ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಎಲ್ಲೆಡೆ ಸ್ವಾತಂತ್ರ್ಯ ಸಂಭ್ರಮ

ಮತಾಂಧರಿಂದ ರಕ್ತಪಾತ: ಗೃಹ ಸಚಿವ ಆರಗ ಜ್ಞಾನೇಂದ್ರ ಆತಂಕ
Last Updated 16 ಆಗಸ್ಟ್ 2022, 5:00 IST
ಅಕ್ಷರ ಗಾತ್ರ

ತುಮಕೂರು: ನಮ್ಮ ರಾಷ್ಟ್ರದ ವಿರುದ್ಧ ಮತಾಂಧ ಶಕ್ತಿಗಳು ಕೆಲಸ ಮಾಡುತ್ತಿದ್ದು, ದೇಶದಲ್ಲಿ ರಕ್ತಪಾತ ಮಾಡಿಸುತ್ತಿವೆ ಎಂದು ಗೃಹ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಆತಂಕ ವ್ಯಕ್ತಪಡಿಸಿದರು.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ಅಮೃತ ಮಹೋತ್ಸವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು. ಹೊರಗಿನ ಶಕ್ತಿಗಳು ನಮ್ಮ ಯುವಕರನ್ನು ಎತ್ತಿಕಟ್ಟುತ್ತಿದ್ದು, ಅದಕ್ಕೆ ಮತಾಂಧ ಶಕ್ತಿಗಳು ಕೈಜೋಡಿಸಿವೆ. ಇದರಿಂದಾಗಿ ರಕ್ತಪಾತವಾಗುತ್ತಿದೆ
ಎಂದರು.

ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಸುಡುವಂತೆ ಬಾಂಬುಗಳು ಸಿಡಿಯುತ್ತಿದ್ದವು. ಈಗ ಇದಕ್ಕೆಲ್ಲ ಕಡಿವಾಣ ಬಿದ್ದಿದೆ. ಈಗ ಬಾಂಬುಗಳ ಬದಲು ಮಾದಕ ವಸ್ತುಗಳನ್ನು ವಿದೇಶದಿಂದ ಸರಬರಾಜು ಮಾಡಲಾಗುತ್ತಿದೆ. ಯುದ್ಧ ಇಲ್ಲದೆ ಜನರನ್ನು ಕೊಲ್ಲುವ ಕೆಲಸ ನಡೆದಿದೆ. ಈ ಬಗ್ಗೆ ಯುವಜನರು ಎಚ್ಚರಿಕೆಯಿಂದ ಇರಬೇಕು ಎಂದುಸಲಹೆ ಮಾಡಿದರು.

ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಿದ ವೀರ ಸಾವರ್ಕರ್ ಜೈಲು ಶಿಕ್ಷೆ ಅನುಭವಿಸಿದರು. ಈಗ ಯಾರು ಬೇಕಾದರೂ, ಯಾರ ಬಗ್ಗೆಯೂ ಟೀಕೆ ಮಾಡುತ್ತಾರೆ. ಅದೇ ರೀತಿ ಸಾವರ್ಕರ್ ವಿರುದ್ಧವೂ ಟೀಕೆ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಪ್ರಮುಖವಾಗಿ ಸಾವರ್ಕರ್ ಅವರನ್ನು ಸಚಿವರು ನೆನಪು
ಮಾಡಿಕೊಂಡರು.

ಸ್ವಾತಂತ್ರ್ಯ ಬಂದ ಸಮಯದಲ್ಲಿ ದೇಶವನ್ನು ಇಬ್ಭಾಗ ಮಾಡಲಾಯಿತು. ಅದಕ್ಕೆ ಮಹಾತ್ಮ ಗಾಂಧೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ‘ನನ್ನ ದೇಹ ತುಂಡುಮಾಡಿ. ದೇಶವನ್ನು ತುಂಡು ಮಾಡಬೇಡಿ’ ಎಂದು ಗಾಂಧೀಜಿ ನಿಂತಿದ್ದರು. ಈ ಸಮಯದಲ್ಲಿ ನಡೆದ ಘರ್ಷಣೆಯಿಂದ ಸಾವಿರಾರು ಜನರು ಸಾವನ್ನಪ್ಪಿದರು.ಆಗ ಅವರ ಮಾತಿಗೆ ಕಿಮ್ಮತ್ತು ಸಿಗಲಿಲ್ಲಎಂದರು.

ಮುಂದಿನ 25 ವರ್ಷ ಕಳೆದರೆ ದೇಶ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಿಕೊಳ್ಳಲಿದೆ. ಆ ವೇಳೆಗೆ ದೇಶವನ್ನು ಆಕಾಶದ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಈಗಲೇ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ಇದರಿಂದ ರಾಷ್ಟ್ರ ಮತ್ತಷ್ಟು ಪ್ರಗತಿ ಸಾಧಿಸಲಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪು ಮಾಡಿಕೊಂಡು ಅವರ ಕನಸಿನ ಭಾರತ
ಕಟ್ಟುತ್ತಿದ್ದೇವೆಯೆ? ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಸ್ವಾತಂತ್ರ್ಯ ತಂದುಕೊಟ್ಟವರ ಆತ್ಮಗಳು ಕಣ್ಣೀರು ಹಾಕಬಾರದು. ಸಂತೋಷ ಪಡುವಂತೆ ನಡೆದುಕೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುತ್ತಲೇ ಈವರೆಗೆ ದೇಶದ ಸಾಧನೆಯನ್ನು ಸ್ಮರಿಸಿದರು. ಹಸಿವು, ಕಿತ್ತು ತಿನ್ನುವ ಬಡತನವನ್ನು ದಾಟಿ ಬಂದದ್ದು, ತಲಾ ಆದಾಯದಲ್ಲಿ ಏರಿಕೆ, ಪ್ರಧಾನಿ ನರೇಂದ್ರ ಮೋದಿ ಏಕ ವ್ಯಕ್ತಿಯಾಗಿ ಕೆಲಸ ಮಾಡುತ್ತಿರುವುದನ್ನು ಸ್ಮರಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಮೇಯರ್ ಬಿ.ಜಿ.ಕೃಷ್ಣಪ್ಪ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಎಸ್ಪಿ ಆರ್.ಕೆ.ಶಹಾಪೂರವಾಡ್, ಜಿ.ಪಂ ಸಿಇಒ ಕೆ.ವಿದ್ಯಾಕುಮಾರಿ ಉಪಸ್ಥಿತರಿದ್ದರು.

ಭಗವಾಧ್ವಜ ಹಾರಾಟ: ಸಮರ್ಥನೆ

ತುಮಕೂರು: ತಿಪಟೂರಿನಲ್ಲಿ ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ನಡೆದ ಮೆರವಣಿಗೆ ಸಮಯದಲ್ಲಿರಾಷ್ಟ್ರ ಧ್ವಜಕ್ಕಿಂತ ಎತ್ತರದಲ್ಲಿ ಭಗವಾಧ್ವಜ ಹಾರಿಸಿದ್ದನ್ನು ಸಚಿವ ಆರಗ ಜ್ಞಾನೇಂದ್ರ ಸಮರ್ಥಿಸಿಕೊಂಡರು.

ಈ ಬಗ್ಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದಾರೆ. ಆದರೆ ದೂರು ದಾಖಲಾಗಿಲ್ಲ. ನಾಗೇಶ್ ಅವರಿಗೆ ರಾಷ್ಟ್ರಧ್ವಜದ ಬಗ್ಗೆ ಗೌರವವಿದೆ. ಆ ರೀತಿ ಮಾಡುವವರಲ್ಲ ಎಂದರು. ‘ರಾಷ್ಟ್ರ ಧ್ವಜಕ್ಕಿಂತ ಎತ್ತರದಲ್ಲಿ ಭಗವಾ ಧ್ವಜ ಹಾರಿಸಿದ್ದು ಸರಿಯೊ, ತಪ್ಪೊ’ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಿಲ್ಲ. ‘ನನಗೆ ಹೆಚ್ಚಿನ ಮಾಹಿತಿ ಇಲ್ಲ’ ಎಂದು ನುಣುಚಿಕೊಂಡರು.

‘ಸರ್ಕಾರ ನಡಿತಿಲ್ಲ’ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆಗೂ ಪ್ರತಿಕ್ರಿಯೆ ನೀಡಲಿಲ್ಲ. ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದರು. ಜಿಲ್ಲಾ ಉಸ್ತುವಾರಿ ಬದಲಾದ ನಂತರ ಮಾಧುಸ್ವಾಮಿ ತಮ್ಮ ಜತೆಗೆ ಬರುತ್ತಿಲ್ಲ ಎಂಬ ಪ್ರಶ್ನೆಗೆ ‘ಪದೇಪದೇ ಕರೆದಿದ್ದೇನೆ. ಆದರೂ
ಅವರು ಬರುತ್ತಿಲ್ಲ’ ಎಂದರು.

ಅಮೃತ ಮಹೋತ್ಸವಕ್ಕೆ ಸಾಂಸ್ಕೃತಿಕ ಮೆರುಗು: ತುಮಕೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಮೆರುಗುನೀಡಿತು. ಎರಡು ವರ್ಷಗಳ ನಂತರ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ನೃತ್ಯ ಪ್ರದರ್ಶಿಸಿ ಖುಷಿಪಟ್ಟರು.

ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿ ನೃತ್ಯ ಪ್ರದರ್ಶಿಸಿದರು. ದೇಶ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು. ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದ, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಅಬ್ದುಲ್‌ ಕಲಾಂ ಸೇರಿದಂತೆ ಅನೇಕ ಮಹನೀಯರವೇಷ ಧರಿಸಿ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿದ್ದರು. ಭಾರತ್‌ ಮಾತಾಕಿ ಜೈ, ವಂದೇ ಮಾತರಂ, ಜೈ ಜವಾನ್‌ ಜೈ ಕಿಸಾನ್‌ ಘೋಷಣೆಗಳು ಮೊಳಗಿದವು.

ಗಾಂಧಿನಗರದ ಸೇಂಟ್ ಮೇರಿಸ್ ಶಾಲೆ ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆ ಧರಿಸಿ ನೀಡಿದ ಪ್ರದರ್ಶನ ನೆರೆದಿದ್ದವರಲ್ಲಿರಾಷ್ಟ್ರಾಭಿಮಾನ ಹೆಚ್ಚಿಸಿತು. ‘ನಮೋ ನಮೋ ಭಾರತಾಂಭೆ’ ಗೀತೆಗೆ ಚೇತನಾ ಪ್ರೌಢಶಾಲೆ ಮಕ್ಕಳು ಕುಣಿದು ಕುಪ್ಪಳಿಸಿದರು. ವಿದ್ಯಾರ್ಥಿನಿಯರು ರಾಜ್ಯದ ವಿವಿಧ ಭಾಗ, ಪ್ರದೇಶಗಳಲ್ಲಿ ತೊಡುವ ವಿಶಿಷ್ಟ ಉಡುಪಿನೊಂದಿಗೆ ನೃತ್ಯ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಭರತನಾಟ್ಯ, ಯಕ್ಷಗಾನ ಪ್ರದರ್ಶಿಸಿದರು.

ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಯರ ನೃತ್ಯ ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಭಾರತ ಮಾತೆಯ ಭಾವಚಿತ್ರ ಹಿಡಿದು ಸಾಗಿದರು. ನೃತ್ಯದ ಕೊನೆಯಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ವಿದ್ಯಾರ್ಥಿನಿಯರು ಹಾಲಿನ ಅಭಿಷೇಕ ಮಾಡಿದರು. ಚೈತನ್ಯ ಟೆಕ್ನೋ ಶಾಲೆಯ 500 ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಯೋಧ, ಸ್ವಾತಂತ್ರ್ಯ ಹೋರಾಟಗಾರರ ವೇಷ ತೊಟ್ಟಿದ್ದರು.

ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳ ಕಾಲ ವಿಜೃಂಭಣೆಯಸ್ವಾತಂತ್ರ್ಯೋತ್ಸವ ಆಚರಣೆಗೆ ಸಾಧ್ಯವಾಗಿರಲಿಲ್ಲ. ಈ ಬಾರಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ಆತಂಕ ಮರೆತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಲ್ಯಾಪ್‌ಟ್ಯಾಪ್‌ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT