ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ಹರಡಿಲ್ಲ, ಭಯಪಡುವ ಅಗತ್ಯವಿಲ್ಲ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ
Last Updated 4 ಏಪ್ರಿಲ್ 2020, 13:38 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕೋವಿಡ್–19 ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದು, ಸರ್ಕಾರಿ ಗೃಹ ನಿರ್ಬಂಧನಕ್ಕೆ ಒಳಗಾದ ಜನರಲ್ಲಿ ಸೋಂಕು ಕಾಣಿಸಿಕೊಂಡಿಲ್ಲ. ಹೀಗಾಗಿ ಜಿಲ್ಲೆಯ ಜನರು ಆತಂಕ ಬಿಟ್ಟು, ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲಿಯೇ ಇದ್ದು ಸೋಂಕು ಹರಡುವುದು ತಡೆಗಟ್ಟಲು ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.

ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರಧಾನಮಂತ್ರಿ ಕಿಸಾನ್, ಬರ ಪರಿಹಾರ ಹಾಗೂ ಬೆಳೆ ವಿಮೆಗೆ ಸಂಬಂಧಿಸಿದ ಅನುದಾನವನ್ನು ಸರ್ಕಾರದಿಂದ ನೇರವಾಗಿ ರೈತರಿಗೆ ಖಾತೆಗೆ ಜಮೆ ಮಾಡಲಾಗುತ್ತಿದೆ. ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಅನುದಾನ ರೈತರಿಗೆ ಜಮೆಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಜಮೆಯಾದ ಪರಿಹಾರವನ್ನು ಪಡೆಯಲು ರೈತರು ಬ್ಯಾಂಕಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಹಣ ಪಡೆಯುವಂತೆ ಕ್ರಮವಹಿಸಬೇಕು’ ಎಂದು ತಿಳಿಸಿದರು.

‘ದಿನಸಿ ಅಂಗಡಿ, ರಸಗೊಬ್ಬರ, ಕೀಟನಾಶಕ ಔಷಧಿಗಳು ಹಾಗೂ ಬಿತ್ತನೆ ಬೀಜ ಮಾರಾಟ ಅಂಗಡಿಗಳು ತೆರೆಯಲು ಯಾವುದೇ ಸಮಯ ನಿಗದಿ ಇಲ್ಲ. ರೈತರು ಬೆಳೆದಿರುವ ಕೃಷಿ ಹಾಗೂ ತೋಟಗಾರಿಕೆ, ರೇಷ್ಮೆ ಬೆಳೆಗಳಿಗೆ ಸೂಕ್ತ ಮಾರಾಟಕ್ಕಾಗಿ ಈಗಾಗಲೇ ಸ್ಥಾಪಿಸಿರುವ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಸರಕು ಸುಲಭವಾಗಿ ಸರಬರಾಜು ಮಾಡಲು ಸೂಕ್ತ ಕ್ರಮವಹಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಮಾತನಾಡಿ, ‘ಬೇಸಿಗೆ ಕಾಲದಲ್ಲಿ ಕುಡಿಯವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಬೇಕು. ಕೊರೊನಾ ಸೋಂಕು ತಡೆಗೆ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಕೊರೊನಾ ತಡೆಗೆ ಸಂಪೂರ್ಣ ಸಹಕಾರ ನೀಡುವಂತೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ಮಾತನಾಡಿ, ‘ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಕಾರ್ಯಾಚರಣೆಗಾಗಿ ರಚಿಸಿರುವ ಅಂತರ್ ಜಿಲ್ಲಾ, ಅಂತರ್ ರಾಜ್ಯ ಹಾಗೂ ಅಂತರ್ ತಾಲ್ಲೂಕು ಚೆಕ್‍ಪೋಸ್ಟ್‌ ಸಿಬ್ಬಂದಿ ಮತ್ತು ನಿರ್ಗತಿಕರಿಗೆ, ವಸತಿರಹಿತರಿಗೆ, ವಲಸೆ ಬಂದ ಕಾರ್ಮಿಕರಿಗೆ ವಸತಿ, ಊಟದ ವ್ಯವಸ್ಥೆ, ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಉಪವಿಭಾಗಾಧಿಕಾರಿ ರಘುನಂದನ್, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT