ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳನ್ನು ಸೃಷ್ಟಿಸಿರುವುದೇ ಸರ್ಕಾರದ ಸಾಧನೆ: ಕೋಟ ಶ್ರೀನಿವಾಸ ಪೂಜಾರಿ

ಸಮ್ಮಿಶ್ರ ಸರ್ಕಾರದ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಆರೋಪ
Last Updated 1 ಸೆಪ್ಟೆಂಬರ್ 2018, 14:03 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ನೂರು ದಿನಗಳಲ್ಲಿ ನೂರು ಸಮಸ್ಯೆಗಳನ್ನು ಸೃಷ್ಟಿಸಿರುವುದೇ ಸಮ್ಮಿಶ್ರ ಸರ್ಕಾರದ ಸಾಧನೆ. ಸಮನ್ವಯ ಸಮಿತಿ ಎಂದರೆ ಸರ್ಕಾರದ ಜಗಳ ಬಿಡಿಸುವ ಸಮಿತಿ ಎನ್ನುವಂತಾಗಿದೆ. ಸಮನ್ವಯ ಸಮಿತಿ ಅಧ್ಯಕ್ಷರೇ ಕಾಯಂ ಜಗಳ ಆಡುತ್ತಿದ್ದಾರೆ. ಇನ್ನು ಸಮನ್ವಯದ ಪ್ರಶ್ನೆ ಎಲ್ಲಿಂದ ಬರಬೇಕು. ಬಹಳ ಕಷ್ಟಪಟ್ಟು ಸಮನ್ವಯ ಸಮಿತಿ ಸಭೆ ನಡೆಸಲಾಗಿದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ. ಸ್ವತ: ಮುಖ್ಯಮಂತ್ರಿಗಳೇ ಹೇಳಿದಂತೆ ಅವರು ಸಾಂದರ್ಭಿಕ ಶಿಶುವಾದರೆ ಬಿಜೆಪಿ ಆಕ್ಷೇಪವಿಲ್ಲ. ಆದರೆ, ಹಿಂದಿನ ಸರ್ಕಾರದ ಯೋಜನೆಗಳನ್ನು ಬಿಟ್ಟು ಒಂದು ಹೆಜ್ಜೆಯೂ ಮುಂದೆ ಹೋಗದ ಸ್ಥಿತಿಯಲ್ಲಿ ಸಮ್ಮಿಶ್ರ ಸರ್ಕಾರವಿದೆ’ ಎಂದು ಆರೋಪಿಸಿದರು.

‘ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮನ್ನಾ ಮಾಡುವ ಭರವಸೆ ನೀಡಿದ್ದರು. ಆದರೆ, ನೂರು ದಿನಗಳೇ ಕಳೆದರೂ ರೈತರ ಸಾಲ ಮನ್ನಾ ಬಗ್ಗೆ ಈವರೆಗೆ ಸ್ಪಷ್ಟತೆ ಇಲ್ಲ. ಸಾಲ ಮನ್ನಾ ಹೆಸರಿನಲ್ಲಿ ರೈತರಿಗೆ ಆಸೆ ತೋರಿಸಿ ಕಡೆಗೆ ನಿರಾಶೆ ಮಾಡಿದ್ದನ್ನು ಹೊರತುಪಡಿಸಿ ರಾಜ್ಯ ಸರ್ಕಾರ ಮತ್ತೇನನ್ನೂ ಮಾಡಿಲ್ಲ. ತಾನೇ ತೆಗೆದುಕೊಂಡ ನಿಲುವನ್ನು ಅನುಷ್ಠಾನ ಮಾಡುವ ಶಕ್ತಿ ರಾಜ್ಯ ಸರ್ಕಾರಕ್ಕೆ ಇಲ್ಲದಂತಾಗಿದೆ’ ಎಂದು ಆಪಾದಿಸಿದರು.

‘ರಾಜ್ಯದಲ್ಲಿ 18 ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಈ ಪೈಕಿ 9 ರಿಂದ 10 ಸಾವಿರ ಘಟಕಗಳು ಕೆಲಸ ಮಾಡುತ್ತಿಲ್ಲ. ಈ ಘಟಕಗಳಿಗೆ ಕೇಂದ್ರ ಸರ್ಕಾರದ ಅನುದಾನವಿದೆ. ರಾಜ್ಯದಲ್ಲಿನ ಎಲ್ಲಾ ಘಟಕಗಳನ್ನು ಪಕ್ಷಾತೀತವಾಗಿ ಪರಿಶೀಲಿಸಿ ಜನರಿಗೆ ಅವುಗಳಿಂದ ಶುದ್ಧ ನೀರು ಸಿಗುತ್ತಿದೆಯೇ ಎಂದು ಪತ್ತೆ ಹಚ್ಚಲು ಸದನ ಸಮಿತಿಯೊಂದನ್ನು ರಚಿಸಲು ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಆದರೆ ಅದಕ್ಕೆ ಸರ್ಕಾರ ಒಪ್ಪಲಿಲ್ಲ’ ಎಂದು ಹೇಳಿದರು.

‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿಗಳಿಬ್ಬರು ಒಂದಾಗಿದ್ದೇವೆ ಎಂದಿದ್ದಾರೆ. ಆದರೂ ಜನಪರ ಆಡಳಿತ ನೀಡುವ ಶಕ್ತಿ ಸಮ್ಮಿಶ್ರ ಸರ್ಕಾರಕ್ಕೆ ಬಂದಿಲ್ಲ’ ಎಂದು ತಿಳಿಸಿದರು.

**************
ಕಳೆದ 4 ವರ್ಷಗಳಲ್ಲಿ ಜಿಲ್ಲೆಯ ವಸತಿ ಯೋಜನೆಗಳ ಚಿತ್ರಣ

41,676 –ಮಂಜೂರಾದ ಮನೆಗಳು
12,680 –ನಿರ್ಮಾಣ ಕಾಮಗಾರಿ ಆರಂಭಿಸಿದ ಮನೆಗಳು
8,200 –ತಳಪಾಯ, ಗೋಡೆ ಹಂತದಲ್ಲಿರುವ ಮನೆಗಳು
13,473 –ಪೂರ್ಣಗೊಳ್ಳದ ಮನೆಗಳು
1,870 –ಬ್ಲಾಕ್ ಮಾಡಿ ಹಣವನ್ನೇ ನೀಡಿದ ಪ್ರಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT