಗಳು ಬೆಳೆವಿಮೆ ಕುರಿತು ಹೆಚ್ಚಿನ ಪ್ರಚಾರ ಮಾಡಬೇಕು. ವಿಮೆ ಪ್ರಯೋಜನದ ಬಗ್ಗೆ ತಿಳಿಹೇಳಿ ದೊಡ್ಡ ಸಂಖ್ಯೆಯಲ್ಲಿ ರೈತರನ್ನು ನೋಂದಾಯಿಸಬೇಕು’ ಎಂದು ಹೇಳಿದರು.

‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಿಲ್ಲೆಯಲ್ಲಿ 63 ಸಾವಿರ ಜನ ರೈತರ ಅರ್ಜಿಗಳು ಬಾಕಿ ಇವೆ. ಮುಂದಿನ ಒಂದು ವಾರದ ಒಳಗೆ ಎಲ್ಲಾ ಅರ್ಜಿಗಳು ಇತ್ಯರ್ಥ ಮಾಡಬೇಕು. ಕೇಂದ್ರದಿಂದ ₹6 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ ₹4 ಸಾವಿರ ಘೋಷಣೆ ಆಗಿದೆ. ಆದ್ದರಿಂದ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿ ಬಾಕಿ ಇರುವ ಅರ್ಜಿಗಳನ್ನು ಶೀಘ್ರವಾಗಿ ಇತ್ಯರ್ಥ ಮಾಡಬೇಕು’ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮಾತನಾಡಿ, ‘ಜಿಲ್ಲೆಯಲ್ಲಿ 359 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 147 ಗ್ರಾಮಗಳಿಗೆ ಟ್ಯಾಂಕರ್ ಮೂಲಕ, 212 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಒಂದು ದಿನಕ್ಕೆ 387 ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಅದಕ್ಕಾಗಿ ತಿಂಗಳಿಗೆ ₹35 ಲಕ್ಷ ಹಣ ಖರ್ಚಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಅಧಿಕಾರಿಗಳು ಖುದ್ದು ಹಳ್ಳಿಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ನೀರಿನ ಮೂಲಗಳು ಎಲ್ಲೆಲ್ಲಿ ಇವೆ ಎಂದು ತಿಳಿದುಕೊಂಡು ಅವುಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸರ್ಕಾರದ ಪ್ರತಿಯೊಂದು ಯೋಜನೆಯ ಸೌಲಭ್ಯವನ್ನು ಸಾರ್ವಜನಿಕರಿಗೆ ಸಕಾಲಕ್ಕೆ ತಲುಪಿಸಬೇಕು. ನೆಪ ಹೇಳಿ ತಿಂಗಳುಗಟ್ಟಲೇ ಅಲೆದಾಡಿಸಬೇಡಿ’ ಎಂದರು.

ಸಹಕಾರ ಇಲಾಖೆ ಅಧಿಕಾರಿ ಮಾತನಾಡಿ, ‘ವಾಣಿಜ್ಯ ಬ್ಯಾಂಕ್‌ಗಳಲ್ಲಿ ಜಿಲ್ಲೆಯ 14,738 ರೈತರ ₹151 ಕೋಟಿ ಸಾಲವಿದೆ. ಆ ಪೈಕಿ ರಾಜ್ಯ ಸರ್ಕಾರ ಈವರೆಗೆ ₹100 ಕೋಟಿ ಬಿಡುಗಡೆ ಮಾಡಿದೆ. ಇನ್ನು ₹51 ಕೋಟಿ ಹಣ ಬಾಕಿ ಇದೆ. ಸಹಕಾರ ಬ್ಯಾಂಕ್‌ಗಳಲ್ಲಿ 11,426 ರೈತರ ₹91 ಕೋಟಿ ಬೆಳೆ ಸಾಲವಿದೆ. ಈ ಪೈಕಿ ₹75 ಕೋಟಿ ಪಾವತಿಯಾಗಿದೆ. ಇನ್ನು ₹16 ಬಾಕಿ ಬಿಡುಗಡೆಯಾಗಬೇಕಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Post Comments (+)