ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾಕರ್ ಸೋಲಿಸುವುದೇ ಎಲ್ಲರ ಗುರಿಯಾಗಲಿ

ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ವೀಕ್ಷಕರ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರ ಸಭೆ
Last Updated 22 ಆಗಸ್ಟ್ 2019, 15:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಪಕ್ಷ ಸಂಘಟಿಸುವ ನಿಟ್ಟಿಸುವ ನಗರದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ‘ಕಾಂಗ್ರೆಸ್‌ ಅಭ್ಯರ್ಥಿ ಯಾರೇ ಆಗಲಿ ಅವರನ್ನು ಗೆಲ್ಲಿಸುವ ಮತ್ತು ಪಕ್ಷದ್ರೋಹ ಮಾಡಿದ ಡಾ.ಕೆ.ಸುಧಾಕರ್ ಅವರನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸುವ ಗುರಿ ನಮ್ಮದಾಗಬೇಕು’ ಎಂದು ಒಕ್ಕೋರಲಿನ ಅಭಿಪ್ರಾಯ ವ್ಯಕ್ತವಾಯಿತು.


ಸಭೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ವೀಕ್ಷಕ, ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ‘ಮುಂದಿನ ವಾರ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿ ಹಳ್ಳಿ, ಗ್ರಾಮ ಪಂಚಾಯಿತಿಗೆ ಹೋಗಿ ಬೂತ್‌ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ, ಪಕ್ಷ ಸಂಘಟನೆ ಮತ್ತು ಉಪ ಚುನಾವಣೆ ಸಿದ್ಧತೆ ಕೆಲಸ ಮಾಡೋಣ’ ಎಂದು ಹೇಳಿದರು.


ಮತ್ತೊಬ್ಬ ವೀಕ್ಷಕ, ಶಾಸಕ ವಿ.ಮುನಿಯಪ್ಪ ಮಾತನಾಡಿ, ‘ಬಿಜೆಪಿ ಸೇರಿದಂತೆ ಹಗರಣಗಳನ್ನು ಮುಚ್ಚಿ ಹಾಕಬಹುದು ಎಂದು ಸುಧಾಕರ್ ಆ ಪಕ್ಷಕ್ಕೆ ಹೊರಟಿದ್ದಾರೆ. ಅವರ ಹಗರಣಗಳ ಬಗ್ಗೆ ಪಕ್ಷದ ಕಾರ್ಯಕರ್ತರು ಮತದಾರರಿಗೆ ತಿಳಿಸುವ ಕೆಲಸ ಮಾಡಬೇಕು. ಪಕ್ಷಕ್ಕೆ ಅನ್ಯಾಯ ಮಾಡಿದವರಿಗೆ ಸೋಲಿಸುವುದೇ ನಮ್ಮ ಗುರಿಯಾಗಬೇಕು. ಅದಕ್ಕೆ ನಾವೆಲ್ಲ ಒಗ್ಗಟ್ಟಾಗಿ ಸಂಘಟನೆಗೆ ಒತ್ತು ನೀಡಬೇಕು’ ಎಂದು ತಿಳಿಸಿದರು.


ವಿಧಾನಪರಿಷತ್ ಸದಸ್ಯ ನಜೀರ್ ಅಹ್ಮದ್ ಮಾತನಾಡಿ, ‘ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೇ ಆಗಲಿ ಅವರ ಗೆಲುವಿಗೆ ಪ್ರತಿಯೊಬ್ಬ ಮುಖಂಡರು ಶ್ರಮಿಸಬೇಕು. ಸುಧಾಕರ್ ಅವರಿಗೆ ತಕ್ಕ ಪಾಠ ಕಲಿಸುವ ತೀರ್ಮಾನಕ್ಕೆ ಪ್ರತಿಯೊಬ್ಬರೂ ಬರಬೇಕು’ ಎಂದರು.


ಮುಖಂಡ ಪುರದಗಡ್ಡೆ ಕೃಷ್ಣಪ್ಪ ಮಾತನಾಡಿ, ‘ಟ್ರಸ್ಟ್‌ ಹೆಸರಿನಲ್ಲಿ ವಿದೇಶಿ ದುಡ್ಡು ತಂದು ಹೆಂಗಸರಿಗೆ ಸೀರೆ, ಕುಕ್ಕರ್ ನೀಡಿ, ಓಂಶಕ್ತಿ ಪ್ರವಾಸ ಮಾಡಿಸಿ ಮರಳು ಮಾಡಿದರು. ಈ ಬಾರಿ ದುಡ್ಡು ಮುಖ್ಯವೋ ಧರ್ಮ ಮುಖ್ಯವೋ ನೋಡೋಣ. ಮತದಾರರು ದುಡ್ಡಿಗೆ ತಮ್ಮನ್ನು ಮಾರಿಕೊಳ್ಳಬಾರದು. ಪಕ್ಷದ ಚಿಹ್ನೆ ಮೇಲೆ ಗೆದ್ದವರು ಅನ್ನ ತಿನ್ನುತ್ತಿದ್ದರೆ ಈ ಸಭೆಗೆ ಬರುತ್ತಿದ್ದರು’ ಎಂದು ಹೇಳಿದರು.


ಮಾಜಿ ಶಾಸಕ ಶಿವಾನಂದ ಮಾತನಾಡಿ, ‘ಕ್ಷೇತ್ರದಲ್ಲಿ ಈ ಹಿಂದೆ ಆಡಳಿತ ನಡೆಸಿದ ಯಾವೊಬ್ಬ ಶಾಸಕರು ಎ.ಕೆ 47 ಹಿಡಿದುಕೊಂಡವರೊಂದಿಗೆ ಸುತ್ತಾಡುತ್ತಿರಲಿಲ್ಲ. ಆದರೆ ಇವತ್ತು ಜನಸಾಮಾನ್ಯರು ಶಾಸಕರ ಹತ್ತಿರ ಸುಳಿಯಲು ಆಗದಂತಾಗಿದೆ. ಕಲ್ಲು, ಮಣ್ಣು, ಚರಂಡಿ ಹೀಗೆ ಎಲ್ಲ ಗುತ್ತಿಗೆಗಳು ಸುಧಾಕರ್‌ ಅವರಿಗೆ ಸೇರುತ್ತಿವೆ. ಆದರೂ ಅವರ ದುರಾಸೆ ಕಡಿಮೆಯಾಗಿಲ್ಲ’ ಎಂದು ತಿಳಿಸಿದರು.


ಮಾಜಿ ಶಾಸಕ ಎಸ್‌.ಎಂ.ಮರಿಯಪ್ಪ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್‌.ಕೇಶವರೆಡ್ಡಿ, ಕೆಪಿಸಿಸಿ ಸದಸ್ಯ ಎಸ್‌.ಪಿ.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯ ಸುಬ್ಬರಾಯಪ್ಪ, ಮುಖಂಡರಾದ ಜಿ.ಎಚ್‌.ನಾಗರಾಜ್, ಕೆ.ವಿ.ನವೀನ್ ಕಿರಣ್, ಯಲುವಹಳ್ಳಿ ರಮೇಶ್, ಜಿ.ಆರ್.ಶ್ರೀನಿವಾಸ್, ಗಂಗರೇಕಾಲುವೆ ನಾರಾಯಣಸ್ವಾಮಿ, ಸಿ.ಎಂ.ತಮ್ಮಣ್ಣ, ಎಸ್‌.ವೈ.ಮರಿಯಪ್ಪ ಅವರು ಅನರ್ಹ ಶಾಸಕ ಸುಧಾಕರ್ ಅವರ ವಿರುದ್ಧ ಸಭೆಯಲ್ಲಿ ವಾಗ್ದಾಳಿ ನಡೆಸಿದರು.


ಮಾಜಿ ಸಚಿವೆ ರೇಣುಕಾ ರಾಜೇಂದ್ರನ್, ಮಾಜಿ ಶಾಸಕಿ ಅನಸೂಯಮ್ಮ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್‌, ಮುಖಂಡರಾದ ರಾಯಪ್ಪ, ಅಡ್ಡಗಲ್ ಶ್ರೀಧರ್, ರಫಿವುಲ್ಲಾ, ಸುನಿಲ್‌, ಮಮತಾಮೂರ್ತಿ ಮತ್ತು ಕ್ಷೇತ್ರದ ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT