ಶಿಡ್ಲಘಟ್ಟ: ಬೇಸಾಯಗಾರರು ಉತ್ತು, ಬಿತ್ತಿ ಉತ್ತಮ ಫಲ ಪಡೆದ ಸಂದರ್ಭದಲ್ಲಿ ಭೂತಾಯಿಗೆ ನಮನ ಸಲ್ಲಿಸುವ ಉದ್ದೇಶವನ್ನು ಹೊಸದ್ಯಾವರ ಆಚರಣೆಯು ಹೊಂದಿದೆ. ಅತ್ತೆಯಾದವಳು ಸೊಸೆಗೆ ತನ್ನತ್ತೆಯಿಂದ ಪಡೆದಿದ್ದಂತೆ, ತನ್ನ ಸೊಸೆಗೆ ದೀಪವನ್ನು ಕೊಡುತ್ತಾ ಮನೆ ಹಾಗೂ ಮನದೊಳಗೆ ಬರಮಾಡಿಕೊಳ್ಳುವುದು ಈ ಆಚರಣೆಯಿಂದಲೇ ಆರಂಭವಾಗುತ್ತದೆ ಎಂದು ಮುತ್ತೂರು ಗ್ರಾಮದ ವೆಂಕಟಲಕ್ಷ್ಮಮ್ಮ ತಿಳಿಸಿದರು.
ಭಾನುವಾರ ರಾತ್ರಿ ಮುತ್ತೂರು ಗ್ರಾಮದಲ್ಲಿ ಮಹಿಳೆಯರು ಒಗ್ಗೂಡಿ ಹೊಸದ್ಯಾವರ ಆಚರಣೆಯನ್ನು ಹಮ್ಮಿಕೊಂಡಿದ್ದರು.
ಕೃಷಿಕರು ಶ್ರಮವಹಿಸಿ ಭೂಮಿಯನ್ನು ಉಳುಮೆ ಮಾಡಿದ ನಂತರ ಹೊಸದಾದ, ಉತ್ತಮ ಬೆಳೆ ಬಂದು ಕೊಯ್ಲಿಗೆ ಅಣಿಯಾಗುವಾಗ ಬಹಳ ಶ್ರದ್ಧಾ ಭಕ್ತಿಗಳಿಂದ ಆರಾಧಿಸುವ ಆಚರಣೆಯನ್ನು 'ಹೊಸದ್ಯಾವರ' ಎನ್ನುತ್ತಾರೆ. ಅಂದು ತಮ್ಮ ಭೂಮಿಯಲ್ಲಿ ಬೆಳೆದ ಎಲ್ಲಾ ಬಗೆಯ ಎಲೆ, ಹೂವು, ತೆನೆ, ಕಾಯಿ, ಹಣ್ಣುಗಳನ್ನು ತಂದು ಪೂಜಿಸುವ ರೀತಿಯಿದು. 'ಹೊಸದ್ಯಾವರ' ಸಂಪ್ರದಾಯದ ಸಂಪೂರ್ಣ ಯಜಮಾನತ್ವ ಮಹಿಳೆಯರದೇ ಆಗಿರುತ್ತದೆ ಎಂದು ಹೇಳಿದರು.
ಹೊಸದ್ಯಾವರವನ್ನು ಒಕ್ಕಲಿಗ ಗುಂಪಿಗೆ ಸೇರಿದ ಸಂಬಂಧಿಕರು ಹೆಚ್ಚಾಗಿರುವೆಡೆ ಎಲ್ಲಾ ಒಟ್ಟುಗೂಡಿ ಆಚರಿಸುತ್ತೇವೆ. ದ್ಯಾವರು ನಡೆಸುವ ಒಕ್ಕಲಿಗರೆಲ್ಲ ಒಪ್ಪತ್ತು (ಉಪವಾಸ) ಇದ್ದು ಸ್ನಾನ ಮಾಡಿ ಹೊಸಬಟ್ಟೆಗಳನ್ನುಟ್ಟು ಸಂಬಂಧಿಕರ ಗುಂಪಿಗೆ ಒಂದೊಂದು ಸಗಣಿ ಸಾರಿಸಿದ ಬಿದಿರು ಗಂಪೆಯಲ್ಲಿ ಹೊಸಭತ್ತ, ಬೆಲ್ಲ, ತುಪ್ಪ, ಹಾಲು, ಹೊಸ ಮಣ್ಣಿನ ಹರಿವೆ, ಸಣ್ಣ ಕುಡಿಕೆ, ಹೊಸಬಾನೆ ಬಳಸಿ, ಎಲ್ಲರೂ ಸೇರಿ ಒಲೆಯ ಮೇಲೆ ಬಾನೆಯಲ್ಲಿ ಹರಿವೆಯಲ್ಲಿ ತಂದ ನೀರು ಹಾಕಿ ಅಕ್ಕಿ, ಹಾಲು, ತುಪ್ಪ, ಬೆಲ್ಲ ಹಾಕಿ ಎಲ್ಲವನ್ನೂ ಅರಿಸಿನ ಕುಂಕುಮ ಹೂಗಳಿಂದ ಪೂಜಿಸಲಾಗುತ್ತದೆ. ನಂತರ ಒನಕೆ, ಕುದುರು, ಕೇರುವ ಮೊರ ಎಲ್ಲದಕ್ಕೂ ಪೂಜೆ ಮಾಡಿ, ಭತ್ತ ಕುಟ್ಟಿ ಹೂಹರಿವೆಯಲ್ಲಿ ಅಕ್ಕಿ ನೆನೆ ಹಾಕಲಾಗುತ್ತದೆ. ಅಕ್ಕಿ ಕುಟ್ಟಿ ಬೆಲ್ಲದ ಪಾಕ ಮಾಡಿ ತಂಬಿಟ್ಟು ದೀಪಗಳನ್ನು ಮಾಡಲಾಗುತ್ತದೆ.
ಕಾಲಕ್ಕೆ ತಕ್ಕಂತೆ ಆಚರಣೆಯಲ್ಲಿಕೊಂಚ ಬದಲಾವಣೆಗಳನ್ನೂ ಮಾಡಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಅರುಣಾ, ರತ್ನಮ್ಮ, ಸುಜಾತ,ಅಮೃತಾ, ಮಲ್ಲಿಕಾ, ಮಂಜುಳ, ಮೌನೀಶಾ, ಕಾಂತಮ್ಮ ಮತ್ತಿತರರುಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.