ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳೂರು ಕೆರೆಗೆ ಎಚ್.ಎನ್ ವ್ಯಾಲಿ ನೀರು

ಶಾಸಕ ಎನ್.ಎಚ್. ಶಿವಶಂಕರರೆಡ್ಡಿಯಿಂದ ಕೆರೆಗೆ ಪೂಜೆ
Last Updated 28 ಏಪ್ರಿಲ್ 2021, 3:08 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನ ಮರಳೂರು ಕೆರೆಗೆ ಎಚ್.ಎನ್ ವ್ಯಾಲಿ ನೀರು ಹರಿಯುತ್ತಿರುವ ಕಾರಣ ಮಂಗಳವಾರ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸ್ಥಳೀಯ ‌ಮುಖಂಡರು ಭೇಟಿ‌ ನೀಡಿ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಸುಮಾರು 4-5 ವರ್ಷಗಳ ಸತತ ಪ್ರಯತ್ನದಿಂದ ಈ‌ ಭಾಗದ ಜನತೆಗೆ ನೀಡಿದ್ದ ಭರವಸೆಯ ಮೇರೆಗೆ ಎಚ್.ಎನ್ ವ್ಯಾಲಿ ನೀರನ್ನು ತಾಲ್ಲೂಕಿನ ಕೆರೆಗಳಿಗೆ ಹರಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಅಂತರ್ಜಲ ಮಟ್ಟ ವೃದ್ಧಿಯಾಗಿ ಭಾಗಶಃ ರೈತರ ಕೃಷಿ ಚಟುವಟಿಕೆಗಳಿಗೆ ಮರುಜೀವ ಬರಲಿದೆ
ಎಂದರು.

ರೈತರು ಕೆರೆಗಳಿಗೆ ನೀರು ಹರಿದ ಬಳಿಕ ಬೋರ್‌ವೆಲ್‌ಗಳಲ್ಲಿನ ‌ನೀರಿನ ಪ್ರಮಾಣವನ್ನು ಪರೀಕ್ಷಿಸಿಕೊಂಡು ಬೆಳೆಗಳಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ವ್ಯವಸ್ಥೆಯ ಮೂಲಕ ಮಿತವಾಗಿ ತಾಂತ್ರಿಕ ಪದ್ಧತಿಯ ಬೇಸಾಯಕ್ಕೆ ಮುಂದಾಗಬೇಕಾಗಿದೆ. ಸುಮಾರು ₹900 ಕೋಟಿ‌ ಅನುದಾನದಲ್ಲಿ ರೂಪಿಸಲಾಗಿದ್ದ ಎಚ್.ಎನ್ ವ್ಯಾಲಿ ಯೋಜನೆಯು ಸಫಲತೆ ಕಂಡಿದ್ದು, ಮುಂದುವರಿದ ಭಾಗವಾಗಿ ಹಂತಹಂತವಾಗಿ ತಾಲ್ಲೂಕಿನ ಬಹುತೇಕ ಕೆರೆಗಳನ್ನು ತುಂಬಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಬೆಂಗಳೂರಿನ ಹೆಬ್ಬಾಳ- ನಾಗವಾರದಿಂದ ಹರಿಯುವ ಸಂಸ್ಕರಿಸಿದ ತ್ಯಾಜ್ಯ ನೀರು ಎರಡು ಹಂತದಲ್ಲಿ ಸಂಸ್ಕರಣೆಯಾಗಿ ಕಣಿವೆ‌ ಮೇಲಿನ ಧರ್ಮರಾಯನ ಕೆರೆಗೆ ಹರಿದು ಅಲ್ಲಿಂದ ಸುಮಾರು 4-5 ಕಿ.ಮೀ ವರೆಗೆ ಭೂಮಿಯ ಗುರುತ್ವಾಕರ್ಷಣೆಯ ಶಕ್ತಿಯಿಂದ ಕಾಲುವೆ ಮೂಲಕ ಹರಿದು ಶ್ರೀನಿವಾಸ ಸಾಗರ ಸೇರುತ್ತದೆ. ಅಲ್ಲಿಂದ ಸುಮಾರು 22 ಕಿ.ಮೀ ಉತ್ತರ ಪಿನಾಕಿನಿ ನದಿಯಲ್ಲಿ ಪೈಪ್ ಮೂಲಕ ಹರಿದು ನಗರಕ್ಕೆ ಸಮೀಪವಿರುವ ಕಿಂಡಿ‌ ಅಣೆಕಟ್ಟು ‌ಬಳಿಗೆ ಹರಿಯುತ್ತದೆ. ಅಲ್ಲಿಂದ ಪುನಃ 7 ಕಿ.ಮೀ ಕಾಲುವೆ ಮೂಲಕ ಹರಿದು ಮರಳೂರು ಕೆರೆಗೆ ನೀರು ಸೇರುತ್ತಿದೆ. ಇದರಿಂದಾಗಿ ತ್ಯಾಜ್ಯ ‌ನೀರು ಎರಡು ಬಾರಿ ವೈಜ್ಞಾನಿಕವಾಗಿ ಸಂಸ್ಕರಿಸುವ ಜತೆಗೆ ಭೂಮಿಯಲ್ಲಿ ‌ಹರಿದು ಬರುವುದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಎಂದು‌ ಹೇಳಿದರು.

ಮತ್ತೆರಡು ಯೋಜನೆಯಡಿ ನೀರು: ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕಿಳಿದು‌ ರೈತರ ಬದುಕು ದುಸ್ತರವಾಗಿದೆ. ಇದಕ್ಕಾಗಿ ಆರಂಭಿಕ ಹಂತವಾಗಿ ಎಚ್.ಎನ್ ವ್ಯಾಲಿ‌ ನೀರನ್ನು ಕೆರೆಗಳಿಗೆ ಹರಿಸುವ ಪ್ರಯತ್ನ ಯಶಸ್ವಿಯಾಗಿದೆ. ಇದರ‌ ಬೆನ್ನಲ್ಲೆ ವೃಷಭಾವತಿ ನೀರನ್ನು ತುಮಕೂರು, ಕೊರಟಗೆರೆ, ದೊಡ್ಡಬಳ್ಳಾಪುರ ಮಾರ್ಗವಾಗಿ ತಾಲ್ಲೂಕಿನ ಹೊಸೂರು ‌ಹೋಬಳಿಯ ಕೆರೆಗಳಿಗೆ ನೀರು ಹರಿಯಲಿದೆ. ಉಳಿದಂತೆ ಪೈಪ್ ‌ಲೈನ್ ಕಾಮಗಾರಿ ಪ್ರಗತಿಯಲ್ಲಿರುವ ಎತ್ತಿನಹೊಳೆ ಯೋಜನೆಯ ಮೂಲಕ ಮುಂದಿನ 2-3 ವರ್ಷದಲ್ಲಿ ಶಾಶ್ವತ ನೀರಾವರಿ ಯೋಜನೆ ತಾಲ್ಲೂಕಿಗೆ ಲಭ್ಯವಾಗಲಿದೆ. ಇದರಿಂದ ರೈತರ ಬದುಕು ಹಸನಾಗಲಿದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು. ‌

ಮುಖಂಡ ಎಚ್.ಎನ್.ಪ್ರಕಾಶರೆಡ್ಡಿ, ಹನುಮಂತರೆಡ್ಡಿ, ನಾಗರಾಜ್, ವೆಂಕಟರಮಣ, ಮೂರ್ತಿ, ಸೇಟು, ಬಾಬು, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಶ್ರೀನಿವಾಸರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT