ಗುರುವಾರ , ಅಕ್ಟೋಬರ್ 21, 2021
22 °C
ಅಟಲ್ ಭೂಜಲ ಯೋಜನೆ ಜಾಗೃತಿ

ಶಿಡ್ಲಘಟ್ಟ:ಗ್ರಾಮಸಭೆಯಲ್ಲಿ ಸ್ವಚ್ಛತೆಯ ಕನವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಸೇರಿದಂತೆ ಸಮರ್ಪಕ ನೀರಿನ ಸರಬರಾಜು ಹಾಗೂ ಲಸಿಕೆ ಕಾರ್ಯಕ್ರಮಗಳಿಗೆ ಜನರಿಂದ ಉತ್ತಮ ಸ್ಪಂದನೆ ದೊರೆತಿರುವುದು ಸಂತಸ ತಂದಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಹೇಳಿದರು.

ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಅಟಲ್ ಭೂಜಲ ಯೋಜನೆಯ ಪ್ರಥಮ ಗ್ರಾಮ ಸಭೆ ಮತ್ತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ಲಾಸ್ಟಿಕ್‌ನಿಂದ ತಯಾರು ಮಾಡಿದ ಪೇಪರ್, ಬಾಟಲ್ ಮತ್ತು ಗ್ಲಾಸ್ ಬಳಕೆ ಸಂಪೂರ್ಣವಾಗಿ ಹೋಟೆಲ್‌ಗಳಲ್ಲಿ ಮತ್ತು ಸಾರ್ವಜನಿಕರು ನಿಲ್ಲಿಸಿದ್ದೇ ಆದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತಷ್ಟು ಸ್ವಚ್ಛತೆ ಕಾಪಾಡುವುದು ಸೇರಿದಂತೆ ಜನರಿಗೆ ರೋಗ ರುಜಿನಗಳು ಬಾರದಂತೆ ತಡೆಯಲು ಸಹಕಾರಿಯಾಗುತ್ತದೆ ಎಂದರು.

ನರೇಗಾ ಯೋಜನೆಯಡಿ ಕಾಮಗಾರಿಗಳು ಸಮರೋಪಾದಿಯಾಗಿ ನಡೆಯುತ್ತಿವೆ. ವಿವಿಧ ವಲಯ
ದಲ್ಲಿ ಇನ್ನು ಹೆಚ್ಚಿಗೆ ಕೆಲಸ ಮಾಡುವುದರೊಂದಿಗೆ ರೈತರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮತ್ತಷ್ಟು ಕಾರ್ಯೋನ್ಮುಕರಾಗಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆಯನ್ನು ಹೆಚ್ಚು ಜನರಿಗೆ ಹಾಕಿಸಿರುವುದರಿಂದ ರಾಜ್ಯ ಮಟ್ಟದಲ್ಲಿ ಮೇಲೂರು ಪಂಚಾಯಿತಿಯನ್ನು ಗುರುತಿಸಿದ್ದು ಈ ಕುರಿತು ಸಾಕ್ಷ್ಯ ಚಿತ್ರವನ್ನು ಸರ್ಕಾರ ತಯಾರಿಸುತ್ತಿದೆ ಎಂದರು.

ಮಹಿಳಾ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆಯ ಬಿ.ಮುನಿರಾಜು ಮಾತನಾಡಿ, ಪಂಚಾಯಿತಿ ಸದಸ್ಯರ ಹಾ ಸಮಿತಿ ರಚಿಸಿ ಚೆಕ್ ಡ್ಯಾಂ, ಕೃಷಿಹೊಂಡಗಳನ್ನು ನಿರ್ಮಿಸುವುದರ ಮೂಲಕ ಈ ಭಾಗದಲ್ಲಿ ಅಂತರ್ಜಲ ವೃದ್ಧಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ. ಜಲವನ್ನು ಭೂಮಿಯೊಳಗೆ ಇಂಗಿಸಿ ಮುಂದಿನ ಪೀಳಿಗೆಗೆ ನೀರನ್ನು ಉಳಿಸಬೇಕು. ಈ ಅವಕಾಶವನ್ನು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿ ಕಾರ್ಯಗತಗೊಳಿಸಬೇಕು
ಎಂದರು.

‘ಖಾತೆಗೆ ಹಣ ಬಂದಿಲ್ಲ’

ನರೇಗಾ ಕೆಲಸ ಮುಗಿಸಿ ತಿಂಗಳುಗಳು ಕಳೆದರು ಈವರೆಗೂ ಹಣ ಖಾತೆಗೆ ಬಂದಿಲ್ಲ ಎಂದು ರೈತರೊಬ್ಬರು ಸಭೆಗೆ ಮಾಹಿತಿ ನೀಡಿದಾಗ, ಅಧ್ಯಕ್ಷ ಆರ್.ಎ.ಉಮೇಶ್ ಮಾತನಾಡಿ, 13 ಇಲಾಖೆಗಳ ಪೈಕಿ ತೋಟಗಾರಿಕೆ ಇಲಾಖೆಯ ಓರ್ವ ಸಹಾಯಕ ಅಧಿಕಾರಿ ಮಾತ್ರ ಗ್ರಾಮ ಸಭೆಗೆ ಬಂದಿದ್ದಾರೆ. ಸಾರ್ವಜನಿಕರಿಗೆ ಯಾವ ರೀತಿ ಮಾಹಿತಿ ಕೊಡಬೇಕು. ಪ್ರಮುಖ ಅಧಿಕಾರಿಗಳಿಲ್ಲದ ಗ್ರಾಮ ಸಭೆಯಲ್ಲಿ ಯಾವ ರೀತಿಯ ನ್ಯಾಯ ಒದಗಿಸಲು ಸಾಧ್ಯ. ಈ ಬಗ್ಗೆ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಇಒಗೆ ಪತ್ರ ಬರೆಯಲಾಗುವುದು ಎಂದರು.

ಉಪಾಧ್ಯಕ್ಷೆ ವನಿತಾ ತಿರುಮಲೇಶ್, ಪಿಡಿಒ ಶಾರದಾ, ಜಂಗಮಕೋಟೆ ಹೋಬಳಿ ತೋಟಗಾರಿಕೆ ಇಲಾಖೆಯ ಶಾಂತಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಕೆ.ರವಿಪ್ರಸಾದ್, ಎಂ.ಜೆ.ಶ್ರೀನಿವಾಸ್, ಶಶಿಕಲಾ ರಮೇಶ್, ಸವಿತಾ ಗೋಪಾಲ್, ಶೋಭಾ ಹರೀಶ್, ಭಾಗ್ಯಲಕ್ಷ್ಮಿ, ಗೀತಾಂಜಲಿ, ಅಂಬಿಕಾ, ಕಮಲಮ್ಮ, ನಾರಾಯಣಸ್ವಾಮಿ, ದೇವರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು