ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ್ ರಾವ್ ಆರೋಪಗಳಲ್ಲಿ ಹುರುಳಿಲ್ಲ

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ರಕ್ತನಿಧಿ ಆಡಳಿತ ಮಂಡಳಿ ಪದಾಧಿಕಾರಿಗಳಿಂದ ಪ್ರತ್ಯಾರೋಪ
Last Updated 25 ಜುಲೈ 2020, 13:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ರಕ್ತನಿಧಿ ಮಾಜಿ ಕಾರ್ಯದರ್ಶಿ ಗುರುರಾಜ್ ರಾವ್ ಅವರು ತಮ್ಮ ತಪ್ಪುಗಳನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ಹತಾಶೆಯಿಂದ ಸಂಸ್ಥೆಯ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ರಕ್ತನಿಧಿ ಖಜಾಂಚಿ ಎಂ.ಜಯರಾಮ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗುರುರಾಜ್ ರಾವ್‌ ಅವರ ಕಾರ್ಯದರ್ಶಿಯಾಗಿದ್ದ 21 ತಿಂಗಳ ಅವಧಿಯಲ್ಲಿ ಸಾಕಷ್ಟು ಅಕ್ರಮಗಳನ್ನು ಮಾಡಿದ್ದಾರೆ. ಅವುಗಳಿಗೆ ಆಡಳಿತ ಮಂಡಳಿ ಕಡಿವಾಣ ಹಾಕಲು ಮುಂದಾದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಂಸ್ಥೆಯಿಂದ ಹೊರ ನಡೆದಿದ್ದಾರೆ’ ಎಂದು ತಿಳಿಸಿದರು.

‘ಇತ್ತೀಚೆಗೆ ಗುರುರಾಜ್ ರಾವ್‌ ಅವರು ಮಾಡುತ್ತಿದ್ದಾರೆ ಎನ್ನಲಾದ ಆರೋಪಗಳೆಲ್ಲವೂ ಅವರ ಅವಧಿಯಲ್ಲೇ ನಡೆದಿವೆ. ಕಾರ್ಯದರ್ಶಿಯಾಗಿದ್ದಷ್ಟು ದಿನ ಒಂದೇ ಒಂದು ವಿಚಾರವಾಗಿ ಚಕಾರ ಎತ್ತದವರು ಈಗ ಹತಾಶೆಯಿಂದ ಸುಳ್ಳು ಆರೋಪ ಮಾಡುತ್ತ ಸಂಸ್ಥೆ ಹೆಸರಿಗೆ ಮಸಿ ಬಳಿಯಲು ಮುಂದಾಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದಾನಿಗಳು ನೀಡುವ ಪ್ರತಿ ಯೂನಿಟ್ ರಕ್ತದಿಂದ ಸಂಸ್ಥೆಗೆ ₹2,000 ಆದಾಯ ಬರುತ್ತದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಸಂಸ್ಥೆಗೆ ‌ಪ್ರತಿ ಯೂನಿಟ್‌ ರಕ್ತದಿಂದ ₹1,150 ಆದಾಯ ಬರುತ್ತದೆ. ₹2,000 ಆದಾಯವನ್ನು ಗುರುರಾಜ್ ಅವರು ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದರು.

‘ನಾನು ಸಂಸ್ಥೆಯಲ್ಲಿ ಸದಸ್ಯತ್ವ ಪಡೆದಿಲ್ಲ ಎಂದು ಆರೋಪಿಸಿದ್ಧಾರೆ. ನಾನು 2012ರಲ್ಲಿಯೇ ಸದಸ್ಯತ್ವ ಪಡೆದು, 2013ರಲ್ಲಿಯೇ ತಾಲ್ಲೂಕು ಕಾರ್ಯದರ್ಶಿಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಉತ್ತಮ ಸೇವಾ ಪತ್ರ ಪಡೆದಿದ್ದೆನೆ’ ಎಂದರು.

‘ದಾನಿಗಳಿಗೆ ಬಳಕೆಯಾಗಬೇಕಾದ ರಿಫ್ರೆಸ್‌ಮೆಂಟ್ ಹಣ ಸರಿಯಾಗಿ ಬಳಸುತ್ತಿಲ್ಲ ಎಂಬ ಆರೋಪದಲ್ಲೂ ಹುರುಳಿಲ್ಲ. ಎಂಟು ವರ್ಷಗಳಲ್ಲಿ ಕೆಎಸ್‌ಎಪಿಎಸ್‌ನಿಂದ ಕೇವಲ ಮೂರು ಬಾರಿ ಸೇರಿ ₹5.76 ಲಕ್ಷ ರಿಫ್ರೆಷ್‌ಮೆಂಟ್ ಹಣ ಬಂದಿದೆ. ಈವರೆಗೆ ರಕ್ತನಿಧಿ 70 ಸಾವಿರ ಯೂನಿಟ್ ರಕ್ತ ಸಂಗ್ರಹಿಸಿದೆ. ಅದರಂತೆ ಲೆಕ್ಕ ಹಾಕಿದರೆ ಪ್ರತಿ ವ್ಯಕ್ತಿಗೆ ₹6 ರಿಫ್ರೆಷ್‌ಮೆಂಟ್ ಹಣ ಬಂದಿದೆ’ ಎಂದು ಹೇಳಿದರು.

‘ಜಿಲ್ಲಾ ರಕ್ತನಿಧಿ ಕಳೆದ ವರ್ಷ ಆಯೋಜಿಸಿದ್ದ ನಾಲ್ಕು ಬೃಹತ್ ರಕ್ತದಾನ ಶಿಬಿರಗಳಿಗೆ ಕೆಎಸ್‌ಎಪಿಎಸ್‌ ಒಂದು ಯೂನಿಟ್‌ ರಕ್ತಕ್ಕೆ ತಲಾ ₹50 ರಂತೆ ರಿಫ್ರೆಷ್‌ಮೆಂಟ್ ಹಣ ನೀಡಿದೆ. ಅದರಲ್ಲಿ ಗುರುರಾಜ್ ರಾವ್ ಅವರು ಬೇಲಿಯೇ ಎದ್ದು ಹೊಲ ಮೇಯ್ದದಂತೆ ₹53 ಸಾವಿರ ಮೊತ್ತವನ್ನು ತಮ್ಮ ಮಗನ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಸಂಸ್ಥೆಯ ವಾಹನವನ್ನು ದುರುಪಯೋಗಪಡಿಸಿಕೊಂಡಿದ್ಧಾರೆ. ಡೀಸೆಲ್ ಖರೀದಿ ವಿಚಾರದಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದ್ಧಾರೆ. ಜನರೇಟರ್‌ಗೆ ಹಾಕುವ ಡೀಸೆಲ್ ಸ್ವಂತ ವಾಹನಕ್ಕೆ ಹಾಕಿಕೊಂಡು ಅಕ್ರಮ ಎಸಗಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಮಾಸ್ಕ್, ಸೋಪು ಹಂಚಿಕೆ ವಿಚಾರದಲ್ಲಿ ಸಾಕಷ್ಟು ಲೋಪ ಮಾಡಿರುವ ಬಗ್ಗೆ ಲಿಖಿತ ದೂರು ಕೂಡ ಸಲ್ಲಿಕೆಯಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರೊ.ಕೋಡಿರಂಗಪ್ಪ ಮಾತನಾಡಿ, ‘ಪದಾಧಿಕಾರಿಗಳ ಹುದ್ದೆಗೆ ಚುನಾವಣೆ ನಡೆಸಲು ನಮಗೆ ಯಾವುದೇ ಅಭ್ಯಂತರವಿಲ್ಲ. ಈಗಿರುವ ಎಲ್ಲಾ ಪದಾಧಿಕಾರಿಗಳು ಆಡಳಿತ ಮಂಡಳಿಯ ಸಭೆಯಲ್ಲಿಯೇ ಆಯ್ಕೆಯಾಗಿದ್ದಾರೆ. ಚುನಾವಣೆ ಕುರಿತಂತೆ ಪತ್ರ ವ್ಯವಹಾರ ನಡೆಸುವುದು ಕಾರ್ಯದರ್ಶಿ ಜವಾಬ್ದಾರಿ ತಾವು ಕಾರ್ಯದರ್ಶಿಯಾಗಿದ್ದ ವೇಳೆ ಗುರುರಾಜ್ ರಾವ್ ಅವರು ಆ ಕೆಲಸ ಮಾಡದೆ ಈಗ ವೃಥಾ ಆರೋಪ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಜಿಲ್ಲಾ ರಕ್ತನಿಧಿ ಆರಂಭದಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಬಂದಿದೆ. ಮೂರು ಬಾರಿ ರಾಜ್ಯ ಶಾಖೆಯಿಂದ ಪ್ರಥಮ ಪ್ರಶಸ್ತಿ ಪಡೆದಿದೆ. ಆದರೆ, ಗುರುರಾಜ್ ಅವರ ಅವಧಿಯಲ್ಲಿ ರಕ್ತನಿಧಿಗೆ ಯಾವುದೇ ಪ್ರಶಸ್ತಿ ಬಂದಿಲ್ಲ’ ಎಂದರು.

ರೆಡ್‌ಕ್ರಾಸ್‌ ಸಂಸ್ಥೆ ರಾಜ್ಯ ಸಮಿತಿ ಸದಸ್ಯ ಡಾ.ಕೆ.ಪಿ.ಶ್ರೀನಿವಾಸ್‌ ಮೂರ್ತಿ, ಜಿಲ್ಲಾ ರಕ್ತನಿಧಿ ಸಭಾಪತಿ ಡಾ.ಕೆ.ಬಾಬುರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT