ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು, ವಿಮಾನ, ಹಡಗು ಬಂತು ಅಪ್ಪೇಗೌಡನಹಳ್ಳಿಗೆ

ಶಾಲೆಯ ಭಿತ್ತಿಗಳ ಮೇಲೆ ಮೂಡಿದೆ ಚಿತ್ತಾರ ; ಚಿಣ್ಣರ ಮನದಲಿ ಮೂಡಿದೆ ಸಂತಸ
Last Updated 25 ಡಿಸೆಂಬರ್ 2019, 1:47 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲ. ಬಸ್ ಹತ್ತಲು ಅವರು ಶಿಡ್ಲಘಟ್ಟದ ಮುಖ್ಯ ರಸ್ತೆಯವರೆಗೂ ಬರಬೇಕು. ಇನ್ನು ರೈಲನ್ನು ಹತ್ತಬೇಕೆಂದರೆ ಶಿಡ್ಲಘಟ್ಟದ ರೈಲ್ವೆ ನಿಲ್ದಾಣಕ್ಕೆ ಬರಬೇಕು. ವಿಮಾನ ಹತ್ತಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಕು. ಅಂತರ್ಜಲ ಕುಸಿದಿರುವುದರಿಂದ ಹಡಗು ಕನಸಿನ ಮಾತೇ ಸರಿ!

ಆದರೆ ಹಠತೊಟ್ಟಂತೆ, ಗ್ರಾಮದ ಸರ್ಕಾರಿ ಶಾಲೆಗೆ ಈ ಎಲ್ಲಾ ಸಾರಿಗೆ ಸಾಧನಗಳನ್ನೂ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಶಾಲೆಯ ವಿದ್ಯಾರ್ಥಿಗಳು ರೈಲು ಬೋಗಿ, ಎಂಜಿನ್‌ನಲ್ಲಿ ಹಾಗೂ ಬಸ್ ಹತ್ತಿ ಕುಳಿತು ಪಾಠ ಕೇಳುತ್ತಾರೆ.

ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಒಂದೆಡೆ ಗ್ರಾಮದಿಂದ ದೆಹಲಿಗೆ ಹೋಗುವ ‘ಅಪ್ಪೇಗೌಡನಹಳ್ಳಿ ರಾಜಧಾನಿ ಎಕ್ಸ್‌ಪ್ರೆಸ್’ ರೈಲು ಆಗಿ ಪರಿವರ್ತಿತವಾಗಿದ್ದರೆ, ಮತ್ತೊಂದೆಡೆ, ‘ಬೆಂಗಳೂರು ಎಕ್ಸ್‌ಪ್ರೆಸ್’ ಗ್ರಾಮಾಂತರ ಸಾರಿಗೆ ಬಸ್ ಆಗಿ ಪರಿವರ್ತಿತವಾಗಿದೆ. ಇದಲ್ಲದೇ, ಮಕ್ಕಳನ್ನು ಕರೆದೊಯ್ಯಲೆಂಬಂತೆ ‘ಅಪ್ಪೇಗೌಡನಹಳ್ಳಿ ಇಂಡಿಯನ್ ಏರ್ ಲೈನ್ಸ್’ ವಿಮಾನ ಮತ್ತು ‘ಐ.ಎನ್.ಎಸ್. ವಿರಾಟ್ ನೌಕೆ’ಯೂ ಶಾಲೆಯ ಗೋಡೆಯಲ್ಲಿ ವಿರಾಜಮಾನವಾಗಿವೆ.

ಇವುಗಳೊಂದಿಗೆ ಶಾಲೆಯ ಕೊಠಡಿಯ ಒಳಗಡೆ ರೇಷ್ಮೆ ಉದ್ದಿಮೆಯನ್ನು ವಿವರಿಸುವ ಹಿಪ್ಪುನೇರಳೆ ಸೊಪ್ಪು, ರೇಷ್ಮೆ ಹುಳು ಮತ್ತು ಗೂಡು, ಉಳುವ ರೈತನ ಚಿತ್ರ ಹಾಗೂ ಶಾಲೆಯ ಕಾಂಪೌಂಡ್ ಗೋಡೆಯ ಮೇಲೆ ಪುಸ್ತಕ ಓದುತ್ತಿರುವ ಮಕ್ಕಳ ಚಿತ್ರಗಳೂ ಸುಂದರವಾಗಿ ಮೂಡಿವೆ. ಮೂರು ರೈಲಿನ ಬೋಗಿಗಳಿಗೆ ಜಿಲ್ಲೆಯ ಹೆಮ್ಮೆಯ ಸಾಧಕರಾದ ಸರ್.ಎಂ.ವಿಶ್ವೇಶ್ವರಯ್ಯ, ಸಿ.ಎನ್.ಆರ್.ರಾವ್ ಮತ್ತು ಎಚ್.ನರಸಿಂಹಯ್ಯ ಅವರ ಹೆಸರನ್ನಿರಿಸಿದ್ದಾರೆ.

ರೈಲಿನ ಎಂಜಿನ್ ಹಿಂದೆ ಮೂರು ಬೋಗಿ ರೂಪದ ಕೊಠಡಿ
ರೈಲಿನ ಎಂಜಿನ್ ಹಿಂದೆ ಮೂರು ಬೋಗಿ ರೂಪದ ಕೊಠಡಿ

‘ಇದು ಸುಮಾರು ಒಂದೂವರೆ ವರ್ಷದ ಪ್ರಯತ್ನ. ನಮ್ಮೂರಿನ ಸರ್ಕಾರಿ ಶಾಲೆ ವಿಶೇಷವಾಗಿರಬೇಕು. ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲದಂತೆ ಬಣ್ಣ ಬಳಿಸಬೇಕೆಂದು ಹಲವಾರು ಮಾದರಿಗಳನ್ನು ಗಮನಿಸಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಶಾಲೆಗಳಿಗೆ ರೈಲು, ಬಸ್ಸಿನಂತೆ ಕಾಣುವ ಹಾಗೆ ಬಣ್ಣ ಬಳಿದಿರುವುದು ಪ್ರೇರಣೆ ನೀಡಿತು’ ಎಂದರು ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್‌.

‘ಕೇವಲ ಒಂದೇ ಸಾರಿಗೆ ಇದ್ದರೆ ಸಾಲದು, ಎಲ್ಲಾ ರೀತಿಯದ್ದೂ ನಮ್ಮ ಶಾಲೆಯಲ್ಲಿರಬೇಕೆಂದು ಯೋಜನೆ ಹಾಕಿಕೊಂಡೆ. ಅದಕ್ಕೆ ತಕ್ಕಂತೆ ಚಿತ್ರಕಲಾವಿದ ವಿಜಯ್ ಸಿಕ್ಕರು’ ಎಂದು ತ್ಯಾಗರಾಜ್ ಶಾಲೆಗೆ ರೈಲು, ಬಸ್ಸು, ವಿಮಾನ, ಹಡಗು ಬಂದ ಬಗೆ ವಿವರಿಸಿದರು.

‘ಬಸ್ಸು ವಾಯುವ್ಯ ಸಾರಿಗೆ ರೀತಿಯಲ್ಲಿರಲೆಂದು ಶಿಕ್ಷಕರು ಬಯಸಿದರು. ಇದರೊಂದಿಗೆ ಓದುವ ಮಕ್ಕಳು, ರೈತ ಮತ್ತು ರೇಷ್ಮೆ ಚಿತ್ರಗಳನ್ನೂ ಬರೆಸಿದೆವು. ಗ್ರಾಮ ಪಂಚಾಯಿತಿ ಅನುದಾನದಿಂದ ಐವತ್ತು ಸಾವಿರ ಹಣ, ಉಳಿದಂತೆ ಶಾಲಾ ಅಭಿವೃದ್ಧಿ ಸಮಿತಿ, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆರ್ಥಿಕ ಸಹಾಯ ಮಾಡಿದ್ದಾರೆ’ ಎಂದು ಅವರು ಹೇಳಿದರು.

ವಿಮಾನದ ಮುಂದೆ ಮಕ್ಕಳು
ವಿಮಾನದ ಮುಂದೆ ಮಕ್ಕಳು

ಶಾಲೆ ಉಳಿವಿಗೆ ಸಹಕಾರಿ
ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಮಾರು 75 ವರ್ಷಕ್ಕೂ ಹಳೆಯದು. ಸುಣ್ಣ ಬಣ್ಣ ಬಳಿದು 15 ವರ್ಷಗಳಾಗಿತ್ತು. ಇದೀಗ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಅವರ ಆಸಕ್ತಿ, ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ನೆರವಿನಿಂದ ಹೊಸ ರೂಪ ಪಡೆದುಕೊಂಡಿದೆ. ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ಈ ರೀತಿಯ ಕ್ರಿಯೆಗಳು ಸಹಕಾರಿ.
-ಎಂ.ವಿ.ವೆಂಕಟರತ್ನಮ್ಮ,ಮುಖ್ಯಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT