ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯೇಂದ್ರ ಅಲ್ಲ; ಸಾಮಾನ್ಯ ಕಾರ್ಯಕರ್ತನ ಸ್ಪರ್ಧೆ

ವರುಣಾ ಅಭ್ಯರ್ಥಿ– ಯಡಿಯೂರಪ್ಪ ಸ್ಪಷ್ಟನೆ; ಸಿ.ಎಂ ವಿರುದ್ಧ ವಿ.ಶ್ರೀನಿವಾಸಪ್ರಸಾದ್‌, ರೇವಣ್ಣ ಸಿದ್ದಯ್ಯ ಆಕ್ರೋಶ
Last Updated 24 ಏಪ್ರಿಲ್ 2018, 11:34 IST
ಅಕ್ಷರ ಗಾತ್ರ

ನಂಜನಗೂಡು: ‘ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ನಾಮಪತ್ರ ಸಲ್ಲಿಸುವುದಿಲ್ಲ. ಸಾಮಾನ್ಯ ಕಾರ್ಯಕರ್ತನನ್ನು ಇಲ್ಲಿ ಕಣಕ್ಕೆ ಇಳಿಸಲಾಗುವುದು’ ಎಂದು ಪ್ರಕಟಿಸುವ ಮೂಲಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೋಮವಾರ ಅಚ್ಚರಿ ಮೂಡಿಸಿದರು.

‘ಕ್ಷೇತ್ರದ ಜನರ ಒತ್ತಾಯದ ಮೇರೆಗೆ ಜನಾಭಿಪ್ರಾಯ ತಿಳಿಯಲು ವಿಜಯೇಂದ್ರನನ್ನು ಕ್ಷೇತ್ರಕ್ಕೆ ಕಳುಹಿಸಿದ್ದೆ’ ಎಂದು ಇಲ್ಲಿನ ವಿದ್ಯಾವರ್ಧಕ ಮೈದಾನದಲ್ಲಿ ವರುಣಾ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಪ್ರಕಟಿಸಿದರು.

ವಿಜಯೇಂದ್ರ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳುವರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ. ಫಲಿತಾಂಶ ಪ್ರಕಟವಾದ ದಿನ ಕ್ಷೇತ್ರಕ್ಕೆ ಒಂದು ನಿಮ್ಮೊಡನೆ ವಿಜಯೋತ್ಸವ ಆಚರಿಸುತ್ತೇನೆ’ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಮಪತ್ರವನ್ನು ಸಲ್ಲಿಸಿ ಈಗ ಬಾದಾಮಿಯಲ್ಲಿಯೂ ಸ್ಪರ್ಧಿಸಲು ಹೊರಟಿರುವ ಕುರಿತು ಜನರು ಪ್ರಶ್ನಿಸುತ್ತಿದ್ದಾರೆ. ಸೋಲಿನ ಭೀತಿಯಿಂದ ಬಾದಾಮಿಗೆ ಹೋಗಿದ್ದು ಎಷ್ಟು ಸರಿ ಅಂತ ಕಾಂಗ್ರೆಸ್ಸಿಗರೇ ಕೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ನಡೆಯನ್ನು ಟೀಕಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರು ಸೋತಿರಲಿಲ್ಲ. ಕಳೆದ ಚುನಾವಣೆಯಲ್ಲಿ ಷಡ್ಯಂತ್ರ ನಡೆಸಿ ಪರಮೇಶ್ವರ್ ಅವರನ್ನು ಸೋಲಿಸಿದವರು ಯಾರು? ಈ ಚುನಾವಣೆಯಲ್ಲಿ ಕಾಂಗ್ರೆಸ್‌ನವರೇ ಚಾಮುಂಡೇಶ್ವರಿ ಮತ್ತು ವರುಣಾದಲ್ಲಿ ಮುಖ್ಯಮಂತ್ರಿ ಮತ್ತು ಅವರ ಮಗನನ್ನೂ ಸೋಲಿಸಲಿದ್ದಾರೆ. ನಾವು ಅವರಿಗೆ ಸಹಕಾರ ನೀಡಿದರೆ ಸಾಕು’ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಕೃಷಿ ಉತ್ಪನ್ನಗಳಿಗೆ ಒಂದೂವರೆ ಪಟ್ಟು ಬೆಳೆ ವಿಮೆ, 5 ಕೋಟಿ ಜನರಿಗೆ ₹ 5 ಲಕ್ಷದವರೆಗೆ ಆರೋಗ್ಯ ವಿಮೆ, ದೇಶದ ನದಿಗಳ ಜೋಡಣೆ, ಯುವಜನರಿಗೆ ಉದ್ಯೋಗ ಸೃಷ್ಟಿಸುವ ಯೋಜನೆ ರೂಪಿಸಿದ್ದಾರೆ. ಈ ಬಗ್ಗೆ  ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.

‘ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ, ಕೃಷಿ ಚಟುವಟಿಕೆಗೆ ಕನಿಷ್ಠ 6 ಗಂಟೆ ವಿದ್ಯುತ್‌ ನೀಡಲಾಗುವುದು. ರೈತರ ಸಂಕಷ್ಟಕ್ಕೆ ಸ್ಪಂದಿಸಲು ₹ 5 ಸಾವಿರ ಕೋಟಿ ಆವರ್ತ ನಿಧಿ ಸ್ಥಾಪಿಸಲಾವುದು. ವೃದ್ಧಾಪ್ಯ ವೇತನವನ್ನು ಒಂದು ಸಾವಿರಕ್ಕೆ ಏರಿಸುತ್ತೇವೆ. ಒಂದು ಬಾರಿ ಅವಕಾಶ ನೀಡಿ. ಜನತೆ 5 ವರ್ಷ ನೆಮ್ಮದಿಯ ಜೀವನ ನಡೆಸುವಂತೆ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ’ ಎಂದರು.

ಮುಖಂಡ ರೇವಣಸಿದ್ದಯ್ಯ ಅವವರು, ‘14 ವರ್ಷ ಸಿದ್ದರಾಮಯ್ಯ ನವರ ಒಡನಾಡಿ ಯಾಗಿದ್ದೆ. ನಾನು ಸೇರಿದಂತೆ ಒಂದು ಸಮುದಾಯದ ನಾಯಕರನ್ನು ಉದ್ದೇಶಪೂರ್ವಕವಾಗಿ ನಾಶ ಮಾಡಿದರು’ ಎಂದು ಟೀಕಿಸಿದರು.

ಉದ್ಧಾರ ಮಾಡುವ ಸೋಗಿನಲ್ಲಿ ರಾಜ್ಯದ ಪ್ರತಿಷ್ಠಿತ ಸಮಾಜವನ್ನು ಲಿಂಗಾಯತ– ವೀರಶೈವ ಎಂದು ಒಡೆದು, ಬೀದಿಯಲ್ಲಿ ಪರಸ್ಪರ ಜಗಳವಾಡುವಂತೆ ಮಾಡಿದರು. ಯೋಚಿಸಿಯೇ ಸಿದ್ದರಾಮಯ್ಯನನ್ನು ಸೋಲಿಸುವ ಪಕ್ಷ ಸೇರಿದ್ದೇನೆ, ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನ ಗೂಟ ಬಿಚ್ಚಿಹಾಕಿ, ಕ್ಷೇತ್ರದಿಂದ ಮುಕ್ತಮಾಡಿ’ ಎಂದು ಮತದಾರರಿಗೆ ಮನವಿ ಮಾಡಿದದರು.

ಸಭೆಯಲ್ಲಿ ನಂಜನಗೂಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಹರ್ಷವರ್ಧನ್, ಬಿ.ವೈ.ವಿಜಯೇಂದ್ರ, ಮುಖಂಡ ಶ್ರೀರಾಮುಲು , ನಿವೃತ್ತ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಂ ಮಾತನಾಡಿದರು. ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೋಟೆ ಶಿವಣ್ಣ, ಡಿ.ಎಸ್.ವೀರಯ್ಯ, ಬಿ.ಜೆ.ಪುಟ್ಟಸ್ವಾಮಿ, ಜಯದೇವ್, ಕಾ.ಪು.ಸಿದ್ದಲಿಂಗಸ್ವಾಮಿ, ಕೌಟಿಲ್ಯ ರಘು, ಜಿ.ಪಂ.ಸದಸ್ಯರಾದ ಸದಾನಂದ, ಮಂಗಳಾ ಸೋಮಶೇಖರ್ ಇದ್ದರು.

ಬಾದಾಮಿಗೆ ಪಲಾಯನ; ಶ್ರೀನಿವಾಸಪ್ರಸಾದ್‌ ತರಾಟೆ

ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಅವರು, ‘ಸಿದ್ದರಾಮಯ್ಯನಿಗೆ ಚಾಮುಂಡೇಶ್ವರಿಯಲ್ಲಿ ಸೋಲುವ ಭಯ, ಆತಂಕ ಶುರುವಾಗಿದೆ ಶುರುವಾಗಿದೆ. ಅದ್ದರಿಂದ ಬಾದಾಮಿಗೆ ಪಲಾಯನ ಮಾಡಿದ್ದಾನೆ’ ಎಂದು ಟೀಕಿಸಿದರು.

‘ಮುಖ್ಯಮಂತ್ರಿ ಆದ ಬಳಿಕ ಕ್ಷೇತ್ರವನ್ನು ತಿರುಗಿಯೂ ನೋಡದೇ  ಈಗ ಚಾಮುಂಡೇಶ್ವರಿ –ವರುಣಾ ನನ್ನ ಎರಡು ಕಣ್ಣುಗಳಂತೆ ಎಂದು ಜನರನ್ನು ಮರುಳು ಮಾಡಲು ನೋಡುತ್ತಿದ್ದಾರೆ. ಎರಡೂ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಇಲ್ಲಿನ ಮತದಾರರು ಎಚ್ಚರಿಕೆ ವಹಿಸಬೇಕು. ಸಿದ್ದರಾಮಯ್ಯನದು ಬಹಳ ಕೆಟ್ಟ ಕಣ್ಣುಗಳು, ಇದರಿಂದ ಯಾರಿಗೂ ಒಳ್ಳೆಯದಾಗಲ್ಲ’ ಎಂದು ವ್ಯಂಗ್ಯವಾಡಿದರು.

ಚಾಮುಂಡೇಶ್ವರಿಯಲ್ಲಿ 2 ದಿನ ಮಾತ್ರ ಪ್ರಚಾರ ಅನ್ನುತ್ತಿದ್ದ ಮುಖ್ಯಮಂತ್ರಿ ಈಗ 15 ದಿನಗಳಿಂದ ಅಲ್ಲಿ ಬೆವರು ಹರಿಸುತ್ತಿದ್ದಾರೆ , ಪಂಚಾಯಿತಿ ಸದಸ್ಯರೂ ಇವರನ್ನು ತಿರಸ್ಕರಿಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ದಲಿತರ ವಿರೋಧಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಇದು, ದಲಿತರ ವಿರೋಧಿಯಲ್ಲ. ದಲಿತರ ವಿರೋಧಿ, ದಲಿತರ ಶತ್ರು ಸಿದ್ದರಾಮಯ್ಯ ಎಂಬುದನ್ನು ದಲಿತರು ಮರೆಯಬಾರದು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT