ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ದಾಳಿ : ಜಿ.ವಿ.ಶ್ರೀರಾಮರೆಡ್ಡಿ ಆರೋಪ

370ನೇ ವಿಧಿ ರದ್ಧತಿ ಕುರಿತ ವಿಚಾರ ಸಂಕಿರಣ
Last Updated 13 ಆಗಸ್ಟ್ 2019, 12:21 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸುವ ಮೂಲಕ ಕೇಂದ್ರ ಸರ್ಕಾರ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ದಾಳಿ ಮಾಡಿದೆ’ ಎಂದು ಸಿಪಿಎಂ ಮುಖಂಡ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಖಿಲ ಭಾರತ ವಕೀಲರ ಸಂಘದ ರಾಜ್ಯ ಸಮಿತಿಯ ವತಿಯಿಂದ ಆಯೋಜಿಸಿದ್ದ 370ನೇ ವಿಧಿ ರದ್ಧತಿ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಕಾಶ್ಮೀರವನ್ನು ವಿಭಜನೆಗೊಳಿಸುವುದು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿದ್ದ ಪ್ರಮುಖ ಅಂಶ. ಅದರಂತೆ ಈಗ ಕಾಶ್ಮೀರವನ್ನು ಮುಸ್ಲಿಂ ರಾಜ್ಯವಾಗಿ, ಜಮ್ಮುವನ್ನು ಹಿಂದೂ ರಾಜ್ಯವಾಗಿ ಹಾಗೂ ಲಡಾಕ್ ಅನ್ನು ಬೌದ್ಧ ಧರ್ಮದ ರಾಜ್ಯವಾಗಿ ವಿಗಂಡಿಸುವ ಪಿತೂರಿ ಕೇಂದ್ರ ಸರ್ಕಾರ ಮಾಡಿದೆ. ಇದರಿಂದ ಕಾಶ್ಮೀರಿಗರ ಧಾರ್ಮಿಕತೆ, ಸಂಸ್ಕೃತಿ, ಭಾಷೆ ಹಾಗೂ ಅಸ್ಮಿತೆ ಜತೆಗೆ ಆ ರಾಜ್ಯದ ಆರ್ಥಿಕತೆಗೂ ಧಕ್ಕೆ ಉಂಟಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ವಿಶೇಷ ಸ್ಥಾನಮಾನ ರದ್ದು ಕ್ರಮ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ನಿಲುವುಗಳಿಗೆ ವಿರುದ್ಧವಾದ ಕ್ರಮ. ಇದರ ಹಿಂದೆ ಅಂಬಾನಿ, ಅದಾನಿಯಂತಹ ಉದ್ಯಮಿಗಳ ಕೈವಾಡವಿದೆ. ಜಮ್ಮು ಕಾಶ್ಮೀರದ ಫಲವತ್ತಾದ ಭೂಮಿಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟ ಮಾಡಿ ರೀಯಲ್ ಎಸ್ಟೇಟ್‌ ಉದ್ಯಮಕ್ಕೆ ಕುಮ್ಮಕ್ಕು ಕೊಡಲು ಈ ಕೆಲಸ ಮಾಡಲಾಗಿದೆ’ ಎಂದು ಆರೋಪ ಮಾಡಿದರು.

‘370ನೇ ವಿಧಿ ರದ್ದುಗೊಳಿಸುವುದರಿಂದ ಜಮ್ಮು ಕಾಶ್ಮೀರದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ. ವಿಶೇಷವಾಗಿ ಭಯೋತ್ಪಾದನಾ ಚಟುವಟಿಕೆಗಳು ಇನ್ನುಷ್ಟು ಹೆಚ್ಚಾಗುವ ಆತಂಕವಿದೆ. ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ಕೇಂದ್ರ ಸರ್ಕಾರ ರಾಜ್ಯಗಳ ವಿಭಜನೆಯನ್ನು ಧರ್ಮ ಆಧಾರದಲ್ಲಿ ಮಾಡಿರುವುದು ಆತಂಕಕಾರಿ ವಿಚಾರ’ ಎಂದರು.

ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಶಂಕರಪ್ಪ, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ರಾಮಚಂದ್ರ ರೆಡ್ಡಿ, ಉಪಾಧ್ಯಕ್ಷ ಎನ್.ರಾಘುರಾಮ್, ರಾಜ್ಯ ವಕೀಲರ ಪರಿಷತ್ತಿನ ಉಪಾಧ್ಯಕ್ಷ ಕೋಟೇಶ್ವರರಾವ್, ವಕೀಲರಾದ ಪಾಪಿರೆಡ್ಡಿ, ಶಿವಾರೆಡ್ಡಿ, ಹರೀಂದ್ರ, ರಮೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT