ಗುರುವಾರ , ಸೆಪ್ಟೆಂಬರ್ 16, 2021
29 °C
ಕಾರ್ಮಿಕ, ರೈತ ಮತ್ತು ಕೃಷಿ ಕೂಲಿಕಾರರ ಸಂಘಟನೆಗಳಿಂದ ಉಪವಿಭಾಗಾಧಿಕಾರಿ ಕಚೇರಿ ಬಳಿ ಧರಣಿ

ಚಿಕ್ಕಬಳ್ಳಾಪುರ: ಬಂಡವಾಳಶಾಹಿ ಹಿಡಿತದಲ್ಲಿ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕೃಷಿ, ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿರೋಧ, ಕೇಂದ್ರ ಸರ್ಕಾರದ ಉದ್ದಿಮೆಗಳ ಖಾಸಗೀಕರಣಕ್ಕೆ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ದೇಶದಾದ್ಯಂತ ಕಾರ್ಮಿಕ, ರೈತ ಮತ್ತು ಕೃಷಿ ಕೂಲಿಕಾರರ ಸಂಘಟನೆಗಳು ಹಮ್ಮಿಕೊಂಡಿದ್ದ ಧರಣಿಗೆ ಜಿಲ್ಲೆಯಲ್ಲಿಯೂ ಬೆಂಬಲ ವ್ಯಕ್ತವಾಯಿತು.

ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಸದಸ್ಯರು ಧರಣಿ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ಕಾರ್ಪೊರೇಟ್ ಕಂಪನಿಗಳ ಹಿಡಿತದಲ್ಲಿ ಸರ್ಕಾರಗಳು ಸಿಲುಕಿವೆ. ಕೃಷಿ ರಂಗ ಸುಧಾರಣೆ ನೆಸರಿನಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿರುವ ಮೂರು ಹೊಸ ಕೃಷಿ ಕಾನೂನುಗಳು ರೈತ ವಿರೋಧಿಯಾಗಿವೆ. ಕೃಷಿ ಕ್ಷೇತ್ರವನ್ನು ಕಬಳಿಸಲು ಹೊಂಚುಹಾಕುತ್ತಿರುವ ಕಾರ್ಪೊರೇಟ್ ಕಂಪನಿಗಳ ಪರವಾಗಿವೆ ಎಂದು ದೂರಿದರು.

ಸರ್ಕಾರಿ ಉದ್ದಿಮೆಗಳ ಖಾಸಗೀಕರಣ ವೇಗವಾಗಿ ನಡೆಯುತ್ತಿದೆ. ದೇಶದ ನೆಲ, ಜಲ, ಇಂಧನ ಸೇರಿದಂತೆ ಸಂಪನ್ಮೂಲಗಳನ್ನು ಕಡಿಮೆ ದರಕ್ಕೆ ಕೈಗಾರಿಕೋದ್ಯಮಿಗಳಿಗೆ ಪೂರೈಸಲು ಸರ್ಕಾರ ಮುಂದಾಗಿದೆ. 29 ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿ 4 ಸಂಹಿತೆಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದರು.

ಬಿಸಿಯೂಟ ನೌಕರರು, ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸಕಾಲಕ್ಕೆ ವೇತನ ಸಹ ಪಾವತಿ ಆಗುತ್ತಿಲ್ಲ. ದುಡಿಯುವ ಜನರು ಬೀದಿ ಪಾಲಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚಿದೆ. ಈ ಹೆಚ್ಚಳವನ್ನು ತಗ್ಗಿಸಬೇಕು. ಜಾನುವಾರು ಹತ್ಯೆ ಕಾಯ್ದೆಯನ್ನು ಹಿಂಪಡೆಯಬೇಕು. ಕೋವಿಡ್ ಕಾರಣದಿಂದ ಅಸಂಘಟಿತ ವಲಯದ ಕಾರ್ಮಿಕರು ಕಳೆದ ಎರಡು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಸೌಲಭ್ಯಗಳನ್ನು ಒದಗಿಸಬೇಕು. ಅಶಾ, ಅಂಗನವಾಡಿ, ಗ್ರಾಮ ಪಂಚಾಯಿತಿ, ಬಿಸಿಯೂಟ ಸಿಬ್ಬಂದಿಯನ್ನು ಕಾಯಂ ನೌಕರರು ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಉಪವಿಭಾಗಾಧಿ ಕಚೇರಿಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.

ಬಿಸಿಯೂಟ ಸಿಬ್ಬಂದಿ ಸಂಘಟನೆಯ ಕೆ.ಆರ್.ಮಂಜುಳಾ, ಹಳ್ಳಿ ಮಕ್ಕಳು ಸಂಘಟನೆಯ ವೆಂಕಟರಮಣ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.