ಮಂಗಳವಾರ, ಡಿಸೆಂಬರ್ 7, 2021
24 °C
ಜಿಲ್ಲೆಯಲ್ಲಿ ವ್ಯಾಪಕ ಮಳೆ: ಕೋಡಿ ಹರಿದ ರಂಗಧಾಮ ಕೆರೆ

ಚಿಕ್ಕಬಳ್ಳಾಪುರ: 3 ದಶಕಗಳಲ್ಲೇ ಅಧಿಕ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶನಿವಾರ ನಡುರಾತ್ರಿಯಿಂದ ಭಾನುವಾರ ಬೆಳಗಿನ ಜಾವದವರೆಗೆ ಸುರಿದ ಮಳೆಗೆ ಜಲಾಶಯಗಳು, ಕೆರೆ–ಕಟ್ಟೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು ಕೋಡಿ ಹರಿಯುತ್ತಿವೆ. ಇದು ಕಳೆದ ಮೂರು ದಶಕಗಳಲ್ಲಿಯೇ ಅತ್ಯಧಿಕ ಮಳೆಯಾಗಿದೆ.

ರಂಗಧಾಮ ಕೆರೆ ಕೋಡಿ ಹರಿದ ಪರಿಣಾಮ ಚಿಕ್ಕಬಳ್ಳಾಪುರ ನಗರದ ಪ್ರತಿಷ್ಠಿತ ಡಿವೈನ್ ಸಿಟಿ ಬಡಾವಣೆಯು ಜಲಾವೃತವಾಗಿದೆ. ಮನೆಗಳ ಆವರಣ, ಬಡಾವಣೆಯ ರಸ್ತೆಗಳಲ್ಲಿ ನೀರು ನಿಂತಿದೆ. ಬಡಾವಣೆ ಪ್ರವೇಶಿಸುವ ಹಾದಿ ಸಂಪೂರ್ಣವಾಗಿ ಕಿತ್ತು ಹೋಗಿದ್ದು ದೊಡ್ಡ ಕಂದಕ ಸೃಷ್ಟಿಯಾಗಿದೆ. ಡಿವೈನ್ ಸಿಟಿಯಿಂದ ಕಣಜೇನಹಳ್ಳಿಯವರೆಗಿನ ಒಂದೂವರೆ ಕಿ.ಮೀ ಉದ್ದದ ರಸ್ತೆಯಲ್ಲಿ ನೀರು ಹಳ್ಳದಂತೆ ಹರಿಯುತ್ತಿದೆ. ಸುತ್ತಮುತ್ತಲ ಹಳ್ಳಿಗಳ ಜನರು ಡಿವೈನ್ ಸಿಟಿಗೆ ನುಗ್ಗಿದ ನೀರನ್ನು ನೋಡಲು ಬಂದಿದ್ದರು.

ಜಿಲ್ಲೆಯ ಬಹಳಷ್ಟು ಕಡೆಗಳಲ್ಲಿ ಹೊಲ, ತೋಟ‌ಗಳಿಗೆ ನೀರು ನುಗ್ಗಿದೆ. ರಾಗಿ, ಶೇಂಗಾ, ಮುಸುಕಿನ ಜೋಳದ ಬೆಳೆಗಳಿಗೆ ಹಾನಿಯಾಗಿದೆ. ಗೌರಿಬಿದನೂರು ತಾಲ್ಲೂಕಿನಲ್ಲಿ ಉತ್ತರ ಪಿನಾಕಿನಿ ನದಿ ಮತ್ತೆ ಉಕ್ಕಿ ಹರಿಯುತ್ತಿದೆ.

18 ವರ್ಷಗಳ ನಂತರ ಗುಡಿಬಂಡೆ ತಾಲ್ಲೂಕಿನ ರಾಮಪ್ಪನ ಕೆರೆ ತುಂಬಿದೆ. ಹತ್ತು ದಿನಗಳಿಂದ ಅಮಾನಿ ಬೈರಸಾಗರ ಕೆರೆ ಕೋಡಿ ಹರಿಯುತ್ತಿದೆ. ಕೋಡಿ ನೀರಿನಲ್ಲಿ ಭಾನುವಾರ ಆಂಬುಲೆನ್ಸ್ ಸಿಲುಕಿದ್ದು ‌ಜನರು ತಳ್ಳಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಗೇಪಲ್ಲಿ, ಚಿಂತಾಮಣಿ ತಾಲ್ಲೂಕುಗಳಲ್ಲಿಯೂ ಕೆರೆಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.

ಭಾರಿ ಮಳೆ ಸಹಜವಾಗಿ ಜನರ ಸಂತಸಕ್ಕೆ ಕಾರಣವಾಗಿದೆ. ಮತ್ತೊಂದು ಕಡೆ ಹಾನಿ ಸಂಭವಿಸಿದೆ. ಕಳೆದ ವಾರ ಸುರಿದ ಮಳೆಗೆ 1,800 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದ್ದು ಈಗ ಹಾನಿ ಪ್ರಮಾಣ ಮತ್ತಷ್ಟು ಹೆಚ್ಚಲಿದೆ. ಈಗಾಗಲೇ ಮಳೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ಐದು ಕೆರೆಗಳು ಒಡೆದಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು