ಬೆಟ್ಟದ ತಪ್ಪಲಲ್ಲಿ ಭಕ್ತಿಯ ಕಲರವ

7
ಸಾವಿರಾರು ಜನರಿಂದ ‘ನಂದಿಗಿರಿ ಪ್ರದಕ್ಷಿಣೆ’, ಕಾಲ್ನಡಿಗೆಯಲ್ಲೇ ಸುಮಾರು 15 ಕಿ.ಮೀ ದೂರ ನಡೆದ ಅಬಾಲವೃದ್ಧರು, ಭಕ್ತರಿಗೆ ದಾರಿಯುದ್ಧಕ್ಕೂ ಉಪಚಾರ

ಬೆಟ್ಟದ ತಪ್ಪಲಲ್ಲಿ ಭಕ್ತಿಯ ಕಲರವ

Published:
Updated:
Deccan Herald

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿ ಬೆಟ್ಟದ ತಪ್ಪಲಲ್ಲಿ ಸೋಮವಾರ ನಸುಕು ಹರಿಯುವ ಮುನ್ನವೇ ಆಸ್ತಿಕ ಸಮೂಹ ಸಮರೋಪಾದಿಯಲ್ಲಿ ಹರಿದು ಬಂದಿತ್ತು. ಸುರ್ಯೋದಯಕ್ಕೂ ಮುನ್ನವೇ ಶಿವನಾಮ ಸ್ಮರಣೆಯ ಜಪದಲ್ಲಿ ದಣಿವರಿಯದ ಭಕ್ತಿಯ ನಡುಗೆ ಆರಂಭಿಸಿದವರು ಪುಣ್ಯ ಸಂಚಯಕ್ಕಾಗಿ ಪಂಚಗಿರಿಗಳನ್ನು ಸುತ್ತಿ ಧನ್ಯತೆಯ ಭಾವದಲ್ಲಿ ಮಿಂದೆದ್ದರು.

ಆಷಾಢ ಮಾಸದ ಕೊನೆ ಸೋಮವಾರ ತಾಲ್ಲೂಕಿನ ನಂದಿ ಗ್ರಾಮದಲ್ಲಿ ಕಂಡುಬಂದ 80ನೇ ವರ್ಷದ ‘ನಂದಿಗಿರಿ ಪ್ರದಕ್ಷಿಣೆ’ಯ ಚಿತ್ರಣವಿದು. ಪ್ರಶಾಂತ ಪ್ರಕೃತಿಯ ಮಡಿಲಲ್ಲಿ ಶ್ರದ್ಧಾಭಕ್ತಿಯಿಂದ ಹೆಜ್ಜೆ ಹೆಜ್ಜೆಗೂ ಶಿವನಾಮ ಭಜಿಸುತ್ತ ಸಾವಿರಾರು ಜನರು ಸುಮಾರು 15 ಕಿ.ಮೀ ದೂರದ ಪ್ರದಕ್ಷಿಣೆಯನ್ನು ಪೂರೈಸಿದರು.

ಬೆಳಿಗ್ಗೆ 6.30ಕ್ಕೆ ನಂದಿ ಗ್ರಾಮದ ಭೋಗನಂದೀಶ್ವರ ಸ್ವಾಮಿ ದೇಗುಲದಲ್ಲಿ ನಂದಿಗಿರಿ ಪ್ರದಕ್ಷಿಣೆ ಸೇವಾ ಟ್ರಸ್ಟ್ ಪದಾಧಿಕಾರಿಗಳ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಬಳಿಕ ಪ್ರದಕ್ಷಿಣೆಗೆ ಚಾಲನೆ ದೊರೆಯಿತು. ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು, ದೇವನಹಳ್ಳಿ, ವಿಜಯಪುರ, ಆಂಧ್ರಪ್ರದೇಶದ ಅನಂತಪುರ, ಹಿಂದೂಪುರ ಸೇರಿದಂತೆ ವಿವಿಧಡೆಯಿಂದ ಹರಿದು ಬಂದಿದ್ದ ಭಕ್ತ ಸಮೂಹ ಅಬಾಲವೃದ್ಧರಾದಿಯಾಗಿ ಪ್ರದಕ್ಷಿಣೆಯಲ್ಲಿ ಹೆಜ್ಜೆ ಹಾಕಿದರು.

ಭೋಗನಂದೀಶ್ವರ ದೇವಾಲಯದಿಂದ ಕುಡುವತಿ, ಕಾರಹಳ್ಳಿ ಕ್ರಾಸ್, ನಂದಿ ಬೆಟ್ಟದ ಕ್ರಾಸ್, ಹೆಗ್ಗಡಿಹಳ್ಳಿ, ಗಾಂಧೀಪುರ, ಕಣಿವೆಪುರ, ಸುಲ್ತಾನ್‌ಪೇಟೆ ಮಾರ್ಗವಾಗಿ ಸಾಗಿ ನಂದಿಗಿರಿ, ಗೋಪಿನಾಥಗಿರಿ, ದಿಬ್ಬಗಿರಿ, ಬ್ರಹ್ಮಗಿರಿ ಮತ್ತು ಚನ್ನಗಿರಿಯನ್ನು ಸುತ್ತುವರಿದು ಪುನಃ ಭೋಗನಂದಿ ದೇವಾಲಯದ ಬಳಿ ಬಂದವರು ಪ್ರದಕ್ಷಿಣೆ ಸಂಪನ್ನಗೊಳಿಸುತ್ತಿದ್ದರು.

ನಂದಿಗಿರಿ ಪ್ರದಕ್ಷಿಣೆಯಲ್ಲಿ ಹೆಜ್ಜೆ ಹಾಕುತ್ತಿದ್ದವರಿಗೆ ದಾರಿಯುದ್ಧಕ್ಕೂ ಅನೇಕ ಸಂಘ–ಸಂಸ್ಥೆಗಳ ಸದಸ್ಯರು, ನಾಗರಿಕರು ಉಪಾಹಾರ ಸೇರಿದಂತೆ ಕುಡಿಯುವ ನೀರು, ಬಿಸ್ಕತ್, ಕಲ್ಲುಸಕ್ಕರೆ, ಕರ್ಜೂರ, ಮಜ್ಜಿಗೆ, ಮೊಳಕೆಕಾಳು, ಹಣ್ಣು ನೀಡುವ ಮೂಲಕ ಈ ಧಾರ್ಮಿಕ ಕೈಂಕರ್ಯಕ್ಕೆ ತಮ್ಮ ಭಕ್ತಿಯ ಸೇವೆ ಸಲ್ಲಿಸಿದರು. ಪ್ರದಕ್ಷಿಣೆ ಮಾರ್ಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಅಲ್ಲಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿತ್ತು.

ಏಳು ದಶಕಗಳಿಗಿಂತ ಅಧಿಕ ಇತಿಹಾಸ ಹೊಂದಿರುವ ಈ ಆಧ್ಯಾತ್ಮಿಕ ಯಾತ್ರೆಯಲ್ಲಿ ಆಸ್ತಿಕರೊಂದಿಗೆ ಪರಿಸರ ಪ್ರೇಮಿಗಳು ಕೂಡ ಹೆಜ್ಜೆ ಹಾಕುತ್ತಿದ್ದದ್ದು ಕಂಡುಬಂತು. ಪ್ರದಕ್ಷಿಣೆಯ ದಾರಿ ಸವೆಸುತ್ತಿದ್ದವರು. ಅಲ್ಲಲ್ಲಿ ನಿಂತು ಸುತ್ತಲಿನ ರಮ್ಯ ಪ್ರಕೃತಿಯ ದೃಶ್ಯಕಾವ್ಯಕ್ಕೆ ಬೆನ್ನು ಮಾಡಿ ನಿಂತು ಮೊಬೈಲ್‌ ‘ಸೆಲ್ಫಿ’ಗೆ ಮುಖವೊಡ್ಡುತ್ತ ಹೆಜ್ಜೆ ಹಾಕುತ್ತಿದ್ದದ್ದು ಗೋಚರಿಸಿತು.

‘ನಾವು ಕಳೆದ ನಾಲ್ಕು ವರ್ಷಗಳಿಂದ ನಂದಿಗಿರಿ ಪ್ರದಕ್ಷಿಣೆಯಲ್ಲಿ ಭಾಗವಹಿಸುತ್ತ ಬರುತ್ತಿದ್ದೇವೆ. ಕಳೆದ ವರ್ಷ 22 ಜನರ ತಂಡ ಬಂದಿತ್ತು. ಈ ವರ್ಷ 47 ಜನರು ಬಂದಿದ್ದೇವೆ. ಭೋಗ ನಂದೀಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪ್ರದಕ್ಷಿಣೆಯನ್ನು ಪೂರೈಸುತ್ತೇವೆ. ಇಲ್ಲಿನ ಆಹ್ಲಾದಕರ ವಾತಾವರಣ ನಮಗೆ ತುಂಬಾ ಇಷ್ಟವಾಗಿದೆ. ಹೀಗಾಗಿ ಪ್ರತಿ ವರ್ಷ ನಮ್ಮೊಂದಿಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ’ ಎಂದು ಬೆಂಗಳೂರಿನ ಕೋರಮಂಗಲದ ಸ್ಫೂರ್ತಿ ಮಹಿಳಾ ಸಂಘದ ಸದಸ್ಯೆ ಶಿಲ್ಪಾ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !