ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಶಿಲೀಂಧ್ರ ರೋಗಕ್ಕೆ ನಲುಗಿದ ದ್ರಾಕ್ಷಿ

ಜಿಲ್ಲೆಯಲ್ಲಿ 2,800 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ
Last Updated 28 ನವೆಂಬರ್ 2021, 6:44 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ದ್ರಾಕ್ಷಿಯೂ ಒಂದು. ದ್ರಾಕ್ಷಿ ಬಹಳಷ್ಟು ರೈತರಿಗೆ ಬದುಕು ಕಟ್ಟಿಕೊಟ್ಟಿದೆ. ಆದರೆ ಜಿಲ್ಲೆಯಲ್ಲಿ ಸುರಿದ ಮಹಾಮಳೆಯ ಕಾರಣದಿಂದ ದ್ರಾಕ್ಷಿ ಬಳ್ಳಿಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸಪಡುತ್ತಿದ್ದಾರೆ.ಶಿಲೀಂಧ್ರ ರೋಗ (ಡೌನಿ ಮಿಲ್ಡ್ಯೂ) ದ್ರಾಕ್ಷಿ ಬೆಳೆಗಾರರನ್ನು ಹೈರಾಣು ಮಾಡಿದೆ.

ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ದ್ರಾಕ್ಷಿ ಪ್ರಮುಖ ಬೆಳೆ. ಈ ಎರಡೂ ತಾಲ್ಲೂಕಿನಲ್ಲಿ 2,800 ಹೆಕ್ಟೇರ್‌ನಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಈಗಾಗಲೇ 1,200 ಮಿ.ಮೀಗೂ ಹೆಚ್ಚು ಮಳೆ ಸುರಿದಿದೆ.ಕಳೆದ ಮೂರು ದಶಕಗಳಲ್ಲಿಯೇ ಸುರಿಯದಷ್ಟು ಮಳೆ ಜಿಲ್ಲೆಯಲ್ಲಿ ಈ ಬಾರಿ ಸುರಿದಿದೆ. ಈ ಕಾರಣದಿಂದವಾತಾವರಣದಲ್ಲಿ ತೇವಾಂಶ ತೀವ್ರವಾಗಿ ಹೆಚ್ಚಿದೆ.ದ್ರಾಕ್ಷಿ ತೋಟಗಳಲ್ಲಿ ಹೇರಳವಾಗಿ ನೀರು ನಿಂತಿದೆ. ಈ ಪರಿಣಾಮ ಶಿಲೀಂಧ್ರ ರೋಗ (ಡೌನಿ ಮಿಲ್ಡ್ಯೂ) ತೀವ್ರವಾಗಿಯೇ ಹೆಚ್ಚಿದೆ.

ಮಳೆ ಮತ್ತು ಚಳಿಗಾಲದಲ್ಲಿ ದ್ರಾಕ್ಷಿಗೆ ಶಿಲೀಂಧ್ರ ರೋಗಗಳಾದಡೌನಿ ಮಿಲ್ಡ್ಯೂ ಮತ್ತುಪೌಡರಿ ಮಿಲ್ಡ್ಯೂ ಸಾಮಾನ್ಯ ಎನಿಸಿದರೂ ಈ ಬಾರಿ ಅಧಿಕ ಮಳೆಯಿಂದ ರೋಗ ವ್ಯಾಪಕವಾಗಿದೆ. ಜಿಲ್ಲೆಯಲ್ಲಿ ಪ್ರಮುಖವಾಗಿ ದಿಲ್‌ಖುಷ್, ರೆಡ್ ಬ್ಲೂ, ಬೆಂಗಳೂರು ಬ್ಲೂ, ಸೀಡ್‌ಲೆಸ್ ದ್ರಾಕ್ಷಿಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ.

ಹೆಚ್ಚಿದ ಖರ್ಚು:ಅಧಿಕ ಮಳೆ ರೈತರ ಖರ್ಚನ್ನು ಸಹ ಹೆಚ್ಚಿಸಿದೆ. ಶಿಲೀಂಧ್ರ ರೋಗ ಹತೋಟಿಗೆ ರೈತರು ಹೇರಳವಾಗಿ ಔಷಧಿಗಳನ್ನು ಸಿಂಪಡಿಸುತ್ತಿದ್ದಾರೆ. ರೋಗದಿಂದ ದ್ರಾಕ್ಷಿ ಕಡ್ಡಿಗಳನ್ನು ಉಳಿಸಿಕೊಂಡರೆ ಸಾಕು ಎನ್ನುವ ಮನಸ್ಥಿತಿಯಲ್ಲಿ ಇದ್ದಾರೆ.

‘1984ರಿಂದ ದ್ರಾಕ್ಷಿ ಬೆಳೆಯುತ್ತಿದ್ದೇವೆ. ಈಗ 10 ಎಕರೆಯಲ್ಲಿ ದ್ರಾಕ್ಷಿ ಇದೆ. ವಾಡಿಕೆಗಿಂತ ಮೂರ್ನಾಲ್ಕು ಪಟ್ಟು ಮಳೆ ಹೆಚ್ಚಿದೆ. ಮಳೆ ದ್ರಾಕ್ಷಿ ಬೆಳೆಗಾರರನ್ನು ಹೈರಾಣಾಗಿಸಿದೆ. ಶಿಲೀಂಧ್ರ ರೋಗ ವ್ಯಾಪಿಸಿದೆ. ನಮಗೆ ಮುಂದಿನ ಬೆಳೆಯಲ್ಲಿ ಲಾಭ ಬರದಿದ್ದರೂ ಪರವಾಗಿಲ್ಲ ದ್ರಾಕ್ಷಿ ಕಡ್ಡಿಗಳು ಉಳಿದರೆ ಸಾಕು ಎನಿಸಿದೆ. ರೋಗದಿಂದ ದ್ರಾಕ್ಷಿ ಕಡ್ಡಿಗಳು ನಾಶವಾಗುತ್ತವೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರ ತಾಲ್ಲೂಕು ಅಜ್ಜಾವರ ಗ್ರಾಮದ ರೈತ ಕೆ.ಆರ್.ರೆಡ್ಡಿ.

‘ದ್ರಾಕ್ಷಿ ಕಡ್ಡಿಗಳನ್ನು ಉಳಿಸಿಕೊಳ್ಳಲು ಔಷಧಿಗಳನ್ನು ಹೆಚ್ಚು ಸಿಂಪಡಿಸುತ್ತಿದ್ದೇವೆ. ಒಂದು ಎಕರೆಗೆ ಒಮ್ಮೆ ಔಷಧಿ ಸಿಂಪಡಿಸಲು ₹ 1,200 ಅಗತ್ಯ. ಸಾಮಾನ್ಯ ದಿನಗಳಿಗಿಂತ 60ರಿಂದ 70 ಬಾರಿ ಸಿಂಪಡಿಸಿದ್ದೇವೆ. ಸಿಂಪಡಿಸಿದ ಸ್ವಲ್ಪ ಸಮಯದಲ್ಲಿಯೇ ಮಳೆ ಬಂದಿದೆ. ಔಷಧಿಗಾಗಿಯೇ ಲಕ್ಷಾಂತರ ರೂಪಾಯಿ ವ್ಯಯಿಸಿದ್ದೇವೆ’ ಎಂದು ತಿಳಿಸಿದರು.

ಬಳ್ಳಿಗಳು ಗರ್ಭಧಾರಣೆಯ ಅವಧಿಯಲ್ಲಿ ಮಳೆ ಕಡಿಮೆ ಆಗಬೇಕು. ನೀರನ್ನು ಕಡಿಮೆ ನೀಡಬೇಕು. ಆದರೆ ಈ ಬಾರಿ ಮಳೆ ತೀವ್ರವಾದ ಪರಿಣಾಮ ಹೆಚ್ಚು ನೀರನ್ನು ಬಳ್ಳಿಗಳು ಕುಡಿದಿವೆ. ಗಿಡಗಳು ಉಳಿದರೆ ಸಾಕು ಎನ್ನುವ ಮಟ್ಟಕ್ಕೆ ಬಂದಿದ್ದೇವೆ.ಸರ್ಕಾರ ನೆರವಿಗೆ ಧಾವಿಸಬೇಕು. ಒಂದು ಎಕರೆ ದ್ರಾಕ್ಷಿಗೆ ಕನಿಷ್ಠ ₹ 1 ಲಕ್ಷವಾದರೂ ವೆಚ್ಚವಾಗುತ್ತದೆ. ರೋಗ ಹೆಚ್ಚಿರುವ ಕಾರಣ ಔಷಧಿಗಳಿಗೆ ಸಹಾಯಧನ ನೀಡಬೇಕು. ನಷ್ಟ ಪರಿಹಾರ ನೀಡಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT