ಶನಿವಾರ, ಮೇ 28, 2022
30 °C

ಬಿಡಿಸಲಾರದ ಹೋರಾಟದ ನಂಟು

ಡಿ.ಜಿ. ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ವಿದ್ಯಾರ್ಥಿ ಯುವಜನ ಕೂಲಿ ಕಾರ್ಮಿಕರ ಪರ ಗಟ್ಟಿಯಾದ ಧ್ವನಿಯಾಗಿದ್ದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರ ಹೋರಾಟದ ಬದುಕಿಗೂ ಶಿಡ್ಲಘಟ್ಟದ ನೆಲಕ್ಕೂ ಬಿಡಿಸಲಾರದ ನಂಟು.

ಶಿಡ್ಲಘಟ್ಟ ತಾಲೂಕಿನ ಇ.ತಿಮ್ಮಸಂದ್ರ ಗ್ರಾಮ ಪಂಚಾಯಿತಿಯ ಗಾಂಡ್ಲಚಿಂತೆಯಲ್ಲಿ 1970ರ ದಶಕದಲ್ಲಿ ಎದ್ದ ಉಳುವವನೆ ಭೂಮಿಯ ಒಡೆಯನಾಗಬೇಕೆಂಬ ಕೂಗು ರಾಜ್ಯದ ಉದ್ದಗಲಕ್ಕೂ ವ್ಯಾಪಿಸಿ ಕೊನೆಗೂ ಶರಣಾದ ಆಗಿನ ಸರ್ಕಾರ ಸಾಗುವಳಿ ಭೂಮಿಯನ್ನು ಮಂಜೂರು ಮಾಡುವ ಕಾಯ್ದೆಯನ್ನು ಜಾರಿ ಮಾಡುವಂತಾಯಿತು.

ರಾಜ್ಯದ ಉದ್ದಗಲಕ್ಕೂ ಹೋರಾಟದ ಕಿಚ್ಚನ್ನು ಹಚ್ಚಿದ ಗಾಂಡ್ಲಚಿಂತೆಯಲ್ಲಿ ಆರಂಭವಾದ ಐತಿಹಾಸಿಕ ಹೋರಾಟದಲ್ಲಿ ರೈತ ನಾಯಕರು, ಕೂಲಿ ಕಾರ್ಮಿಕ, ವಿದ್ಯಾರ್ಥಿ ಯುವಜನ, ಸಿಪಿಎಂನ ಬಹುತೇಕ ಘಟಕಗಳ ಮುಂಚೂಣಿ ನಾಯಕರು ಭಾಗವಹಿಸಿದ್ದರು.

ಜಿ.ವಿ.ಶ್ರೀರಾಮರೆಡ್ಡಿ ಅವರು ವಿದ್ಯಾರ್ಥಿ ಘಟಕವನ್ನು ಪ್ರತಿನಿಧಿಸಿದ್ದರು. ಆಗ ಅವರು ಇನ್ನೂ ವಿದ್ಯಾರ್ಥಿಯಾಗಿದ್ದು ಎಡಪಂಥೀಯ ಸಿದ್ಧಾಂತಗಳಿಗೆ ಮಾರುಹೋಗಿದ್ದು ವಿದ್ಯಾರ್ಥಿ ನಾಯಕರಾಗಿ ಎಡಪಂಥೀಯ ಹೋರಾಟಗಳಲ್ಲಿ ಅದಾಗಲೆ ಗುರುತಿಸಿಕೊಂಡಿದ್ದರು.

ಗಾಂಡ್ಲಚಿಂತೆಯಲ್ಲಿ ತಿಂಗಳಾನುಗಟ್ಟಲೆ ನಡೆದ ಹೋರಾಟದಲ್ಲಿ ಆಗಿನ ಸಿಪಿಐಎಂನ ಪಾಲಿಟ್ ಬ್ಯೂರೋದ ಮುಂಚೂಣಿ ನಾಯಕರಾಗಿದ್ದ ಆಂಧ್ರದ ಬಸವ ಪುನ್ನಯ್ಯ, ಇಎಂಎಸ್ ನಂಬೂದರಿಪಾಡ್, ಇ.ಕೆ.ನಾಯರ್, ಬಿ.ಟಿ.ರಣದಿವೆ, ಗೋಪಾಲಗೌಡ (ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ)ರಂತ ಘಟಾನುಘಟಿ ಹೋರಾಟಗಾರರು ಭಾಗವಹಿಸಿದ್ದರು ಎಂದು ಆಗಿನ ಹೋರಾಟದಲ್ಲಿ ಭಾಗವಹಿಸಿದ್ದ ಎಸ್.ರಹಮತ್ತುಲ್ಲಾ ನೆನೆಸಿಕೊಳ್ಳುತ್ತಾರೆ.

ಇವರೊಂದಿಗೆ ಜಿ.ವಿ.ಶ್ರೀರಾಮರೆಡ್ಡಿಯಲ್ಲದೆ ಸ್ಥಳೀಯವಾಗಿ ಮಾಜಿ ಶಾಸಕರಾಗಿದ್ದ ಮಳ್ಳೂರು ಜಿ.ಪಾಪಣ್ಣ, ಕುಂದಲಗುರ್ಕಿ ವೆಂಕಟೇಶಪ್ಪ, ಶಿಡ್ಲಘಟ್ಟದ ದೊರೆಸ್ವಾಮಿ, ಮಣಿ, ಗೌಸ್‌ಸಾಬ್, ಸುಭಾನ್, ಎಸ್.ರಹಮತ್ತುಲ್ಲಾ, ಚಿಕ್ಕಬಳ್ಳಾಪುರದ ಲಕ್ಷ್ಮಯ್ಯ ಇನ್ನಿತರೆ ನಾಯಕರು ಕೆಂಪು ಧ್ವಜ ಹಿಡಿದು ಹೋರಾಟಕ್ಕೆ ಇಳಿದಿದ್ದರು.

ಉಳುವವನೆ ಭೂಮಿಯ ಒಡೆಯನಾಗಬೇಕೆಂಬ ಕೂಗನ್ನು, ಹೋರಾಟವನ್ನು ಹತ್ತಿಕ್ಕಲು ಪೊಲೀಸರು ಲಾಠಿ ಹಾಗೂ ಬಂದೂಕಿನ ಶಕ್ತಿಯನ್ನು ಬಳಸಲು ಮುಂದಾದಾಗ ಅನೇಕರು ಭೂಗತರಾಗಿದ್ದುಕೊಂಡೆ ಹೋರಾಟದ ರೂಪುರೇಷೆಗಳನ್ನು ರೂಪಿಸಿ ರಾಜ್ಯದ ಉದ್ದಗಲಕ್ಕೂ ಹೋರಾಟವನ್ನು ಹಬ್ಬಿಸಿದರು.

ರಾಜ್ಯದಲ್ಲಿ ಆಂದೋಲನ ಸ್ವರೂಪ ಪಡೆದ ಗಾಂಡ್ಲಚಿಂತೆಯಲ್ಲಿ ಆರಂಭವಾದ ಉಳುವವನೆ ಭೂಮಿಯ ಒಡೆಯನಾಗಬೇಕೆಂದು ಹೋರಾಟದ ಫಲವಾಗಿ ಕೊನೆಗೂ ಆಗಿನ ಮುಖ್ಯಮಂತ್ರಿ ದೇವರಾಜ್ ಅರಸು ಅವರು ಉಳುವವನೆ ಭೂಮಿಯ ಒಡೆಯ ಎಂಬುದಾಗಿ ಆದೇಶವನ್ನು ಮಾಡಬೇಕಾಯಿತು ಎಂದು ಹೋರಾಟದ ಮಹತ್ವವನ್ನು ಹಾಗೂ ಅದರ ಫಲವನ್ನು ಸ್ಮರಿಸುತ್ತಾರೆ ಅನೇಕ ಹಿರಿಯ ಹೋರಾಟಗಾರರು.

ಗಾಂಡ್ಲಚಿಂತೆಯಲ್ಲಿನ ಹೋರಾಟದ ನಂತರ ಶಿಡ್ಲಘಟ್ಟದಲ್ಲಿ ನಡೆದ ಪ್ರಮುಖ ರೈತಪರ, ಕೂಲಿ ಕಾರ್ಮಿಕ, ವಿದ್ಯಾರ್ಥಿ ಯುವಜನರ, ನೌಕರರು, ನೀರಾವರಿ ಹೋರಾಟಗಳೆಲ್ಲದರಲ್ಲೂ ಜಿ.ವಿ.ಶ್ರೀರಾಮರೆಡ್ಡಿ ಅವರ ಛಾಯೆ ಇತ್ತು.

1990-2000 ದಶಕದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿಯನ್ನು ಹೋರಾಟದ ಕೆಂಪು ನೆಲೆಯನ್ನಾಗಿಸಿಕೊಂಡ ಎಡಪಂಥೀಯ ಹೋರಾಟಗಾರರು ಯಶಸ್ಸನ್ನು ಕಂಡರೂ, ವೈಫಲ್ಯಗಳನ್ನೂ ಕಾಣುವಂತಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು