ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ; ಪ್ರಗತಿಗೆ ಆಧಾರ ಸ್ತಂಭ

ತೆರಿಗೆ ವೃತ್ತಿದಾರರ ಸಂಘದ ಜಿಲ್ಲಾ ಘಟಕ ಉದ್ಘಾಟನೆ ಮತ್ತು ಜಿಎಸ್‌ಟಿ ಕುರಿತ ಅರಿವು ಕಾರ್ಯಕ್ರಮ
Last Updated 18 ಜುಲೈ 2019, 19:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದೇಶದ ಪ್ರಗತಿಗೆ ಆಧಾರ ಸ್ತಂಭವಾಗಿದೆ. ಏಕರೂಪ ತೆರಿಗೆ ಪದ್ಧತಿ ಬಂದ ಮೇಲೆ ವರ್ತಕರ ಹಲವಾರು ತೆರಿಗೆ ತೊಡಕುಗಳು ನಿವಾರಣೆಯಾಗಿ ದೇಶದ ಪ್ರಗತಿಗೆ ಅನುಕೂಲವಾಗಿದೆ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ ಅಧ್ಯಕ್ಷ (ಎಫ್‌ಕೆಸಿಸಿಐ) ಅಧ್ಯಕ್ಷ ಸಿ.ಆರ್.ಜನಾರ್ಧನ್ ತಿಳಿಸಿದರು.

ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತೆರಿಗೆ ವೃತ್ತಿದಾರರ ಸಂಘದ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಜಿಎಸ್‌ಟಿ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿಎಸ್‌ಟಿ ಜಾರಿ ಬಳಿಕ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬಂದಿದೆ. ಹೆಸರು ನೋಂದಾಯಿಸದೆ ತೆರಿಗೆ ವಂಚಿಸಲು ಅಡ್ಡಹಾದಿ ಹಿಡಿಯುವ ಕಂಪನಿಗಳಿಗೆ ಕಡಿವಾಣ ಬಿದ್ದಿದೆ. ಜಿಎಸ್‌ಟಿ ಜಾರಿಗೆ ಬರುವ ಮುನ್ನ ವರ್ತಕರು ಎರಡು, ಮೂರು ರೀತಿಯ ತೆರಿಗೆಗಳನ್ನು ಕಟ್ಟಬೇಕಾಗಿತ್ತು. ಇದೀಗ ಆ ಸಮಸ್ಯೆ ಬಗೆಹರಿದಿದೆ’ ಎಂದು ಹೇಳಿದರು.

‘ತೆರಿಗೆ ಪಾವತಿ ಮಾಡುವುದರಿಂದ ದೇಶ ಅಭಿವೃದ್ಧಿಯಾಗುತ್ತದೆ. ಉದ್ಯೋಗಗಳು ಸೃಷ್ಟಿಯಾಗುತ್ತವೆ. ದೇಶ ಉನ್ನತ ಮಟ್ಟಕ್ಕೆ ಬೆಳೆಯುತ್ತದೆ ಹಾಗೂ ಭಾರತದ ಆರ್ಥಿಕತೆಯ ಹೆಚ್ಚಿಸಲು ನಮಗೆ ಜಿಎಸ್‌ಟಿ ವ್ಯವಸ್ಥೆ ಅಗತ್ಯವಾಗಿತ್ತು. ಒಂದು ದೇಶ, ಒಂದು ಮಾರುಕಟ್ಟೆ ಮತ್ತು ಒಂದೇ ತೆರಿಗೆ ಪರಿಕಲ್ಪನೆ ಅಡಿ ರೂಪುಗೊಂಡ ಜಿಎಸ್‌ಟಿ ಸ್ವಾತಂತ್ರ್ಯದ ಬಳಿಕ ದೇಶ ಕಂಡ ಮಹತ್ತರ ತೆರಿಗೆ ಸುಧಾರಣೆಯಾಗಿದೆ’ ಎಂದರು.

ರಾಜ್ಯ ಜಿಎಸ್‌ಟಿ ಸಮಿತಿ ಅಧ್ಯಕ್ಷ ಬಿ.ಟಿ.ಮನೋಹರ್ ಮಾತನಾಡಿ, ‘ಜಿಎಸ್‌ಟಿಗೆ ಹೇಗೆ ಹೆಸರು ನೋಂದಾಯಿಸಬೇಕು. ಅದಕ್ಕೆ ಯಾವೆಲ್ಲ ದಾಖಲೆಗಳು ಬೇಕು. ಹೇಗೆ ತೆರಿಗೆ ಪಾವತಿ ಮಾಡಬೇಕು ಎಂಬುದರ ಬಗ್ಗೆ ಇವತ್ತು ವರ್ತಕರಿಗೆ ಅರಿವು ಮೂಡಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಜಿಎಸ್‌ಟಿ ಕುರಿತಂತೆ ಉಚಿತ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.

ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ಮುರಳಿ ಕೃಷ್ಣ ಮಾತನಾಡಿ, ‘ಸರ್ಕಾರದ ಯಾವುದೇ ಕಾರ್ಯಕ್ರಮಕ್ಕೆ ಸರ್ಕಾರ ಮಾತ್ರ ಒತ್ತು ಕೊಟ್ಟರೆ ಸಾಲದು, ಸಾರ್ವಜನಿಕರು ಮತ್ತು ಅಧಿಕಾರಿಗಳು ಸಹ ಪ್ರಾಮಾಣಿಕವಾಗಿ ಅದರ ಅನುಷ್ಠಾನದಲ್ಲಿ ಕೈಜೋಡಿಸಬೇಕು. ಆಗ ಮಾತ್ರವೇ ಯೋಜನೆಯ ಧ್ಯೇಯೋದ್ದೇಶ ಈಡೇರಲು ಸಾಧ್ಯ’ ಎಂದರು.

‘ನಮ್ಮ ರಾಜ್ಯದಲ್ಲಿ ಜಿಎಸ್‌ಟಿ ಜಾರಿ ಬಳಿಕ ಸಾಕಷ್ಟು ಬದಲಾವಣೆಗಳು ಆಗಿವೆ. ರಾಜ್ಯ ಜಿಎಸ್‌ಟಿ ಸಂಗ್ರಹದಲ್ಲಿ ಶೇ 97 ರಷ್ಟು ಪ್ರಗತಿ ದಾಖಲಿಸುವ ಮೂಲಕ ಇಡೀ ಭಾರತದ ನಮ್ಮತ್ತ ತಿರುಗಿ ನೋಡುವಂತೆ ಮಾಡಿದೆ’ ಎಂದು ಹೇಳಿದರು.

ತೆರಿಗೆ ವೃತ್ತಿದಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಸ್‌.ಎನ್.ಪ್ರಸಾದ್, ಉಪಾಧ್ಯಕ್ಷ ವೈ.ಎನ್.ಶರ್ಮಾ, ತೆರಿಗೆ ವೃತ್ತಿದಾರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಲಕ್ಷ್ಮಿನಾರಾಯಣ, ಜಿಎಸ್‌ಟಿ ಅಧಿಕಾರಿಗಳಾದ ನಾಗರಾಜ್, ರಾಜಾರಾಮ್, ಜಿಲ್ಲಾವುಲ್ಲಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT