ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ನಗರ ನಮ್ಮ ಧ್ವನಿ: ಕಾಯಕಲ್ಪಕ್ಕೆ ಕಾದಿರುವ ಸರ್ಕಾರಿ ಪ್ರೌಢಶಾಲೆ

ಶಾಸಕರೇ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದರೂ ಬಗೆಹರಿಯದ ಮೂಲಸೌಕರ್ಯಗಳ ಕೊರತೆ, ಜನಪ್ರತಿನಿಧಿಗಳ ಅಸಡ್ಡೆಗೆ ಪ್ರಜ್ಞಾವಂತರ ಬೇಸರ
Last Updated 29 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಮೊಟ್ಟಮೊದಲ ಪ್ರೌಢಶಾಲೆಯಾದ ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪ್ರೌಢಶಾಲೆ ಅನೇಕ ನಗರದ ನಿರ್ಮಾತೃಗಳನ್ನು, ರಾಜಕಾರಣಿಗಳನ್ನು, ವಿವಿಧ ಕ್ಷೇತ್ರಗಳ ಸಾಧಕರನ್ನು ಕೊಡುಗೆಯಾಗಿ ಕೊಟ್ಟರೂ ಇಂದಿಗೂ ಮೂಲಸೌಕರ್ಯಗಳ ಕೊರತೆಯಿಂದಾಗಿ ಶಸ್ತ್ರಚಿಕಿತ್ಸೆಗಾಗಿ ಕಾಯುತ್ತಿರುವ ರೋಗಿಯಂತಾಗಿದೆ.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ಅವರು ರಾಜ್ಯದಸರ್ಕಾರಿ ಶಾಲೆಗಳಅಭಿವೃದ್ಧಿಗೆದೆಹಲಿಸರ್ಕಾರ ಅನುಸರಿಸಿರುವ ಮಾದರಿ ಅಳವಡಿಸಿಕೊಳ್ಳಲು ಚಿಂತನೆ ನಡೆಸಿರುವುದು ಪ್ರಜ್ಞಾವಂತರ ವಲಯದಲ್ಲಿ ಸಂತಸ ಮೂಡಿಸಿದರೆ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ವಿ.ಮುನಿಯಪ್ಪ ಅವರಂತಹ ಮಹನೀಯರು ಓದಿದ ಶಾಲೆ, ಶಾಸಕರೇ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದರೂ ಅದರ ಸ್ಥಿತಿ ಸುಧಾರಿಸದಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿದೆ.

ಈಗ ಪ್ರೌಢಶಾಲೆಯಲ್ಲಿ 360 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿದಿನದ ಬಿಸಿಯೂಟಕ್ಕೆ ಮತ್ತು ಕುಡಿಯಲು ನೀರೇ ಇಲ್ಲದೆ ಪರಿತಪಿಸುತ್ತಿದ್ದಾರೆ. ಇದಲ್ಲದೆ ನೀರಿನ ಸಮಸ್ಯೆಯಿಂದಾಗಿ ಶೌಚಾಲಯವೂ ಹದಗೆಟ್ಟಿದೆ. ಸೂಕ್ತ ಬಂದೋಬಸ್ತ್ ಇಲ್ಲದ ಕಾರಣ ಕಿಡಿಗೇಡಿಗಳು ಒಳ ಬಂದು ಶೌಚಾಲಯ ಮತ್ತು ಇನ್ನಿತರ ಸ್ಥಳಗಳನ್ನು ಗಲೀಜು ಮಾಡಿ ಹೋಗುತ್ತಿದ್ದಾರೆ. ಶಾಲೆಯ ಮೈದಾನದಲ್ಲಿ ಬಂದು ಆಟ ಆಡುವವರನ್ನು ತಡೆಯಲು ಆಗದಂತಾಗಿದೆ.

ಶಾಲೆಯ ಬಣ್ಣ ಬಳಿಸಲು ಶಿಕ್ಷಕರು ಹಾಗೂ ಸಿಬ್ಬಂದಿ ವಿವಿಧ ದಾನಿಗಳ ನೆರವನ್ನು ಪಡೆದುಕೊಂಡಿದ್ದಾರೆ. ತಮ್ಮ ಹಣದಲ್ಲಿ ಟ್ಯಾಂಕರ್‌ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ನಗರಸಭೆಯವರಿಗೆ, ಶಾಸಕರಿಗೆ ನೀರನ್ನು ಒದಗಿಸಲು ಅವಿರತವಾಗಿ ಮನವಿಯನ್ನು ಮಾಡಿಕೊಂಡಿದ್ದರ ಪರಿಣಾಮ ‘ಶಾಲೆಯ ಆವರಣದಲ್ಲಿ ಕೊಳವೆ ಬಾವಿ ಕೊರೆಸಲು ಮಂಜೂರಾತಿ ಸಿಕ್ಕಿದೆ’ ಎಂಬ ಭರವಸೆ ಸಿಕ್ಕಿದೆಯಾದರೂ, ಕೊಳವೆ ಬಾವಿ ಕೊರೆಸುವುದು ಎಂದು? ಅಕಸ್ಮಾತ್ ನೀರು ಸಿಕ್ಕರೆ ಮೋಟರ್ ಪಂಪು ಬಿಟ್ಟು, ವಿದ್ಯುತ್ ಸಂಪರ್ಕ ಕೊಟ್ಟು ನೀರನ್ನು ಕಾಣುವುದು ಯಾವಾಗ? ಎಂಬ ಚಿಂತೆ ಇಲ್ಲಿನವರನ್ನು ಕಾಡಿದೆ.

ತಾಲ್ಲೂಕಿನಲ್ಲಿ ಪ್ರೌಢಶಾಲೆ ಇಲ್ಲದೆ ವಿದ್ಯಾರ್ಥಿಗಳು ಪಡುತ್ತಿದ್ದ ತೊಂದರೆ ಮನಗಂಡು ಶಿಡ್ಲಘಟ್ಟದ ಪ್ರಥಮ ಪುರಸಭಾ ಅಧ್ಯಕ್ಷ ಬಿ.ವಿರೂಪಾಕ್ಷಪ್ಪ ಅವರು ತಮ್ಮ ಹೆಸರನ್ನು ಕೂಡ ಬಯಸದೇ ನಿಸ್ವಾರ್ಥವಾಗಿ ಈ ಶಾಲೆಯ ಕಟ್ಟಡ ಮತ್ತು 13 ಎಕರೆ ಒಂದು ಗುಂಟೆ ಜಮೀನನ್ನು ಸರ್ಕಾರಕ್ಕೆ ದಾನವಾಗಿ ನೀಡಿದ್ದರು.

ಈ ಶಾಲೆಗೆ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಆಗಸ್ಟ್ 13, 1951 ರಂದು ಕಟ್ಟಡದ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರೆ, 1954ರ ಜೂನ್ 5 ರಂದು ಆಗಿನ ಮುಖ್ಯಮಂತ್ರಿ ಕೆ.ಹನುಮಂತಯ್ಯ ಅವರು ವಿರೂಪಾಕ್ಷಪ್ಪ ಹೈಸ್ಕೂಲ್ ಕಟ್ಟಡವನ್ನು ಉದ್ಘಾಟಿಸಿದ್ದರು.

‘ವಿರೂಪಾಕ್ಷಪ್ಪ ಅವರಂತಹ ಕೊಡುಗೈ ದಾನಿಗಳು ಬೆಲೆ ಕಟ್ಟಲಾಗದ ತಮ್ಮ ಆಸ್ತಿಯನ್ನು ಸಮಾಜಕ್ಕೆ ದಾನವಾಗಿ ನೀಡಿದರೆ, ಈಗಿನ ರಾಜಕಾರಣಿಗಳ ಕೈಯಲ್ಲಿ ಶಾಲೆಯ ಕನಿಷ್ಠ ಮೂಲಸೌಕರ್ಯ ಸಮಸ್ಯೆಗಳನ್ನು ಕೂಡ ನಿವಾರಿಸದಿದ್ದರೆ ಹೇಗೆ’ ಎನ್ನುತ್ತಾರೆ ಹಿರಿಯರೊಬ್ಬರು.

‘ಆಗಿನ ಹಿರಿಯರ ಸಾಮಾಜಿಕ ಕಳಕಳಿಯಿಂದ ಪಟ್ಟಣದಲ್ಲಿ ಪ್ರಾರಂಭಗೊಂಡ ಏಕೈಕ ಪೌಢಶಾಲೆಯಲ್ಲಿ ಓದಿ ಹಲವಾರು ಮಂದಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಂದು ದಾನಿಗಳು ನೀಡಿರುವ ಸ್ಥಳದಲ್ಲಿ ಈಗ ಪದವಿಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು, ನೆಹರೂ ಕ್ರೀಡಾಂಗಣ ಮತ್ತು ನಗರಸಭೆಗೆ ಆದಾಯ ತರುವ ಅಂಗಡಿ ಮಳಿಗೆಗಳು ನಿರ್ಮಾಣಗೊಂಡಿವೆ‘ ಎನ್ನುತ್ತಾರೆ ನಿವೃತ್ತ ಪ್ರಾಧ್ಯಾಪಕ ಆರ್.ಆಂಜನೇಯುಲು.

‘ಮೊದಲಿದ್ದ ವಿರೂಪಾಕ್ಷಪ್ಪ ಹೈಸ್ಕೂಲ್ ಎಂಬ ಹೆಸರು ಪ್ರೌಢಶಾಲೆಯ ಪ್ರಾಂಶುಪಾಲರ ಕೊಠಡಿಯ ಗೋಡೆಯಲ್ಲಿ ಶಂಕುಸ್ಥಾಪನಾ ಫಲಕದಲ್ಲಿ ಮಾತ್ರ ಉಳಿದಿದೆ. ಇದೇ ಶಾಲೆಯಲ್ಲಿ ಓದಿರುವ ಹಿರಿಯ ವಿದ್ಯಾರ್ಥಿಗಳು, ಈ ಸ್ಥಳದಿಂದ ಆದಾಯ ಪಡೆಯುವ ನಗರಸಭೆಯವರು ಶಾಲೆಯ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT