ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಹೊಸದ್ಯಾವರ' ಆಚರಣೆಗೆ ಹೊಚ್ಚ ಹೊಸ ಮಡಕೆಗಳು

Last Updated 31 ಅಕ್ಟೋಬರ್ 2019, 11:02 IST
ಅಕ್ಷರ ಗಾತ್ರ

ಶಿಡ್ಲಘಟ್ಟ : ದೀಪಾವಳಿಯ ನಂತರ ಆಚರಿಸುವ “ಹೊಸದ್ಯಾವರ” ಆಚರಣೆಗೆ ಶಿಡ್ಲಘಟ್ಟ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಮಹಿಳೆಯರು ಹೊಸ ಮಡಕೆಗಳನ್ನು ಖರೀದಿಸುತ್ತಿದ್ದಾರೆ. ಭಕ್ತರಹಳ್ಳಿಯ ಕುಂಬಾರ ವೆಂಕತರೋಣಪ್ಪನವರ ಮಗ ನಾರಾಯಣಸ್ವಾಮಿ ಹಳ್ಳಿಗಳಿಗೆ ಹೋಗಿ “ಹೊಸದ್ಯಾವರ” ಆಚರಣೆಗೆ ಬಳಸುವ ಹೊಚ್ಚ ಹೊಸ ಮಡಕೆಗಳನ್ನು ಮಾರುತ್ತಿದ್ದಾರೆ.

ಅರಿವೆ, ಬಂದ ಮಡಕೆ, ಕೈಗಡಿಗೆ, ಎರಡು ಮಡಕೆಗಳು, ಎರಡು ಜೊತೆ ದೀಪಗಳು, ಎರಡು ಮಗಿವಿಗಳು (ಚಿಟ್ಟೆಗಳು), ಮೂರು ಸಟ್ನಗಳು ಮುಂತಾದ ಮಣ್ಣಿನಲ್ಲಿ ತಾಯಾರಿಸಲಾದವುಗಳನ್ನು ಈ ಆಚರಣೆಯಲ್ಲಿ ಬಳಸುವುದರಿಂದ, ಅವೆಲ್ಲವುಗಳನ್ನೂ ಒಟ್ಟುಗೂಡಿಸಿ ತಂದು ಅವರು ಮಾರುತ್ತಿದ್ದಾರೆ.

ಅಪ್ಪೇಗೌಡನಹಳ್ಳಿ, ಮುತ್ತೂರು, ಮೇಲೂರು, ಕಂಬದಹಳ್ಳಿ, ಯಣ್ಣಂಗೂರು, ಕಾಕಚೊಕ್ಕಂಡಹಳ್ಳಿ, ಭಕ್ತರಹಳ್ಳಿ, ಬೆಳ್ಳೂಟಿ, ತೊಟ್ಲಗಾನಹಳ್ಳಿ, ಹಿರೇಬಲ್ಲ, ತಿಮ್ಮನಹಳ್ಳಿ, ದೊಡ್ಡಮುದ್ದೇನಹಳ್ಳಿ, ಚಿಕ್ಕನಹಳ್ಳಿ, ಯಲುವಳ್ಳಿ ಮುಂತಾದೆಡೆ ಹೋಗಿ ಅವರು ಹೊಸದ್ಯಾವರಕ್ಕೆ ಬೇಕಾದ ಮಡಕೆಗಳನ್ನು ಮಾರುತ್ತಾರೆ.

‘ಸುಮಾರು 50 ವರ್ಷಗಳಿಂದ ನಮ್ಮ ಕುಟುಂಬದವರು ಕುಂಬಾರಿಕೆಯ ಕಸುಬನ್ನು ಮಾಡಿಕೊಂಡು ಬಂದಿದ್ದೇವೆ. ಗುಣಮಟ್ಟ ಕಾಯ್ದುಕೊಳ್ಳಲು ವೆಂಕಟಗಿರಿಕೋಟೆಯ ಕೆರೆಯ ಜೇಡಿ ಮಣ್ಣನ್ನು ತರುತ್ತೇವೆ. ಅದು ಒಂದು ಟಿಪ್ಪರ್ ಲಾರಿ ಲೋಡಿಗೆ 3 ಸಾವಿರ ರೂ ಹಾಗೂ ತುಂಬಿಸಲು ಜೆಸಿಬಿಗೆ ಒಂದು ಸಾವಿರ ರೂ ಖರ್ಚು ಬರುತ್ತದೆ. ಹಿಂದೆ, 'ಹೊಸದ್ಯಾವರ'ಆಚರಣೆಗೆ, ಒಂದೊಂದು ಹಳ್ಳಿಗೆ ಎರಡು ಎತ್ತಿನ ಬಂಡಿಗಳ ತುಂಬ ಮಡಕೆಗಳನ್ನು ತೆಗೆದುಕೊಂಡು ಹೋಗಿ ಮಾರುತ್ತಿದ್ದೆವು. ಕನಿಷ್ಠ 25 ಕುಟುಂಬದವರಾದರೂ ಈ ಆಚರಣೆಗೆ ಬೇಕಾದ ಮಣ್ಣಿನಲ್ಲಿ ತಯಾರಾದ ಸಾಮಗ್ರಿಗಳನ್ನು ಕೊಳ್ಳುತ್ತಿದ್ದರು. ಈಗ ಐದರಿಂದ ಆರು ಮನೆಗಳವರು ಕೊಂಡರೆ ಹೆಚ್ಚು. ಕಂಚು ಅಥವಾ ಸಿಲ್ವರ್ ಪಾತ್ರೆಗಳನ್ನು ಜನರೀಗ ಬಳಸತೊಡಗಿದ್ದಾರೆ’ಎಂದು ಕುಂಬಾರ ನಾರಾಯಣಸ್ವಾಮಿ ತಿಳಿಸಿದರು.

ಹೊಸದ್ಯಾವರ ಆಚರಣೆ : ಕೃಷಿಕರು ಶ್ರಮವಹಿಸಿ ಭೂಮಿಯನ್ನು ಉಳುಮೆ ಮಾಡಿದ ನಂತರ ಹೊಸದಾದ, ಉತ್ತಮ ಬೆಳೆ ಬಂದು ಕೊಯ್ಲಿಗೆ ಅಣಿಯಾಗುವಾಗ ಬಹಳ ಶ್ರದ್ಧಾ ಭಕ್ತಿಗಳಿಂದ ಆರಾಧಿಸುವ ಆಚರಣೆಯನ್ನು “ಹೊಸದ್ಯಾವರ” ಎನ್ನುತ್ತಾರೆ. ಅಂದು ತಮ್ಮ ಭೂಮಿಯಲ್ಲಿ ಬೆಳೆದ ಎಲ್ಲಾ ಬಗೆಯ ಎಲೆ. ಹೂವು, ತೆನೆ, ಕಾಯಿ, ಹಣ್ಣುಗಳನ್ನು ತಂದು ಪೂಜಿಸುವ ರೀತಿಯಿದು. “ಹೊಸದ್ಯಾವರ” ಸಂಪ್ರದಾಯದ ಸಂಪೂರ್ಣ ಯಜಮಾನತ್ವ ಮಹಿಳೆಯರದೇ ಆಗಿರುವುದು ವಿಶೇಷ.

ಹೊಸದ್ಯಾವರವನ್ನು ಒಕ್ಕಲಿಗ ಗುಂಪಿಗೆ ಸೇರಿದ ಸಂಬಂಧಿಕರು ಹೆಚ್ಚಾಗಿರುವೆಡೆ ಎಲ್ಲಾ ಒಟ್ಟುಗೂಡಿ ಆಚರಿಸುತ್ತಾರೆ. ದ್ಯಾವರು ನಡೆಸುವ ಒಕ್ಕಲಿಗರೆಲ್ಲ ಒಪ್ಪತ್ತು (ಉಪವಾಸ) ಇದ್ದು ಸ್ನಾನ ಮಾಡಿ ಹೊಸಬಟ್ಟೆಗಳನ್ನುಟ್ಟು ಸಂಬಂಧಿಕರ ಗುಂಪಿಗೆ ಒಂದೊಂದು ಸಗಣಿ ಸಾರಿಸಿದ ಬಿದಿರು ಗಂಪೆಯಲ್ಲಿ ಹೊಸಭತ್ತ, ಬೆಲ್ಲ, ತುಪ್ಪ, ಹಾಲು, ಹೊಸ ಮಣ್ಣಿನ ಹರಿವೆ, ಸಣ್ಣ ಕುಡಿಕೆ, ಹೊಸಬಾನೆ ಬಳಸಿ, ಎಲ್ಲರೂ ಸೇರಿ ಒಲೆಯ ಮೇಲೆ ಬಾನೆಯಲ್ಲಿ ಹರಿವೆಯಲ್ಲಿ ತಂದ ನೀರು ಹಾಕಿ ಅಕ್ಕಿ, ಹಾಲು, ತುಪ್ಪ, ಬೆಲ್ಲ ಹಾಕಿ ಎಲ್ಲವನ್ನೂ ಅರಿಸಿನ ಕುಂಕುಮ ಹೂಗಳಿಂದ ಪೂಜಿಸಿ ಸೌದೆ ಉರಿಸಿ ಸೀ ಪೊಂಗಲು ಮಾಡುತ್ತಾರೆ. ನಂತರ ಒನಕೆ, ಕುದುರು, ಕೇರುವ ಮೊರ ಎಲ್ಲದಕ್ಕೂ ಪೂಜೆ ಮಾಡಿ, ಭತ್ತ ಕುಟ್ಟಿ ಹೂಹರಿವೆಯಲ್ಲಿ ಅಕ್ಕಿ ನೆನೆ ಹಾಕುತ್ತಾರೆ. ಅಕ್ಕಿ ಕುಟ್ಟಿ ಬೆಲ್ಲದ ಪಾಕ ಮಾಡಿ ತಂಬಿಟ್ಟು ದೀಪಗಳನ್ನು ಮಾಡುತ್ತಾರೆ.

ಬ್ಯಾರೆ ದೇವರಿಗೆ ಹೊಂಗೆ ಎಲೆಗಳ ಚಪ್ಪರದ ಗುಡಿಕಟ್ಟಿ ಕಟ್ಟೆಯಲ್ಲಿ ಕಾಶಿತೆನೆ ಪೊರಕೆ ತೆನೆ, ರಾಗಿತೆನೆ, ಎಳ್ಳು ಹೂವು ಮುಂತಾದವುಗಳನ್ನಿಟ್ಟು ಕೆಲವರು ಅಲ್ಲಿಗೆ ಕರಗವನ್ನು ಹೊತ್ತು ತರುತ್ತಾರೆ. ಬೈರವೇಶ್ವರನಿಗೆ ಕಾಯಿ ಹೊಡೆದು ಮಂಗಳಾರತಿ ಮಾಡಿ, ಹಾಲು ಪೊಂಗಲು, ತಂಬಿಟ್ಟು ದೀಪ ದೇವರಿಗೆ ಅರ್ಪಿಸಿ ಪೂಜೆ ಮುಗಿಸಿದ ಮೇಲೆ ಅಲ್ಲಿನ ಮರಗಳ ಕೆಳಗೆ ಕುಳಿತು ಮೋತಕದೆಲೆಯಲ್ಲಿ ಬಡಿಸಿಕೊಂಡು ಊಟ ಮಾಡಿ ಒಪ್ಪತ್ತು ಬಿಟ್ಟು ಮನೆಗಳಿಗೆ ಹಿಂದಿರುಗುತ್ತಾರೆ. ಇದು ಹೊಸ ದ್ಯಾವರ ಆಚರಣೆಯ ರೀತಿ. ಕಾಲಕ್ಕೆ ತಕ್ಕಂತೆ ಕೊಂಚ ಬದಲಾವಣೆಗಳನ್ನೂ ಮಾಡಿಕೊಳ್ಳಲಾಗಿದೆ.

**
ಬೇಸಾಯಗಾರರು ಉತ್ತು, ಬಿತ್ತಿ ಉತ್ತಮ ಫಲ ಪಡೆದ ಸಂದರ್ಭದಲ್ಲಿ ಭೂತಾಯಿಗೆ ನಮನಗಳನ್ನು ಸಲ್ಲಿಸುವ ಉದ್ದೇಶವನ್ನು ಈ ಸಂಪ್ರದಾಯದಲ್ಲಿದೆ. ಅತ್ತೆಯಾದವಳು ಸೊಸೆಗೆ ತನ್ನತ್ತೆಯಿಂದ ಪಡೆದಿದ್ದಂತೆ, ತನ್ನ ಸೊಸೆಗೆ ದೀಪವನ್ನು ಕೊಡುತ್ತಾ ಮನೆ ಹಾಗೂ ಮನದೊಳಗೆ ಬರಮಾಡಿಕೊಳ್ಳುವುದು “ಹೊಸದ್ಯಾವರ” ಆಚರಣೆಯಿಂದಲೇ ಆರಂಭವಾಗುತ್ತದೆ. ಹೊಚ್ಚಹೊಸ ಮಡಕೆ, ದೀಪ, ಅರಿವೆಗಳನ್ನು ಅದಕ್ಕಾಗಿಯೇ ನಾವು ಕೊಳ್ಳುತ್ತೇವೆ.
-ಶಾರದಮ್ಮ, ಕೆಂಪಮ್ಮ, ರತ್ನಮ್ಮ, ಅಪ್ಪೇಗೌಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT