ಮಂಗಳವಾರ, ಅಕ್ಟೋಬರ್ 26, 2021
20 °C
ಕೆರೆ ಕುಂಟೆಗಳಿಗೆ ನೀರು

ಶಿಡ್ಲಘಟ್ಟ: ರೇಷ್ಮೆ ಸಾಕಣೆದಾರರಿಗೆ ಅನಾನುಕೂಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಕಳೆದ ಮೂರು ದಿನಗಳಿಂದಲೂ ಎಡೆ ಬಿಡದೆ ಸುರಿದ ಮಳೆ ಕೆಲ ಬೆಳೆಗಳಿಗೆ ಅನುಕೂಲ ಮಾಡಿಕೊಟ್ಟಿದ್ದರೆ ಹಲವು ಬೆಳೆಗಳಿಗೆ ಅನಾನುಕೂಲ ಉಂಟುಮಾಡಿದೆ.

ಅಲ್ಲಲ್ಲಿ ಕೆಲ ಭಾಗದಲ್ಲಿ ಮಾತ್ರ ಈ ರೀತಿ ಮೂರು ರಾತ್ರಿಗಳಿಂದಲೂ ಸಾಕಷ್ಟು ಮಳೆ ಸುರಿದಿದ್ದು ಮಳೆ ಸುರಿದ ಕಡೆಯೆಲ್ಲಾ ಹಳ್ಳ, ಕೆರೆ ಕುಂಟೆಗಳಿಗೆ ಸಾಕಷ್ಟು ನೀರು ಹರಿದುಬರತೊಡಗಿದೆ.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸುಮಾರು 17 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಿದ್ದು ರಾಗಿಯೊಂದಿಗೆ ತೊಗರಿ ಅಲಸಂದಿ ಅವರೆ ಸೂರ್ಯಕಾಂತಿ ಎಳ್ಳನ್ನು ಮಿಶ್ರ ಬೆಳೆಯನ್ನಾಗಿಯೂ ಹಾಗೂ ನೆಲಗಡಲೆ ಹಾಗೂ ಹುರುಳಿಯನ್ನು ಹಲವರು ಬಿತ್ತನೆ ಮಾಡಿದ್ದಾರೆ.

ಮುಂಗಾರು ಮಳೆಯ ಆರಂಭದ ದಿನಗಳಲ್ಲಿ ಬಿತ್ತನೆ ಮಾಡಿದ ಹೊಲಗಳಲ್ಲಿ ಇದೀಗ ರಾಗಿ ಪೈರು ಗರಿ ಮೇಯುವ ಹಂತಕ್ಕೆ ಬಂದಿದ್ದು ಈ ಹೊಲಗಳಿಗೆ ಇದೀಗ ಬಿದ್ದ ಮಳೆ ವರದಾನವಾಗಿದೆ. ನೆನೆ ಮಳೆಯಿಂದಾಗಿ ಭೂಮಿ ಚೆನ್ನಾಗಿ ಹದವಾಗಿದ್ದು ಇನ್ನು ರಾಗಿ ಕಾಳು ಹಾಲು ಕಟ್ಟುವವರೆಗೂ ಮಳೆಯ ಅಗತ್ಯವೇ ಇಲ್ಲ. ಹಾಗೆಯೆ ಸ್ವಲ್ಪ ತಡವಾಗಿ ಬಿತ್ತನೆ ಮಾಡಿದ ಹೊಲಗಳಲ್ಲಿ ರಾಗಿ ಪೈರು ಗೇಣುದ್ದ ಮೊಣಕಾಲುದ್ದ ಬೆಳೆದು ನಿಂತಿದ್ದು ಈ ಹೊಲಗಳು ನಳ ನಳಿಸುತ್ತಿದ್ದು ಕಳೆ ಕಟ್ಟಿದೆ.

ಮಳೆಯಿಂದಾಗಿ ವಿದ್ಯುತ್ ಬಳಕೆಯೂ ಕಡಿಮೆಯಾಗಿದೆ. ಹಾಗೆಯೆ ಕೊಳವೆ ಬಾವಿಗಳಲ್ಲಿ ಬರುವ ನೀರಿನ ಪ್ರಮಾಣವೂ ಹೆಚ್ಚಾಗಿದೆ.

ಮಳೆ ಸುರಿಯುವುದು ಎಲ್ಲ ರೈತರಿಗೂ ಇಷ್ಟವಾದರೂ, ರೇಷ್ಮೆ ಹುಳು ಸಾಕಣೆದಾರರಿಗೆ ತುಸು ಸಂಕಷ್ಟವೆ. ವಾತಾವರಣದಲ್ಲಿ ತಂಡಿ ಅಂಶ ಹೆಚ್ಚಲಿದ್ದು ಸುಣ್ಣ ಕಟ್ಟು ರೋಗ ಹಾಲು ತೊಂಡೆ ರೋಗ ಹೆಚ್ಚುತ್ತದೆ. ಜತೆಗೆ ಹಣ್ಣಾದ ಹುಳು ಸರಿಯಾಗಿ ನೂಲು ಬಿಚ್ಚದೆ ರೇಷ್ಮೆಗೂಡಿನ ಗುಣಮಟ್ಟ ಕುಸಿಯಲಿದೆ.

ರೇಷ್ಮೆ ಗೂಡಿನಲ್ಲಿ ನೂಲು ಬಿಚ್ಚಾಣಿಕೆ ಸರಿಯಾಗಿ ಆಗದಿರುವುದರಿಂದ ರೀಲರುಗಳಿಗೂ ನಷ್ಟ. ಹಾಗಾಗಿ ಮಾರುಕಟ್ಟೆಯಲ್ಲಿ ರೇಷ್ಮೆಗೂಡಿನ ಬೆಲೆಯೂ ಕುಸಿಯಲಿದೆ. ಮಳೆ ಬೀಳುತ್ತಿರುವುದು ಹಾಗೂ ಮೋಡ ಮುಸುಕಿದ ವಾತಾವರಣದಿಂದ ಈಗಾಗಲೆ ರೇಷ್ಮೆಗೂಡಿನ ಬೆಲೆ ಸುಮಾರು ₹50 ರಿಂದ ₹100 ಕುಸಿದಿದೆ.

ನಿರಂತರವಾಗಿ ಜಡಿ ಮಳೆಯಿಂದಾಗಿ ಹಳೆಯ ಮನೆಗಳಿಗೆ ಅಪಾಯ ಹೆಚ್ಚು. ಹಳೆಯ ಮನೆ ಹಾಗೂ ಕಟ್ಟಡಗಳ ಗೋಡೆ, ಮಣ್ಣಿನ ಚಾವಣಿ ಕುಸಿದು ಬೀಳುವ ಅಪಾಯವಿದೆ. ಹೀಗೆ ತಾಲ್ಲೂಕಿನಲ್ಲಿ ಪೂರ್ತಿ ಮನೆ ಯಾವುದೂ ಬಿದ್ದಿಲ್ಲವಾದರೂ ಗೋಡೆಗಳು, ಭಾಗಶಃ ಮನೆ ನಾಶವಾಗಿರುವ ಘಟನೆಗಳು ನಡೆದಿವೆ.

ಹಿಪ್ಪು ನೇರಳೆ ಸೇರಿದಂತೆ ಟೊಮೆಟೊ, ದಾಳಿಂಬೆ, ಎಲೆ ಕೋಸು, ಸೀಬೆ ಇನ್ನಿತರೆ ತರಕಾರಿ ಹೂ ಹಣ್ಣಿನ ಬೆಳೆಗಳಿಗೆ ರೋಗಗಳು, ಕೀಟ ಹಾಗೂ ನುಸಿ ಪೀಡೆ ಹೆಚ್ಚೆಚ್ಚು ಬಾಧಿಸುತ್ತದೆ. ರೋಗ ಕ್ರಿಮಿ ಕೀಟಗಳ ಹತೋಟಿಗೆ ಹೆಚ್ಚು ರಾಸಾಯನಿಕ ಸಿಂಪಡಣೆಯಿಂದ ರೈತನಿಗೆ ಬಂಡವಾಳ ಹಾಕುವುದು ಅನಿವಾರ್ಯವಾಗಲಿದೆ. ಹೀಗೆ ಎಡೆ ಬಿಡದೆ ಸುರಿವ ಮಳೆಯು ಕೆಲ ರೈತರಿಗೆ ಅನುಕೂಲವಾದರೆ ಇನ್ನು ಕೆಲ ರೈತರ ಪಾಲಿಗೆ ಅನಾನುಕೂಲವನ್ನು ತಂದೊಡ್ಡಿದೆ.

ನಗರಸಭೆಯ ಪೌರಾಯುಕ್ತ ಆರ್. ಶ್ರೀಕಾಂತ್ ಅವರು ಪೌರ ಕಾರ್ಮಿಕರೊಂದಿಗೆ ನಗರದ ವಿವಿಧೆಡೆ ಸಂಚರಿಸಿ ಮಳೆಯ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಂಡರು. ಟಿಬಿ ರಸ್ತೆಯಲ್ಲಿರುವ (ರೈಲ್ವೆ ಕೆಳಸೇತುವೆ) ಬಳಿ ನೀರು ನಿಂತಿರುವುದನ್ನು ವೀಕ್ಷಿಸಿ ಕೂಡಲೇ ಈ ಸಂಬಂಧ ರೈಲ್ವೇ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ನಗರದ ಸರಸ್ವತಿ ವಿದ್ಯಾಸಂಸ್ಥೆಯ ಪಕ್ಕದಲ್ಲಿ ಚರಂಡಿಯಲ್ಲಿ ತ್ಯಾಜ್ಯ ಮತ್ತು ಮಣ್ಣು ಶೇಖರಣೆಯಾಗಿರುವುದನ್ನು ಪೌರಾಯುಕ್ತರು ವೀಕ್ಷಿಸಿ ಕೂಡಲೇ ಅದನ್ನು ತೆರವುಗೊಳಿಸಲು ಕ್ರಮ ಕೈಗೊಂಡು, ಮಳೆಯ ನೀರು ಸರಾಗವಾಗಿ ಹರಿಯದ ಚರಂಡಿಗಳನ್ನು ಸ್ವಚ್ಛಗೊಳಿಸಲು ವಿಶೇಷ ಆದ್ಯತೆ ನೀಡಲಾಗುವುದು ಎಂದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು