ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗೇಪಲ್ಲಿ: ಸರ್ಕಾರಿ ಶಾಲೆಗೆ ಹಸಿರ ಹೊದಿಕೆ

ದೇವರೆಡ್ಡಿಪಲ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಚ್ಚಹಸಿರು
Published : 14 ಸೆಪ್ಟೆಂಬರ್ 2024, 6:38 IST
Last Updated : 14 ಸೆಪ್ಟೆಂಬರ್ 2024, 6:38 IST
ಫಾಲೋ ಮಾಡಿ
Comments

ಬಾಗೇಪಲ್ಲಿ: ತಾಲ್ಲೂಕಿನ ದೇವರೆಡ್ಡಿಪಲ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಜೆ.ವಸಂತಾ, ಸಹಶಿಕ್ಷಕಿ ಅಮರಾವತಿ ಹಾಗೂ ವಿದ್ಯಾರ್ಥಿಗಳು ಶಾಲಾವರಣದಲ್ಲಿ ಬೆಳೆಸಿದ ಗಿಡ, ಮರಗಳ ಪರಿಸರಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ತಾಲ್ಲೂಕಿನ ಪರಗೋಡು ಗ್ರಾಮ ಪಂಚಾಯಿತಿಯ ಗ್ರಾಮಾಂತರ ಕ್ಲಸ್ಟರ್‌ ವ್ಯಾಪ್ತಿಯ ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಶಾಲೆಯಲ್ಲಿ 27 ಮಂದಿ ಪೈಕಿ, 1ನೇ ತರಗತಿಯಿಂದ 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಇದ್ದಾರೆ. ಪರಗೋಡು ಗ್ರಾಮದಿಂದ ಈ ಗ್ರಾಮಕ್ಕೆ ಸಂಚರಿಸುವ ಮಾರ್ಗದ ರಸ್ತೆಯ ಪಕ್ಕದಲ್ಲಿ 12 ಕುಂಟೆ ಜಾಗದಲ್ಲಿ ಸರ್ಕಾರಿ ಶಾಲೆ ಮಾಡಲಾಗಿದೆ. ಶಾಲೆಗೆ ಮುಖ್ಯದ್ವಾರ, ತಡೆಗೋಡೆ, ಅಕ್ಷರ ದಾಸೋಹ ಕೋಣೆ, ನೀರಿನ ವ್ಯವಸ್ಥೆ, ಶೌಚಾಲಯ ಇವೆ.

ಶಾಲಾವರಣದಲ್ಲಿ ಉತ್ತಮ ಪರಿಸರ ಮಾಡಲು ಶಿಕ್ಷಕಿಯರು ₹15 ಸಾವಿರ ಸ್ವಂತ ಖರ್ಚು ಮಾಡಿಕೊಂಡು, ಸಸಿ ತಂದಿದ್ದಾರೆ. ಖಾಲಿ ಜಾಗ ಇದ್ದ ಶಾಲಾ ಕೊಠಡಿಗಳ ಮುಂದೆ ವಿದ್ಯಾರ್ಥಿಗಳು ಸೇರಿ ಶಿಕ್ಷಕಿಯರು ಅಂದ ಚೆಂದ ಹೂವಿನ ಗಿಡ ನೆಟ್ಟಿದ್ದಾರೆ.

ಶಾಲಾವರಣದಲ್ಲಿ ಇದೀಗ ಸಿಲ್ವರ್ 15 ಗಿಡಗಳು ಹಾಗೂ ಅಂದಚೆಂದ 150 ಗಿಡಗಳನ್ನು ನೆಡಲಾಗಿದೆ. ಶಿಕ್ಷಕಿಯರಿಗೆ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪಠ್ಯದ ಚಟುವಟಿಕೆಗಳ ಜೊತೆಗೆ ಗಿಡ ಮರಗಳನ್ನು ಪೋಷಣೆ, ಉಳಿಸಿ, ಬೆಳೆಸುವುದು, ನೀರು ಸಿಂಪಡಿಸುವುದು ಪ್ರತಿದಿನ ದಿನಚರಿ ಆಗಿದೆ. ಇದೀಗ ಅಂದ ಚೆಂದದ ಹೂವುಗಳು ಅರಳಿವೆ.

ಶಾಲೆಯ ನಲಿ-ಕಲಿ ಚಟುವಟಿಕೆಗಳಿಗೆ ವಿಜ್ಞಾನ, ಪರಿಸರ, ಗಿಡ, ಮರಗಳಿಂದ ಆಗುವ ಅನುಕೂಲಗಳ ಬಗ್ಗೆ ಶಿಕ್ಷಕಿ ಜೆ.ವಸಂತಾ, ಅಮರಾವತಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದಾರೆ.

ಶಾಲೆಯ ನಲಿ-ಕಲಿಯ ಉತ್ತಮ ಚಟುವಟಿಕೆಗೆ 2019-20ನೇ ಸಾಲಿನಲ್ಲಿ ಈ ಸರ್ಕಾರಿ ಶಾಲೆಗೆ ಜಿಲ್ಲಾ ಮಟ್ಟದ ಉತ್ತಮ ನಲಿ-ಕಲಿ ಶಾಲೆ ಎಂದು ಪ್ರಶಸ್ತಿ ಪಡೆದುಕೊಂಡಿದೆ. ಶಾಲೆಯ ಹಳೆ ವಿದ್ಯಾರ್ಥಿಗಳು 25 ಸಸಿ ವಿತರಿಸಿದ್ದಾರೆ. ಹಾಲು ಒಕ್ಕೂಟದಿಂದ ಕಂಪ್ಯೂಟರ್, ಡ್ರಮ್ ಸೆಟ್, ರೈಟ್ ಟು ಲೀವ್ ಸಂಸ್ಥೆಯಿಂದ ಟ್ಯಾಬ್ ವಿತರಿಸಲಾಗಿದೆ.

‘ಶಿಕ್ಷಕ, ಶಿಕ್ಷಕಿಯರು ಮನಸ್ಸು ಮಾಡಿದರೆ, ಸಮಾಜವನ್ನೇ ಬದಲಾಯಿಸುವ ಚಾತುರ್ಯ ಹೊಂದಿದ್ದಾರೆ ಎಂಬುದಕ್ಕೆ ಗ್ರಾಮದ ಸರ್ಕಾರಿ ಕಿರಿಯ ಶಾಲೆಯ ಶಿಕ್ಷಕಿಯರ ಪರಿಸರ ಪ್ರೇಮವೇ ಸಾಕ್ಷಿ. ಉತ್ತಮ ಪರಿಸರ ವೀಕ್ಷಿಸಿ ಗ್ರಾಮಸ್ಥರು ಶಾಲಾವರಣವನ್ನು ಸ್ವಚ್ಛವಾಗಿ ಇರಿಸಿದ್ದಾರೆ. ನಮ್ಮೂರಿನ ಸರ್ಕಾರಿ ಶಾಲೆಯ ಉತ್ತಮ ಪರಿಸರವು ಇತರೆ ಸರ್ಕಾರಿ ಶಾಲೆಯವರಿಗೆ ಮಾದರಿ ಆಗಬೇಕು’ ಎಂದು ಗ್ರಾಮಸ್ಥ ಡಿ.ಎನ್.ಸುಧಾಕರರೆಡ್ಡಿ ತಿಳಿಸಿದರು.

‘ಮೊದಲು ಗ್ರಾಮಸ್ಥರು ಶಾಲಾವರಣವನ್ನೇ ಮಲಿನ ಮಾಡುತ್ತಿದ್ದರು. ನಂತರ ಶಾಲಾವರಣದಲ್ಲಿ ಗಿಡ ಮರ ಬೆಳೆಸಿ, ಉತ್ತಮ ವಾತಾವರಣ ಮೂಡಿಸಲಾಗಿದೆ. ಇದರಿಂದ ಗ್ರಾಮಸ್ಥರು ಅರಿವು ಪಡೆದುಕೊಂಡು, ಉತ್ತಮ ಪರಿಸರಕ್ಕೆ ಸಹಕಾರ ನೀಡಿದ್ದಾರೆ’ ಎಂದು ಶಾಲಾ ಮುಖ್ಯಶಿಕ್ಷಕಿ ಜೆ.ವಸಂತಾ ತಿಳಿಸಿದರು.

‘ಸರ್ಕಾರ ಪರಿಸರ ಸಂರಕ್ಷಣೆ ವಿಶೇಷ ಅಭಿಯಾನ ಜಾರಿ ಮಾಡಿದೆ. ಎಲ್ಲಾ ಸರ್ಕಾರಿ ಶಾಲೆಗಳ ಖಾಲಿ ಜಾಗಗಳಲ್ಲಿ ಗಿಡ, ಮರ ಬೆಳೆಸಬೇಕು. ಪರಿಸರ ಸಂರಕ್ಷಣೆ ಮಾಡುವಂತೆ ಸರ್ಕಾರಿ ಶಾಲೆಗಳಿಗೆ ಸೂಚನೆ ನೀಡಲಾಗುವುದು. ದೇವರೆಡ್ಡಿಪಲ್ಲಿ ಸರ್ಕಾರಿ ಶಾಲೆ ಪರಿಸರಕ್ಕೆ ಮಾದರಿಯಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT