ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟಿಗೆಯಾಗಿದೆ 'ವೈಚಾರಿಕ ಸಂತ' ಎಚ್.ನರಸಿಂಹಯ್ಯ ಮನೆ!

ಇಂದು ಶಿಕ್ಷಣ ತಜ್ಞ ಡಾ.ಎಚ್‌.ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವ ದಿನ, ಬಿದ್ಧು ಹೋಗುವ ಸ್ಥಿತಿಯಲ್ಲಿ ಶ್ರೇಷ್ಠ ಶಿಕ್ಷಣ ತಜ್ಞನ ಸೂರು
Last Updated 6 ಜೂನ್ 2020, 3:06 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಗೆ ಕೀರ್ತಿ ಕಳಶಪ್ರಾಯವಾಗಿರುವ ನಾಡು ಕಂಡ ಶ್ರೇಷ್ಠ ಶಿಕ್ಷಣ ತಜ್ಞ, ವಿಚಾರವಾದಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಅಪ್ಪಟ ಗಾಂಧಿವಾದಿ ಡಾ.ಎಚ್.ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವದ ಈ ಹೊತ್ತಿನಲ್ಲಿ ಅವರ ಹುಟ್ಟೂರಿನ ಮನೆ ದನದ ಕೊಟ್ಟಿಗೆಗಿಂತಲೂ ಕಡೆಯಾದ ಸ್ಥಿತಿಯಲ್ಲಿರುವುದು ಎಚ್‌.ಎನ್ ಅವರ ಅಪಾರ ಅನುಯಾಯಿಗಳಲ್ಲಿ, ಚಿಂತಕರಲ್ಲಿ ಬೇಸರ ಮೂಡಿಸಿದೆ.

ಅವಿಭಜಿತ ಕೋಲಾರ ಜಿಲ್ಲೆಯ (ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆ) ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ 1920 ಜೂನ್ 6 ರಂದು ಬಡ ಕುಟುಂಬದಲ್ಲಿ ಹುಟ್ಟಿದ ನರಸಿಂಹಯ್ಯನವರು ಬದುಕಿದ್ದರೆ ಶನಿವಾರ (ಜೂನ್ 6) ನೂರು ವರ್ಷಗಳನ್ನು ಪೂರೈಸಿ, ಜನ್ಮ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದರು.

ತಮ್ಮ ಸರಳ ಬದುಕು, ಉದಾತ್ತ ಮತ್ತು ಪ್ರಖರ ವೈಜ್ಞಾನಿಕ ಚಿಂತನಾ ಮನೋಭಾವದಿಂದಲೇ ಜನಮಾನಸದಲ್ಲಿ ಮಹಾನ್ ಚೇತನದ ಸ್ಥಾನ ಪಡೆದಿರುವ ಎಚ್‌.ಎನ್. ಅವರನ್ನು ಮನೆಯನ್ನು ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ನಿರ್ಲಕ್ಷಿಸಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಎಡೆ ಮಾಡಿದೆ.

ಹೊಸೂರಿನ ಹಿಂದುಳಿದ ವರ್ಗದ ಹನುಮಂತಪ್ಪ–ವೆಂಕಟಮ್ಮ ದಂಪತಿಯ ಪುತ್ರರಾದ ನರಸಿಂಹಯ್ಯನವರು ಬಡತನದ ಕೆಂಡ ತುಳಿದವರು. ‘ಹೋರಾಟದ ಹಾದಿ’ಯಲ್ಲಿ ಸತ್ಯನಿಷ್ಠುರವಾದ ವೈಚಾರಿಕ ಬದ್ಧತೆಯ ಬದುಕಿನ ಮೂಲಕವೇ ಶಿಕ್ಷಣ ಕ್ಷೇತ್ರದಲ್ಲಿ ಮೇರು ಪರ್ವತವಾದ ವ್ಯಕ್ತಿತ್ವ.

ವಿದೇಶದಲ್ಲಿ ಉನ್ನತ ವ್ಯಾಸಂಗ, ಉನ್ನತ ಹುದ್ದೆಗಳು, ಅಗಣಿತ ಗೌರವಗಳು ಅರಸಿ ಬಂದರೂ ಬದುಕಿನುದ್ಧಕ್ಕೂ ಯಾವತ್ತೂ ಆಡಂಭರ ತೋರದೆ, ಗಾಂಧಿ ಮಾರ್ಗದ ಸರಳ ಬದುಕು ಮೈಗೂಡಿಸಿಕೊಂಡು ಇಡೀ ಜೀವನ ಶಿಕ್ಷಣಕ್ಕೆ ಮೀಸಲಿಟ್ಟು, ಸಂತನ ತೆರದಿ ಬದುಕಿದ ಎಚ್‌.ಎನ್‌ ಅವರ ಬದುಕೇ ಯುವಪಿಳಿಗೆಗೆ ಒಂದು ಆದರ್ಶದ ದೊಂದಿ.

ವಿದ್ಯಾರ್ಥಿ ದೆಸೆಯಲ್ಲಿ ವಿವಿಧ ಉಚಿತ ವಿದ್ಯಾರ್ಥಿನಿಲಯಗಳಲ್ಲಿದ್ದ ನರಸಿಂಹಯ್ಯ ಅವರು ಅಧ್ಯಾಪಕರಾದ ಮೇಲೂ 1946 ರಿಂದ ಕೊನೆಯುಸಿರೆಳೆಯುವವರೆಗೂ (2005ರ ಜನವರಿ 31) ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ ನಿಲಯದ ಪುಟ್ಟ ಕೊಣೆಯಲ್ಲಿಯೇ ಬದುಕಿದ್ದು ಆದರ್ಶದ ಅತ್ಯುನ್ನತ ಮಾದರಿಯಾಗಿದೆ.

ನಾಸ್ತಿಕರಾಗಿದ್ದ ನರಸಿಂಹಯ್ಯನವರು ವಿಜ್ಞಾನ ಮತ್ತು ವೈಜ್ಞಾನಿಕ ವಿಧಾನದಲ್ಲಿ ದೃಢವಾದ ನಂಬಿಕೆ ಹೊಂದಿದ್ದರು. ಶೂನ್ಯದಿಂದ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ. ಜನರ ಅಜ್ಞಾನವನ್ನು ಬಂಡವಾಳವನ್ನಾಗಿಸಿಕೊಂಡು ಶೋಷಣೆ ಮಾಡುವ ಮೌಢ್ಯದ ವಿರುದ್ಧ ಸತತ ಹೋರಾಡುತ್ತ, ಪಟ್ಟಭದ್ರ ಹಿತಾಸಕ್ತಿಗಳಿಂದ ಮುಗ್ಧ ಜನರನ್ನು ರಕ್ಷಿಸಬೇಕು ಎಂದು ಪ್ರತಿಪಾದಿಸಿದವರು.

ಕುಗ್ರಾಮದ ಬಡ ಪೋಷಕರ ದಟ್ಟ ದಾರಿದ್ರ್ಯದ ನಡುವೆಯೂ ತಮ್ಮ ಪ್ರತಿಭೆಯಿಂದಲೇ ದೈತ್ಯ ಪ್ರತಿಭಾ ಸಂಪನ್ನರಾಗಿ ಬೆಳೆದ ನರಸಿಂಹಯ್ಯ ಅವರು, ತಮ್ಮ 85 ವರ್ಷಗಳ ಬದುಕಿನಲ್ಲಿ 62 ವರ್ಷಗಳ ಕಾಲ ವಿದ್ಯಾರ್ಥಿನಿಲಯಗಳಲ್ಲೇ ಜೀವನ ಸವೆಸಿದರು.

ಅವಿವಾಹಿತರಾಗಿದ್ದ ಎಚ್‌.ಎನ್ ಅಖಂಡ ಬ್ರಹ್ಮಚರ್ಯದ ಬದುಕಿನಲ್ಲಿ ಸಮಾಜದಿಂದ ಪಡೆದ ಎಲ್ಲವನ್ನೂ ಸಮಾಜಕ್ಕೆ ಮರಳಿಸಿ ನಿರ್ಗಮಿಸಿದ ನಿಸ್ಪೃಹರು. ಅವರ ಹುಟ್ಟೂರಿನಲ್ಲಿ ಪುಟ್ಟದೊಂದು ಮನೆಯನ್ನು ಹೊರತುಪಡಿಸಿದರೆ ಅವರ ಕುಟುಂಬಕ್ಕೆ ಒಂದಿಂಚೂ ಭೂಮಿ ಸಹ ಇಲ್ಲ.

ನರಸಿಂಹಯ್ಯ ಅವರಿಗೆ ಒಬ್ಬ ಸಹೋದರಿ ಇದ್ದರು. ಅವರು ಸಹ ಬಹು ಕಾಲದ ಹಿಂದೆಯೇ ತೀರಿ ಹೋಗಿದ್ದಾರೆ. ಹೀಗಾಗಿ, ವಾರಸುದಾರರಿಲ್ಲದ ಅವರ ಮನೆ ಶಿಥಿಲಾವಸ್ಥೆಯಿಂದ ಕುಸಿದು ಬೀಳುವ ಹಂತ ತಲುಪಿದರೂ ಅತ್ತ ತಿರುಗಿ ನೋಡದ ಜಿಲ್ಲಾಡಳಿತ, ಜನಪ್ರತಿನಿಧಿಗಳ ಜಾಣ ಕುರುಡುತನ ಪ್ರಜ್ಞಾವಂತರ ಬೇಸರ ಹುಟ್ಟಿಸಿದೆ.

ಈ ಕುರಿತು ಗೌರಿಬಿದನೂರು ಕ್ಷೇತ್ರದ ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ಅವರನ್ನು ವಿಚಾರಿಸಿದರೆ, ‘ಶೀಘ್ರದಲ್ಲಿಯೇ ಹೊಸೂರಿಗೆ ಹೋಗಿ ಮನೆ ಪರಿಶೀಲಿಸುವೆ. ಏನೆಲ್ಲ ಮಾಡಬಹುದು ಸಾಧ್ಯತೆಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳುವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT