ಮಂಗಳವಾರ, ಜನವರಿ 28, 2020
18 °C
ಮುಸ್ಲಿಂ ಮಹಿಳೆಯರಿಂದ ನಗರದ ಈದ್ಗಾ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ

ದೇಶದ ಸಾಮರಸ್ಯ ಹದಗೆಡಿಸಿದ ಕೇಂದ್ರ: ಹೋರಾಟಗಾರ್ತಿ ಭವ್ಯಾ ನರಸಿಂಹಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ದೇಶದ ಜಾತ್ಯತೀತ ಮೌಲ್ಯಗಳನ್ನು ಬುಡಮೇಲು ಮಾಡುವ ಕುತಂತ್ರದಿಂದ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತರುವ ಮೂಲಕ ಜಾತಿಗಳ ನಡುವೆ ಬೆಂಕಿ ಹಚ್ಚಿ, ದೇಶ ಹಾಳು ಮಾಡುವ ಈ ಕೆಲಸಕ್ಕೆ ಮುಂದಾಗಿದೆ. ಇದನ್ನು ವಿರೋಧಿಸುವ ಮೂಲಕ ಪ್ರತಿಯೊಬ್ಬರೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು’ ಎಂದು ಹೋರಾಟಗಾರ್ತಿ ಭವ್ಯಾ ನರಸಿಂಹಮೂರ್ತಿ ಹೇಳಿದರು.

ನಗರದ ಈದ್ಗಾ ಮೈದಾನದ ಆವರಣದಲ್ಲಿ ಮಂಗಳವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಪೋರಂ ಕಮಿಟಿ ವತಿಯಿಂದ ಮುಸ್ಲಿಂ ಮಹಿಳೆಯರು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಭಾರತ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರ. ಇಲ್ಲಿ ಪ್ರತಿಯೊಬ್ಬರು ಒಂದೇ ತಾಯಿಯ ಮಕ್ಕಳಂತೆ ಬಾಳುತ್ತಿದ್ದೇವೆ. ಇದನ್ನು ಸಹಿಸದ ಕೇಂದ್ರ ಸಿಎಎ ಜಾರಿಗೊಳಿಸುವ ಮೂಲಕ ನಮ್ಮನ್ನು ಬೇರೆ ಮಾಡುತ್ತಿದೆ. ಇದನ್ನು ಎಲ್ಲರೂ ಒಗ್ಗೂಡಿ ಖಂಡಿಸುವ ಮೂಲಕ ಸಂವಿಧಾನದ ಆಶಯದಂತೆ ಬದುಕುವ ವಾತಾವರಣ ತರಬೇಕಿದೆ. ಜಾತ್ಯಾತೀತ ರಾಷ್ಟ್ರದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಧರ್ಮಾಧಾರಿತವಾಗಿ ದೇಶವನ್ನು ಒಡೆಯುವ ಸಿಎಎದಿಂದ ಮುಸ್ಲಿಮರಿಗೆ ಮಾತ್ರವಲ್ಲ, ಹಿಂದೂಗಳಿಗೂ ತೊಂದರೆ ಆಗಲಿದೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರ ವಿಭಜಕ ನೀತಿಯನ್ನೇ ಅನುಸರಿಸಿಕೊಂಡು ಬರುತ್ತಿದೆ. ಅದು ಈಗ ಅಂತಿಮ ಘಟ್ಟಕ್ಕೆ ತಲುಪುತ್ತಿದೆ. ಸಿಎಎಗೆ ಇಡೀ ದೇಶವೇ ವಿರೋಧಿಸಿದರೂ ಕೇಂದ್ರ ಅನುಷ್ಠಾನಕ್ಕೆ ಮುಂದಾಗಿದೆ. ಬಿಜೆಪಿಯ ಏಕಪಕ್ಷೀಯ ನಿರ್ಧಾರದ ಮೂಲಕ ಅಂಬೇಡ್ಕರ್ ಅವರ ಸಂವಿಧಾನವನ್ನು ಅಗೌರವಿಸುತ್ತಿದೆ’ ಎಂದರು.

‘ಇವತ್ತು ಪ್ರಜಾಪ್ರಜಾಪ್ರಭುತ್ವ ಮೌಲ್ಯಗಳಿಗೆ ಗಂಡಾಂತರ ಎದುರಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಸಂವಿಧಾನ ಉಳಿಸಲು ಮುಂದಾಗಬೇಕು. ನಿರ್ದಿಷ್ಟ ಸಮುದಾಯವೊಂದನ್ನು ಗುರಿಯಾಗಿರಿಸಿಕೊಂಡು ಜಾರಿಗೆ ತರಲು ಹೊರಟಿರುವ ಪ್ರಜಾಪ್ರಭುತ್ವ ವಿರೋಧಿ ನೀತಿಗಳನ್ನು ಕೇಂದ್ರ ಕೂಡಲೇ ಕೈಬಿಡಬೇಕು’ ಎಂದು ಆಗ್ರಹಿಸಿದರು.

ಹೋರಾಟಗಾರ್ತಿ ಕವಿತಾ ರೆಡ್ಡಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಬಿಜೆಪಿ ಬಳಗ ಸುಳ್ಳು ಹೇಳಿಕೊಂಡು ಜೀವನ ನಡೆಸುತ್ತಿದೆ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದೆ. ಬಡವರು, ದಲಿತರು, ಮಹಿಳೆಯರು, ಆದಿವಾಸಿಗಳು, ಹಿಂದುಳಿದವರು, ಮುಸ್ಲಿಮರು, ಕ್ರೈಸ್ತರು, ರೈತಾಪಿ ವರ್ಗದವರಿಗೆ ಬಿಜೆಪಿ ಆಡಳಿತದಲ್ಲಿ ಉಳಿಗಾಲವಿಲ್ಲದಂತಾಗಿದೆ. ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಕೇಂದ್ರ ಸಿಎಎ ಜಾರಿಗೆ ಮುಂದಾಗಿದೆ’ ಎಂದು ಆರೋಪಿಸಿದರು.

ಹೋರಾಟಗಾರ್ತಿ ಗೀತಾ ಮಾತನಾಡಿ, ‘ದೇಶದ ಜಾತ್ಯತೀತ ಮೌಲ್ಯಗಳನ್ನು ಬುಡಮೇಲು ಮಾಡುವ ಕುತಂತ್ರದಿಂದ ಕೇಂದ್ರ ಸಿಎಎ ಜಾರಿಗೆ ತಂದಿರುವುದು ಸ್ಪಷ್ಟ. ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲ ಜಾತಿ, ವರ್ಗದ ಜನ ಪ್ರಾಣ ಕೊಟ್ಟಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್‌ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದಿದ್ದರೂ ದೇಶಭಕ್ತರ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ. ಸಿಎಎ ನೆಪದಲ್ಲಿ ಸಮಾಜವನ್ನು ಒಡೆಯುವುದು ಬೇಡ. ಜಾತಿಗಳ ನಡುವೆ ಬೆಂಕಿ ಹಚ್ಚಿ, ದೇಶ ಹಾಳು ಮಾಡುವ ಈ ಕೆಲಸವನ್ನು ಕೇಂದ್ರ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

ಮಾಜಿ ಶಾಸಕಿ ಅನಸೂಯಮ್ಮ, ರಯಾನ್ ಫೌಂಡೇಶನ್ ಅಧ್ಯಕ್ಷ ಬಿ.ಎಸ್.ರಫೀವುಲ್ಲಾ, ಹೋರಾಟಗಾರ್ತಿ ಶಭಾನಾ ಷರೀಪ್, ಮುಖಂಡರಾದ ಎಸ್.ಎಂ.ರಫೀಕ್, ಜಾವಿದ್ ಪಾಷಾ, ಸಾದಿಕ್ ಪಾಷಾ, ಅಸ್ಲಾಂ ಪಾಷಾ, ನರಸಿಂಹಮೂರ್ತಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು