ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿವಿಎಸ್‌ ಹೋರಾಟ ಸ್ಫೂರ್ತಿ

ಯಾವುದೇ ಪಕ್ಷದ ಜತೆ ಹೊಂದಾಣಿಕೆ ಇಲ್ಲ: ಪ್ರಜಾ ಸಂಘರ್ಷ ಸಮಿತಿ ಸ್ಪಷ್ಟನೆ
Last Updated 22 ಏಪ್ರಿಲ್ 2022, 3:19 IST
ಅಕ್ಷರ ಗಾತ್ರ

ಬಾಗೇಪಲ್ಲಿ: ‘ಕ್ಷೇತ್ರದಲ್ಲಿ ಆರು ದಶಕಗಳ ಕಾಲ ಜನಪರ ಹೋರಾಟಗಳನ್ನು ಮಾಡಿದ ಹಿರಿಮೆ ಜಿ.ವಿ. ಶ್ರೀರಾಮರೆಡ್ಡಿ ಅವರಿಗೆ ಸಲ್ಲುತ್ತದೆ. ಅವರ ನಿಧನದ ಬಳಿಕವೂ ಕಮ್ಯುನಿಷ್ಟ್ ಸೇರಿದಂತೆ ಇತರೆ ರಾಜಕೀಯ ಪಕ್ಷಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ’ ಎಂದು ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಹ ಸಂಚಾಲಕ ಚನ್ನರಾಯಪ್ಪ ಸ್ಪಷ್ಟಪಡಿಸಿದರು.

ಪಟ್ಟಣದಲ್ಲಿ ಪ್ರಜಾ ಸಂಘರ್ಷ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಜನಪರ ಹೋರಾಟಗಾರ ಜಿ.ವಿ. ಶ್ರೀರಾಮರೆಡ್ಡಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಶ್ರೀರಾಮರೆಡ್ಡಿ ಜನರಿಗಾಗಿ ಕಟ್ಟಿದ ಪ್ರಜಾ ಸಂಘರ್ಷ ಸಮಿತಿ ನೇತೃತ್ವದಲ್ಲಿ ಜನಪರ ಹೋರಾಟ ರೂಪಿಸಲಾಗುವುದು. ಕಾರ್ಯಕರ್ತರು ಸಂಘಟಿತರಾಗಬೇಕು. ಅವರು ವಿದ್ಯಾರ್ಥಿ ಚಳವಳಿಯ ಹುಟ್ಟು ಹೋರಾಟಗಾರರು. ಅವರ ಛಲ, ಸಿದ್ಧಾಂತ, ತತ್ವಗಳು ಯುವಜನರಿಗೆ ಸ್ಫೂರ್ತಿಯಾಗಿವೆ ಎಂದರು.

ಕ್ಷೇತ್ರದಲ್ಲಿನ ರೈತರ, ಶೋಷಿತರ, ಕೃಷಿ ಕೂಲಿ ಕಾರ್ಮಿಕರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆದ ಸಂಧರ್ಭದಲ್ಲಿ ಜಿವಿಎಸ್ ಹೋರಾಟ ಮಾಡಿದ್ದಾರೆ. ಊರೂರು ಸುತ್ತಿ ಕಮ್ಯುನಿಸ್ಟ್ ಪಕ್ಷ ಸಂಘಟಿಸಿದ್ದಾರೆ. ಅಲ್ಲಿಂದ ಹೊರಬಂದ ಮೇಲೆ ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಜನಪರ ಸಂಘಟನೆಯನ್ನು ಹುಟ್ಟುಹಾಕಿ ಹೋರಾಟ ಮಾಡಿದ್ದಾರೆ. ಅವರ ಹೋರಾಟ, ಆಸೆ, ಆಶಯಗಳನ್ನು ಮುಂದುವರಿಸಲು ಕಾರ್ಯಕರ್ತರು, ಅಭಿಮಾನಿಗಳು ಮುಂದಾಗಬೇಕು ಎಂದು ಹೇಳಿದರು.

ಇತ್ತೀಚಿನ ಕೆಲವು ರಾಜಕೀಯ ಬೆಳವಣಿಗೆಗಳು ಅವರಿಗೆ ನೋವು ತರಿಸಿದವು. ಅವರು ನಿಧನರಾದ ಮೂರೇ ದಿನಕ್ಕೆ ಕೆಲವು ನಾಯಕರು ನಮ್ಮ ಮನೆ ಬಾಗಿಲಿಗೆ ಬಂದು ರಾಜಕೀಯ ಮಾಡಲು ಹೊರಟಿದ್ದಾರೆ. ನಮ್ಮನ್ನು ಬಳಕೆ ಮಾಡಿಕೊಂಡು ಅವರು ನಾಯಕರಾಗಿ ಹೊರಹೊಮ್ಮಲು ನಿರ್ಧರಿಸಿದ್ದಾರೆ. ಜಿವಿಎಸ್ ಬಿಜೆಪಿ ವಿರುದ್ಧ ಹೋರಾಟ ಮಾಡಿದರು. ಆ ಪಕ್ಷದ ಜೊತೆ ಎಂದಿಗೂ ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ವಕೀಲ ನಾರಾಯಣರೆಡ್ಡಿ ಮಾತನಾಡಿ, ರಾಜ್ಯದ ಎಲ್ಲಾ ಮೂಲೆಗಳಲ್ಲಿ ಜನಪರ ಹೋರಾಟ ಮಾಡಿದ್ದಾರೆ. ರಾಜ್ಯದ ನಾಯಕರಾಗಿ ಅಸಂಘಟಿತ, ಕೃಷಿ ಕೂಲಿ ಕಾರ್ಮಿಕರ, ಶೋಷಿತರ ಪರ ಹಾಗೂ ಆಳುವ ಸರ್ಕಾರಗಳ ಜನವಿರೋಧಿ ಕಾಯ್ದೆಗಳ ವಿರುದ್ಧದ ಹೋರಾಟಗಳಲ್ಲಿ ಮುಂಚೂಣಿ ನಾಯಕರಾಗಿದ್ದರು ಎಂದು ಹೇಳಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೋಪಾಲಕೃಷ್ಣ, ಸಮಿತಿಯ ಮುಖಂಡರಾದ ಗೌರಿಬಿದನೂರಿನ ರಾಜು, ಜಿ.ಎಂ. ರಾಮಕೃಷ್ಣಪ್ಪ, ಎಚ್.ಎನ್. ಚಂದ್ರಶೇಖರರೆಡ್ಡಿ, ಆರ್. ಚಂದ್ರಶೇಖರರೆಡ್ಡಿ, ಜುಬೇರ್ ಅಹಮದ್, ಎಲ್. ವೆಂಕಟೇಶ್, ಸಿ.ಕೆ. ನರಸಿಂಹಪ್ಪ, ರಾಮಾಂಜಿನಪ್ಪ, ಭಾಷಾ ಸಾಬ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT