ಬುಧವಾರ, ಆಗಸ್ಟ್ 4, 2021
21 °C
ಮಹಾರಾಷ್ಟದಿಂದ ವಾಪಾಸಾದ ಕಾರ್ಮಿಕರಲ್ಲಿ ಮತ್ತೆ ಐದು ಜನರಲ್ಲಿ ಸೋಂಕು ಪತ್ತೆ, ಸೋಂಕಿತರ ಸಂಖ್ಯೆ 141ಕ್ಕೆ ಏರಿಕೆ

ಚಿಕ್ಕಬಳ್ಳಾಪುರ | ಜಿಲ್ಲೆಯಲ್ಲಿ ನಿಲ್ಲದ ಕೋವಿಡ್‌ ನರ್ತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಜಿಲ್ಲೆಗೆ ಇತ್ತೀಚೆಗೆ ಮಹಾರಾಷ್ಟ್ರದಿಂದ ವಾಪಾಸಾಗಿರುವ ಕಾರ್ಮಿಕರ ಪೈಕಿ ಮತ್ತೆ ಐದು ಮಂದಿಯಲ್ಲಿ ಕೋವಿಡ್‌ 19 ಇರುವುದು ಸೋಮವಾರ ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ.

ಜಿಲ್ಲೆಗೆ ಮುಂಬೈನಿಂದ ವಾಪಾಸಾಗಿರುವ 316 ಕಾರ್ಮಿಕರ ಪೈಕಿ ಇತ್ತೀಚೆಗೆ 103 ಜನರಲ್ಲಿ ಕೋವಿಡ್‌ ಇರುವುದು ಪತ್ತೆಯಾಗಿತ್ತು. ಉಳಿದವರ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿ ನೆಗೆಟಿವ್‌ ಆಗಿದ್ದವು. ಇದೀಗ ನೆಗೆಟಿವ್‌ ವರದಿ ಹೊಂದಿದವರಲ್ಲೇ ಸೋಮವಾರ ಗೌರಿಬಿದನೂರು ತಾಲ್ಲೂಕಿನ ಐದು ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.

ಭಾನುವಾರವಷ್ಟೇ ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾಗಿದ್ದ 17 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಸೋಮವಾರ ಕೂಡ 16 ಜನರು ಗುಣಮುಖರಾಗಿ ಕೋವಿಡ್‌ ವಾರ್ಡ್‌ನಿಂದ ಬಿಡುಗಡೆ ಹೊಂದಿದರು.

ಜಿಲ್ಲೆಯಲ್ಲಿ ಈವರೆಗೆ ವಿವಿಧ ತಾಲ್ಲೂಕುಗಳಲ್ಲಿ 33 ಪ್ರಕರಣಗಳು ವರದಿಯಾಗಿದ್ದು ಜತೆಗೆ ಮಹಾರಾಷ್ಟ್ರದಿಂದ ವಾಪಾಸಾದವರ ಪೈಕಿ 108 ಮಂದಿಯಲ್ಲಿ ಸೋಂಕು ಪತ್ತೆಯಾಗಿ ಸೋಂಕಿತರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ.

ಈವರೆಗೆ ಜಿಲ್ಲೆಯಲ್ಲಿ 10,424 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಆ ಪೈಕಿ 9,441 ಮಂದಿಯಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ. ಇನ್ನುಳಿದಂತೆ ಗೌರಿಬಿದನೂರಿನ 76, ಬಾಗೇಪಲ್ಲಿಯ 48, ಚಿಕ್ಕಬಳ್ಳಾಪುರದ 11 ಮತ್ತು ಚಿಂತಾಮಣಿಯ 6 ಜನರಲ್ಲಿ ಕೋವಿಡ್ ಇರುವುದು ದೃಢಪಟ್ಟಿದೆ.

ಸೋಂಕಿತರ ಪೈಕಿ ಚಿಕ್ಕಬಳ್ಳಾಪುರದ ಇಬ್ಬರು, ಗೌರಿಬಿದನೂರಿನ ಒಬ್ಬರು ಮೃತಪಟ್ಟಿದ್ದಾರೆ. 53 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ 85 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು