ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯತ್ತ ತಲೆ ಹಾಕದ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ್

ಜಿಲ್ಲೆಯನ್ನೇ ಮರೆತ ಜಿಲ್ಲಾ ಹಂಗಾಮಿ ಉಸ್ತುವಾರಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ್, ಕಳೆದ ಆರೂವರೆ ತಿಂಗಳಲ್ಲಿ ನಡೆಸಿದ್ದು ಒಂದೇ ಒಂದು ಸಭೆ!
Last Updated 31 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸತತ ಬರಗಾಲ, ಕುಡಿಯುವ ನೀರಿನ ತೀವ್ರ ಸಮಸ್ಯೆಯ ನಡುವೆಯೇ ಗಾಯದ ಮೇಲೆ ಬರೆ ಎಳೆದಂತೆ ಕಾಣಿಸಿಕೊಂಡ ಕೋವಿಡ್ 19 ಹಾವಳಿಯಿಂದ ಜಿಲ್ಲೆಯ ಜನ ತತ್ತರಿಸಿದರೂ ಜಿಲ್ಲೆಯ ಉಸ್ತುವಾರಿಕೆ ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಜಿಲ್ಲೆಯತ್ತ ತಲೆ ಹಾಕದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಯವರು, ಕೃಷಿ ಸಚಿವರೂ ಆಗಿದ್ದ ಎನ್.ಎಚ್‌.ಶಿವಶಂಕರರೆಡ್ಡಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಗಾಗ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ ಜನರು ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡುವ ಜತೆಗೆ ಪ್ರಗತಿ ಪರಿಶೀಲನೆ ನಡೆಸುವ ಜತೆಗೆ ಅಭಿವೃದ್ಧಿಯ ವಿಚಾರದಲ್ಲಿ ಆಸಕ್ತಿ ತಳೆಯುತ್ತಿದ್ದರು. ಅಂತಹ ಬದ್ಧತೆ ಅಶ್ವತ್ಥನಾರಾಯಣ್ ಅವರಲ್ಲಿ ಕಾಣುತ್ತಿಲ್ಲ ಎನ್ನುವುದು ಪ್ರಜ್ಞಾವಂತರ ದೂರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಪತನದ ಬೆನ್ನಲ್ಲೇ ಕಳೆದ ಜುಲೈನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೆಪ್ಟೆಂಬರ್‌ನಲ್ಲಿ ಅಶ್ವತ್ಥನಾರಾಯಣ್ ಅವರನ್ನು ರಾಮನಗರ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡುವ ಜತೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಹೆಚ್ಚುವರಿ ಹೊಣೆಗಾರಿಕೆಯನ್ನೂ ವಹಿಸಿದ್ದರು.

ಈ ಕಳೆದ ಆರೂವರೆ ತಿಂಗಳಲ್ಲಿ ಜಿಲ್ಲೆಯ ಜನರು ಹಲವು ಸಂಕಟಗಳನ್ನು ಹಾಯ್ದು ಬಂದಿದ್ದಾರೆ. ಆದರೂ, ಉಸ್ತುವಾರಿ ಹೊತ್ತ ಸಚಿವರು ಒಂದೇ ಒಂದು ಬಾರಿ ಜಿಲ್ಲೆಯ ಜನಸಾಮಾನ್ಯರು, ರೈತರ ಕಷ್ಟಗಳನ್ನು ಆಲಿಸುವ ಕೆಲಸ ಮಾಡುವ ಮೂಲಕ ತಮಗೆ ವಹಿಸುವ ಜವಾಬ್ದಾರಿಗೆ ನ್ಯಾಯ ಸಲ್ಲಿಸುವ ಕೆಲಸ ಮಾಡಿಲ್ಲ ಎನ್ನುವ ಆರೋಪ ಸಾರ್ವತ್ರಿಕವಾಗಿದೆ.

ಅಶ್ವತ್ಥನಾರಾಯಣ ಅವರು ಜಿಲ್ಲೆಯ ಉಸ್ತುವಾರಿ ಹೊಣೆಗಾರಿಕೆ ತೆಗೆದುಕೊಂಡ ಬಳಿಕ ಸೆ.29 ರಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ಅಕ್ಟೋಬರ್ 28 ರಂದು ಒಂದೇ ಒಂದು ಬಾರಿ ಜಿಲ್ಲಾಡಳಿತ ಭವನಕ್ಕೆ ಭೇಟಿ ನೀಡಿ ಉಸ್ತುವಾರಿ ಸಚಿವರ ಕೊಠಡಿ ಉದ್ಘಾಟಿಸುವ ಜತೆಗೆ ಅಧಿಕಾರಿಗಳೊಂದಿಗೆ ಸಭೆಯ ‘ಶಾಸ್ತ್ರ’ ಮುಗಿಸಿ ತರಾತುರಿಯಲ್ಲಿಯೇ ವಾಪಾಸಾಗಿದ್ದರು.

ಅದರ ನಂತರ ನವೆಂಬರ್‌ 8 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರೊಂದಿಗೆ ಭಾಗವಹಿಸಿ ವೇದಿಕೆ ಕಾರ್ಯಕ್ರಮಕ್ಕೆ ಮಾತ್ರ ಸೀಮಿತರಾಗಿ ಜಿಲ್ಲೆಗೆ ಬಂದಿದ್ದರು. ಇನ್ನುಳಿದಂತೆ ಈವರೆಗೆ ಯಾವೊಂದು ರಾಷ್ಟ್ರೀಯ ಹಬ್ಬಗಳು, ಜಯಂತಿ ಕಾರ್ಯಕ್ರಮದಲ್ಲೂ ಸಚಿವರು ಕಾಣಿಸಿಕೊಂಡಿಲ್ಲ. ಅವರು ಹೆಸರು ಆಹ್ವಾನ ಪತ್ರಿಕೆಗೆ ಮಾತ್ರ ಸೀಮಿತವಾಗಿದೆ.

ಮೊದಲಿನಿಂದಲೂ ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರವಿದೆ. ರೈತರು, ಹೂವು, ಹಣ್ಣು ಬೆಳೆಗಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳು ಕುಂಟುತ್ತ ಸಾಗಿವೆ. ಇಷ್ಟಾದರೂ ಸಮೀಪದ ರಾಜಧಾನಿಯಲ್ಲಿರುವ ಉಸ್ತುವಾರಿ ಸಚಿವರಿಗೆ ಜಿಲ್ಲೆಗೆ ಭೇಟಿ ನೀಡಿ ಜನರ ನೋವು ಆಲಿಸುವಷ್ಟು ಪುರುಸೊತ್ತು ಇಲ್ಲದಿರುವುದು ಜನರ ಬಾಯಿಗೆ ಇದೀಗ ಆಹಾರವಾಗುತ್ತಿದೆ.

ಮೈತ್ರಿ ಸರ್ಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪ ಚುನಾವಣೆಯಲ್ಲಿ ಪುನಃ ಆಯ್ಕೆಯಾದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರೂ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಜಿಲ್ಲೆಯ ಉಸ್ತುವಾರಿ ಸಿಗಲಿದೆ ಎಂಬ ಮಾತುಗಳು ಕೆಲ ತಿಂಗಳುಗಳಿಂದ ಕೇಳಿ ಬಂದವಾದರೂ, ಬದಲಾವಣೆ ಮಾತ್ರ ಆಗಲಿಲ್ಲ. ಜತೆಗೆ, ಪರಿಸ್ಥಿತಿಯೂ ಬದಲಾಗುತ್ತಿಲ್ಲ ಎಂಬ ಅಳಲು ನಿರಂತರವಾಗಿದೆ.

ಇತ್ತೀಚೆಗೆ ಜಿಲ್ಲೆಯ ಗೌರಿಬಿದನೂರಿನಲ್ಲಿ ಕೋವಿಡ್ 19 ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದಂತೆ, ಜಿಲ್ಲಾಧಿಕಾರಿ ಅವರ ಜತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಉಸ್ತುವಾರಿ ಸಚಿವರು, ಈವರೆಗೆ ಜಿಲ್ಲೆಗೆ ಬಂದು ಜನರಲ್ಲಿ ಆತ್ಮಸ್ಥೈರ್ಯ ತುಂಬುವ, ಅಧಿಕಾರಿಗಳ ಕಾರ್ಯ ವೈಖರಿ ಪರಿಶೀಲಿಸುವ ಕೆಲಸ ಮಾಡಿಲ್ಲ.

‘ಆಡಳಿತ ಯಂತ್ರದಲ್ಲಿ ಚುರುಕು ಕಾಣಿಸಿಕೊಳ್ಳಬೇಕಾದರೆ, ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳು ತ್ವರಿತಗತಿಯಲ್ಲಿ ಅನುಷ್ಠಾನಗೊಳ್ಳಬೇಕಾದರೆ ಯಡಿಯೂರಪ್ಪ ಅವರು ಮೊದಲು ನಮ್ಮ ಉಸ್ತುವಾರಿ ಸಚಿವರನ್ನು ಬದಲಿಸಬೇಕು. ಒಂದೊಮ್ಮೆ ಹಾಗೇ ಮಾಡದಿದ್ದರೆ ಸಚಿವರೇ ತಮ್ಮ ಹೊಣೆಗಾರಿಕೆಗೆ ನಿಭಾಯಿಸಲಾಗುತ್ತಿಲ್ಲ ಎಂದು ಹೇಳಿ ಗೌರವಯುತವಾಗಿ ಆ ಹೊಣೆಯನ್ನು ಬೇರೊಬ್ಬರಿಗೆ ವರ್ಗಾಯಿಸಬೇಕು’ ಎಂದು ಗೌರಿಬಿದನೂರು ನಿವಾಸಿ ಹನುಮಂತರೆಡ್ಡಿ ಆಗ್ರಹಿಸಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಉಸ್ತುವಾರಿ ಸಚಿವರನ್ನು ಸಂಪರ್ಕಿಸಿದರೆ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT