ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಕೊರತೆಗೆ ನರಳುತ್ತಿರುವ ಆಸ್ಪತ್ರೆ!

ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ 57 ಹುದ್ದೆಗಳು ಖಾಲಿ, ವೈದ್ಯರಿಗೆ ಕೆಲಸ ಒತ್ತಡ ಹೆಚ್ಚಿಸಿದ ಕೊರೊನಾ ಭೀತಿ
Last Updated 6 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಬಾಗೇಪಲ್ಲಿ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಗೆ ಬೇಕಾದ ಎಲ್ಲ ಮೂಲಸೌಕರ್ಯಗಳಿವೆ. ಆದರೆ ವೈದ್ಯರು, ಶುಶ್ರೂಷಕಿಯರ ಕೊರತೆಯಿಂದಾಗಿ ಸರಿಯಾಗಿ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುವಂತಾಗಿದೆ.

ಪಟ್ಟಣದ ಮುಖ್ಯರಸ್ತೆಯಲ್ಲಿನ ಹೃದಯಭಾಗದಲ್ಲಿ ವಿಶಾಲವಾದ ಪ್ರದೇಶದಲ್ಲಿರುವ 100 ಹಾಸಿಗೆಗಳ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಘಟಕ, ಮೂರು ಹಾಸಿಗೆಗಳ ತುರ್ತು ನಿಗಾ ಘಟಕ, ಎರಡು ವೆಂಟಿಲೇಟರ್‌ಗಳ ಸೌಲಭ್ಯವಿದೆ. ದಿನದ 24 ಗಂಟೆಯೂ ತುರ್ತು ಚಿಕಿತ್ಸಾ ವಿಭಾಗ ಸೇವೆಗೆ ಸಜ್ಜಾಗಿರುತ್ತದೆ.

ತಾಲ್ಲೂಕಿನ ಕೇಂದ್ರ ಸ್ಥಾನದಲ್ಲಿರುವ ಈ ಆಸ್ಪತ್ರೆಗೆ ಗ್ರಾಮೀಣ ಪ್ರದೇಶಗಳಿಂದಲೂ ಹಳ್ಳಿಯ ಜನರು ಚಿಕಿತ್ಸೆಗಾಗಿ ಬರುತ್ತಾರೆ. ಆದರೆ, ಆಸ್ಪತ್ರೆಯಲ್ಲಿ 83 ಜನರ ಜಾಗದಲ್ಲಿ ಕೇವಲ 26 ಸಿಬ್ಬಮದಿ ಕಾರ್ಯ ನಿರ್ವಹಿಸುತ್ತಿದ್ದು, 57 ಹುದ್ದೆಗಳು ಖಾಲಿ ಇವೆ. ಈ ಕೊರತೆ ಸಮರ್ಪಕ ಸೇವೆಗೆ ಅಡಚಣೆಯಾಗಿದೆ.

ಸದ್ಯ ಆಸ್ಪತ್ರೆಯಲ್ಲಿ ಡಯಾಲಿಸ್, ತುರ್ತು ಚಿಕಿತ್ಸಾ ಘಟಕ, ಹಾಗೂ ಐಸಿಯು ನಿರ್ವಹಿಸಲು ತಜ್ಞ ಸಿಬ್ಬಂದಿಯ ಕೊರತೆ ರೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ. ತಾಲ್ಲೂಕಿನಲ್ಲಿ ಅಧಿಕವಾಗಿ ಪ್ಲೋರೈಡ್ ಸಮಸ್ಯೆ ಇದ್ದು, ಕೈ-ಕಾಲುಗಳು, ಸೊಂಟ, ಮೈ ನೋವುಗಳಿಂದ ಬಳಲುತ್ತಿರುವ ಜನರು ಚಿಕಿತ್ಸೆ ಅಲೆದಾಡುವ ಸ್ಥಿತಿ ಉಂಟಾಗುತ್ತಿದೆ.

ಸದ್ಯ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಗೆ ಮುಖ್ಯವೈದ್ಯಾಧಿಕಾರಿ, ಫಿಜಿಷಿಯನ್, ಜನರಲ್ ಸರ್ಜನ್, ಚರ್ಮರೋಗ ತಜ್ಞ, ರೇಡಿಯಾಲಜಿಸ್ಟ್, ಕ್ಷ-ಕಿರಣ ತಂತ್ರಜ್ಞ, ಫಾರ್ಮಾಸಿಸ್ಟ್‌ಗಳು,ಶುಶ್ರೂಷಕಿಯರ ಕೊರತೆ ಒಂದೆಡೆಯಾದರೆ, ಆಡಳಿತಾತ್ಮಕವಾಗಿಯೂ ಸಹಾಯಕ ಆಡಳಿತಾಧಿಕಾರಿ, ಕಚೇರಿ ಅಧೀಕ್ಷಕರು, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರು, ಕ್ಲರ್ಕ್‌, ‘ಡಿ’ ದರ್ಜೆ ನೌಕರರ ಹುದ್ದೆಗಳು ಸೇರಿ ಒಟ್ಟು 57 ಹುದ್ದೆಗಳು ಖಾಲಿ ಇವೆ.

ತೀರಾ ಹಿಂದುಳಿದ ಗಡಿಭಾಗದ ತಾಲ್ಲೂಕಿನಲ್ಲಿ ಆರೋಗ್ಯ ಸೇವೆ ಜಿಲ್ಲಾಡಳಿತಕ್ಕೆ ಆದ್ಯತೆಯಾಗಬೇಕಿತ್ತು. ಆದರೆ, ಆಸ್ಪತ್ರೆಯ ಸ್ಥಿತಿ ನೋಡಿದರೆ ಹಾಗೇ ಆದಂತಿಲ್ಲ ಎನಿಸುತ್ತದೆ. ಸಿಬ್ಬಂದಿ ಕೊರತೆಯಿಂದಾಗಿ ಆಸ್ಪತ್ರೆಯಲ್ಲಿರುವ ಮೂಲಸೌಕರ್ಯಗಳು ಧೂಳು ತಿನ್ನುತ್ತಿವೆ. ಇನ್ನಾದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಉತ್ತಮ ಆರೋಗ್ಯ ಸೇವೆಗೆ ಒತ್ತು ನೀಡಬೇಕು ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT