ಶನಿವಾರ, ಡಿಸೆಂಬರ್ 4, 2021
20 °C

ಒಳಮೀಸಲಾತಿ ಜಾರಿಯಾಗದಿದ್ದರೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಯಾಗಬೇಕು. ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಬಿ.ನರಸಪ್ಪ ತಿಳಿಸಿದರು.

ತಾಲ್ಲೂಕಿನ ಕೈವಾರದಲ್ಲಿ ಗುರುವಾರ ಆಯೋಜಿಸಿದ್ದ ಮಾದಿಗ ಮೀಸಲಾತಿ ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿದರು.

ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಮಾದಿಗ ಸಮುದಾಯಕ್ಕೆ ಸಂವಿಧಾನ ಬದ್ಧವಾಗಿ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಕಲ್ಪಿಸಬೇಕು. ಈ ಬಗ್ಗೆ ಹಲವು ವರ್ಷಗಳಿಂದ ಹೋರಾಟಗಳು ನಡೆಯುತ್ತಿವೆ. ಆದರೂ ಆಡಳಿತ ನಡೆಸಿರುವ ಎಲ್ಲ ಪಕ್ಷಗಳು ಮೀಸಲಾತಿ ನೀತಿಯನ್ನು ಜಾರಿಗೆ ತರದೆ ಮಾದಿಗ ಸಮುದಾಯವನ್ನು ವಂಚಿಸಿವೆ ಎಂದು ಆರೋಪಿಸಿದರು.

ಸದಾಶಿವ ಆಯೋಗದ ವರದಿಯನ್ನು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆದು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಾದಿಗ ದಂಡೋರ ಸಮಿತಿಯಿಂದ ರಾಜ್ಯವ್ಯಾಪ್ತಿ ಹೋರಾಟ ನಡೆಸಲಾಗುವುದು ಎಂದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಬಿ.ನರಸಿಂಹ ಮಾತನಾಡಿ, ಮಾದಿಗರಿಗೆ ಒಳಮೀಸಲಾತಿ ಕಲ್ಪಿಸುವುದರಿಂದ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗುವುದಿಲ್ಲ. ಒಳ ಮೀಸಲಾತಿ ಕಲ್ಪಿಸದೆ ಹೋದರೆ ಮಾದಿಗ ಸಮುದಾಯಕ್ಕೆ ದೊಡ್ಡ ಪ್ರಮಾಣದಲ್ಲಿ ಮೋಸ ಆಗುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸುವುದು ಸಂವಿಧಾನದ ಮೂಲ ಆಶಯವಾಗಿದೆ ಎಂದು ನುಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜ್ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿ.ರಾಮಪ್ಪ, ರಾಜ್ಯ ಉಪಾಧ್ಯಕ್ಷ ಎಂ.ಸಿ.ಶ್ರೀನಿವಾಸ್, ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್, ರಾಜ್ಯ ವಕ್ತಾರ ವೆಂಕಟೇಶ್ ಕತ್ತಿ, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಧನಲಕ್ಷ್ಮಿ, ಮುಖಂಡರಾದ ಎಸ್.ರಾಮಕೃಷ್ಣ, ಪ್ರದೀಪ್ ಹೆಗ್ಗಡೆ, ಚಂದ್ರಪ್ಪ, ಮಂಜುನಾಥ್, ನರಸಿಂಹ, ಶ್ಯಾಮರಾಜ್, ಪಿ.ಎಂ.ನರಸಿಂಹಯ್ಯ, ಕೃಷ್ಣಪ್ಪ, ಆಟೊ ಕೃಷ್ಣ, ನರಸಿಂಹಪ್ಪ, ಸಿ.ದಾಸ್ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.